ದಾವಣಗೆರೆ

ಬಡವ ಸಬಲನಾಗದೆ ಉದ್ಧಾರ ಅಸಾಧ್ಯ

Published On :

ದಾವಣಗೆರೆ: ದೇಶದ ಆತ್ಮ ಆಗಿರುವ ಹಳ್ಳಿಗಾಡು ಜನರು, ಬಡವರನ್ನು ಸಬಲರನ್ನಾಗಿಸುವ ಯೋಜನೆಗಳು ಅನುಷ್ಠಾನಗೊಳಿಸದ ಹೊರತು ಲಕ್ಷಾಂತರ ಕೋಟಿ ಗಾತ್ರದ ಬಜೆಟ್ ಮಂಡಿಸಿದರೂ ದೇಶ ಉದ್ಧಾರವಾಗದು ಎಂಬ ಸತ್ಯವನ್ನು ಕೇಂದ್ರ ಅರ್ಥ ಸಚಿವರು ಅರ್ಥ ಮಾಡಿಕೊಳ್ಳಲಿ ಎಂದು ಹಿರಿಯ ಕಾನೂನು ತಜ್ಞ ಪ್ರೊ. ಎಸ್.ಎಚ್. ಪಟೇಲ್ ಹೇಳಿದರು.
ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಅರ್ಥಶಾಸ್ತ್ರ ವಿಭಾಗ ಏರ್ಪಡಿಸಿದ್ದ ಕೇಂದ್ರ ಬಜೆಟ್ 2013- 14ರ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆತ್ಮವಿರುವುದೇ ಹಳ್ಳಿಗಳಲ್ಲಿ. ಅಂತಹ ಹಳ್ಳಿಗಾಡು ಜನರು, ಬಡವರನ್ನು ಸಬಲೀಕರಣಗೊಳಿಸದ ಹೊರತು ದೇಶ ಅಭಿವೃದ್ಧಿ ಹೊಂದದು ಎಂದರು.
ಗಮನ ಹರಿಸಿ: ಸಮಾಜದ ಅಶಕ್ತರು, ಬಡವರ ಸ್ಥಿತಿಗತಿ ಆಳುವವರು ಅರಿಯದ ಹೊರತು, ಸಾಮಾಜಿಕ ನ್ಯಾಯ ದೊರಕಿಸುವ ಕೆಲಸಕ್ಕೆ ಕೈ ಹಾಕಬಾರದು. ಅರ್ಥ ಸಚಿವರು ಬಜೆಟ್ ಮಂಡಿಸುವ ಮುನ್ನ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಪತ್ರಿಕಾ ರಂಗವನ್ನೂ ಮೀರಿಸಿ, ಬೆಳೆದ ಸಮಾಜದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾಗಿತ್ತು ಎಂದು ತಿಳಿಸಿದರು.
ನೋವಿನ ಸಂಗತಿ: ಕೇಂದ್ರ ಅರ್ಥ ಸಚಿವ ಚಿದಂಬರಂ ಮಂಡಿಸಿದ ಬಜೆಟ್ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಬಡವರವನ್ನು ಸಬಲರಾಗಿಸುವ ಯಾವುದೇ ಪ್ರಯತ್ನ ಬಜೆಟ್‌ನಲ್ಲಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ ಎಂದು ತಿಳಿಸಿದರು.
ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ ಮಾತನಾಡಿ, ಅಮೆರಿಕದ ಆರ್ಥಿಕ ನೀತಿ ಮೇಲೆ ಕರಿನೆರಳು ಬಿದ್ದಿದೆ. ಈ ಸ್ಥಿತಿಯಲ್ಲಿ ದೇಶಕ್ಕಾಗಿ ದುಡಿಯುವ ರೈತರಿಗೆ ಸಿಗಬೇಕಾದ ಸ್ಥಾನಮಾನ, ಅವಕಾಶ, ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕೃಷಿ ಕ್ಷೇತ್ರದಲ್ಲಿ ಜಗತ್ತು ಬೆರಗಾಗುವಷ್ಟು ಸಾಧನೆ ಭಾರತದಿಂದಾಗಿದೆ. ಆಹಾರ ಸ್ವಾವಲಂಬನೆ ಸಾಧಿಸಿದ್ದರೂ, ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ ಶೇ.40ರಷ್ಟು ಇರುವುದು ದುರಂತ ಎಂದರು.
ಮಾಸಬ ಕಾಲೇಜು ಪ್ರಾಚಾರ್ಯ ಮಹಮ್ಮದ್ ಹಬೀಬುಲ್ಲಾ ಅಧ್ಯಕ್ಷತೆ ವಹಿಸಿದ್ದರು. ದಾವಿವಿ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಬಿ. ರಂಗಪ್ಪ, ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಕೆ. ಹನುಮಂತಪ್ಪ ಮತ್ತಿತರರು ವೇದಿಕೆಯಲ್ಲಿದ್ದರು. ಸೈಯೀದಾಬಾನು, ಡಿ. ಶ್ವೇತಾ, ಚೈತ್ರಾ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.