ದಾವಣಗೆರೆ

ಮನಸ್ಸು ಅರಳಿಸುವ ಕಲೆ, ಸಾಹಿತ್ಯ ಅವಶ್ಯ

Published On :

ದಾವಣಗೆರೆ:  ದೇಶದ ಶ್ರೀಮಂತ ಸಂಸ್ಕೃತಿ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಮನಸ್ಸನ್ನು ಅರಳಿಸುವ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ರೂಪಾ ಹಾಸನ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಸಭಾಂಗಣದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 2ನೇ ದಾವಣಗೆರೆ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಜಾಗತೀಕರಣ ಪ್ರಭಾವದಿಂದಾಗಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಲಕ್ಷಣ ಅರ್ಥ ಪಡೆದುಕೊಳ್ಳುತ್ತಿವೆ. ಪ್ರತಿಯೊಂದರಲ್ಲೂ ಅದ್ಧೂರಿ, ಆಡಂಬರ, ಹಣ, ರೋಚಕತೆ ಮನೆ ಮಾಡುತ್ತಿದೆ. ಸಂಸ್ಕೃತಿ ಎಂಬುದು ಮಾರುಕಟ್ಟೆ ಆಧರಿತ ಉತ್ಪನ್ನವಾಗಿ ಮಾರ್ಪಡುತ್ತಿದೆ. ಮಾನವೀಯ ಸಂಬಂಧಗಳನ್ನೂ ಹಣದಿಂದ ಅಳೆಯುವ ವಿಕೃತಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮಗಳು ಅತಿ ಅಗತ್ಯ ಎಂದರು.
ಸಮೂಹ ಮಾಧ್ಯಮಗಳು ಸಮಾಜದಲ್ಲಿ ನಿರ್ಮಿಸುತ್ತಿರುವ ಅಭಿರುಚಿ ಆತಂಕಕಾರಿಯಾಗಿದೆ. ಮನರಂಜನೆ ಹೆಸರಿನಲ್ಲಿ ಕ್ರೌರ್ಯ, ಅಶ್ಲೀಲತೆಯನ್ನು ಜನರ ಮನಸ್ಸಿನ ಮೇಲೆ ಹೇರಲಾಗುತ್ತಿದೆ. ಜನರ ಪ್ರಜ್ಞೆ ವಿರೂಪಗೊಳಿಸುತ್ತಿರುವ ಸಿನಿಮಾ, ದೃಶ್ಯ ಮಾಧ್ಯಮಗಳು ಸಮಾಜವನ್ನು ಅಧೋಗತಿಗೆ ಕೊಂಡೊಯ್ಯುತ್ತಿವೆ. ಮಕ್ಕಳಲ್ಲಿ ಬುದ್ಧಿವಂತಿಕೆ ತುಂಬುತ್ತಿರುವ ಶಿಕ್ಷಣ ವ್ಯವಸ್ಥೆ ಹೃದಯವಂತಿಕೆ ಜಾಗೃತಗೊಳಿಸುವಲ್ಲಿ ವಿಫಲವಾಗಿದೆ. ಈ ಆಘಾತಕಾರಿ ಸನ್ನಿವೇಶದಲ್ಲಿ ವಿಕೃತಿಯಿಂದ ಜಡಗೊಂಡಿರುವ ಅಂತಃಕರಣ ಎಚ್ಚರಗೊಳಿಸುವ ಕಾರ್ಯಗಳು ಆಂದೋಲನ ರೂಪದಲ್ಲಿ ಜರುಗಬೇಕು ಎಂದರು.
ಸುಸಂಸ್ಕೃತ ನಾಗರಿಕತೆ: ಮನುಷ್ಯನ ಮನಸ್ಸನ್ನು ಅರಳಿಸಬಲ್ಲ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸುಸಂಸ್ಕೃತ ನಾಗರಿಕತೆಗೆ ಪೂರಕವಾಗಿವೆ. ಆಯಾ ಕಾಲಘಟ್ಟದಲ್ಲಿನ ಸಮಾಜದ ನೋವು- ನಲಿವು ಪ್ರತಿಬಿಂಬಿಸುವಲ್ಲಿ ಜಾನಪದ ಕಲೆಯ ಪ್ರಭಾವ ಅಪಾರ. ಮೃಗೀಯ ಮನುಷ್ಯನ ಮಾನವೀಯತೆ ಎಚ್ಚರಗೊಳಿಸುವ ಕೆಲಸವನ್ನು ಕಲೆ, ಸಾಹಿತ್ಯ ಅನಾದಿ ಕಾಲದಿಂದಲೂ ಮಾಡುತ್ತಿದೆ. ಸಮಾಜವನ್ನು ಪ್ರೀತಿಯಿಂದ ಸರಿದಾರಿಗೆ ಕೊಂಡೊಯ್ಯುವ ಸಕಾರಾತ್ಮಕ ಪ್ರಯತ್ನ ಇದೇ ರೀತಿ ಸದಾ ಮುಂದುವರಿಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿ.ಎಸ್. ರುದ್ರೇಶ, ಸಿನಿಮಾ, ಟಿವಿ ಮಾಧ್ಯಮಗಳಿಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ಶಕ್ತಿ ಇದೆ. ಆದರೆ, ಪ್ರಸ್ತುತ ಮಾಧ್ಯಮಗಳು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಅದರ ಪರಿಣಾಮವಾಗಿ ದಿನನಿತ್ಯ ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಪ್ರಕರಣ ನೋಡುತ್ತಿದ್ದೇವೆ ಎಂದು ದೂರಿದರು.
ವಿವಿಧ ಕಲಾ ತಂಡಗಳು ಗೀತಗಾಯನ, ಭರತನಾಟ್ಯ, ಸಮೂಹ ನೃತ್ಯ, ಸುಗಮ ಸಂಗೀತ, ಕಂಸಾಳೆ ನೃತ್ಯ, ನಾಟಕ ಪ್ರದರ್ಶನ ನಡೆಸಿಕೊಟ್ಟವು.
 ಆವಿಷ್ಕಾರದ ರಾಜ್ಯ ಸಮಿತಿ ಸದಸ್ಯ ಟಿ. ರವಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆಯ ಮಂಜುನಾಥ ಕುಕ್ಕವಾಡ, ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಜ್ಯೋತಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ ಪರಶುರಾಮ, ರಾಘವೇಂದ್ರ ನಾಯಕ್, ಸುಮಾ ವಿ.ಮಠದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.