ದಾವಣಗೆರೆ

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ

Published On :

ಹರಿಹರ: ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬೆಸ್ಕಾಂ ಕಚೇರಿಯ ಬಳಿ ಪ್ರತಿಭಟನೆ ನಡೆಸಿ ಕೆಲ ಕಾಲ ಕಚೇರಿಯ ಬಾಗಿಲು ಮುಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯ ಸಂಚಾಲಕ ಹೆಚ್. ಓಂಕಾರಪ್ಪ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಈ ಹಿಂದೆ 6 ಗಂಟೆಗಳ ಕಾಲ ತ್ರೀಫೇಸ್ ಹಾಗೂ 6 ಗಂಟೆಗಳ ಕಾಲ 2 ಫೇಸ್ ವಿದ್ಯುತ್ ನೀಡುವ ಭರವಸೆ ನೀಡಿತ್ತು. ಆದರೆ ಇದ್ದಕ್ಕಿದ್ದಂತೆ ಕರ ಪತ್ರ ಹೊರಡಿಸಿದ ಅಧಿಕಾರಿಗಳು ಹಗಲಿನಲ್ಲಿ 3 ಫೇಸ್ ಹಾಗೂ ರಾತ್ರಿ ವೇಳೆಯಲ್ಲಿ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ರೈತರು ಬೆಳೆಗೆ ನೀರು ಹರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
12 ಗಂಟೆ ವಿದ್ಯುತ್ ನೀಡಿ: ಪ್ರತಿದಿನ 12 ಗಂಟೆಗಳ ಕಾಲ ವಿದ್ಯುತ್ ನೀಡುವುದಾಗಿ ಕಳೆದ ಜನವರಿಯಲ್ಲಿ ಭರವಸೆ ನೀಡಿದ್ದರು. ಇದನ್ನು ನಂಬಿದ ತಾಲೂಕಿನ ರೈತರು ಬತ್ತ ಸೇರಿದಂತೆ ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಆದರೆ ಈಗ ಇದ್ದಕಿದ್ದಂತೆ ವಿದ್ಯುತ್ ಕಡಿತಗೊಳಿಸುವ ನಿರ್ಧಾರದಿಂದ ರೈತರು ಇದುವರೆ ಖರ್ಚು ಮಾಡಿರುವ ಸಾವಿರ ರು. ಮಣ್ಣು ಪಾಲಾಗುತ್ತದೆ ಎಂದರು.
ಸ್ಥಳಕ್ಕೆ ಆಗಮಿಸಿ ಮಾತನಾಡಿದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ರುದ್ರಪ್ಪ, ರಾಜ್ಯದಲ್ಲಿ ಇರುವ ವಿದ್ಯುತ್ ಪ್ರಮಾಣವನ್ನು ಪರಿಗಣಿಸಿ ಸರ್ಕಾರ ನೂತನ ವಿದ್ಯುತ್ ಪೂರೈಕೆ ನೀತಿಯನ್ನು ಜಾರಿಗೆ ತಂದಿದೆ. ಅದನ್ನು ನಿರ್ವಹಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯ ಎಂದು ರೈತರ ಮನವೊಲಿಕೆಗೆ ಪ್ರಯತ್ನಿಸಿದರು.
ಸತ್ಯಾಗ್ರಹದ ಎಚ್ಚರಿಕೆ: ಇದನ್ನು ಒಪ್ಪದ ರೈತರು, ಜಿಲ್ಲೆಯ ಎರಡೂ ಮಂತ್ರಿಗಳ ಬಳಿ ರೈತರೊಂದಿಗೆ ಇಂದೇ ತೆರಳಿ ಮನವಿ ಮಾಡಲಾಗುವುದು. ಇದಕ್ಕೆ ಸಹಕರಿಸದೇ ಇದ್ದಲ್ಲಿ ನಾಳೆಯಿಂದ ಬೆಸ್ಕಾಂ ಕಚೇರಿಯ ಆವರಣದಲ್ಲಿ ನಿರಂತರ ಸತ್ಯಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಪಂಚಾಯತಿ ಸದಸ್ಯ ಡಿ. ಕುಮಾರ ಸಂಘದ ಪ್ರಮುಖರಾದ ಪ್ರಭುಗೌಡ, ದೊಗಳ್ಳಿ ಸಿದ್ದಪ್ಪ, ಶಂಭುಲಿಂಗಪ್ಪ, ಮಹೇಶ್ವರಪ್ಪ ದೊಗ್ಗಳ್ಳಿ, ಬಸವರಾಜಪ್ಪ ಗರಡಿಮನೆ, ಬಿ. ಕರಿಬಸಪ್ಪ, ಕತ್ತಲಗೆರೆ ಬಸವರಾಜಪ್ಪ, ಶಾವಿಗೆ ಬಸಣ್ಣ,ರಂಗನಾಥ ರೆಡ್ಡಿ, ಡಿ.ವಿ. ರವಿ, ಡಿ. ಉಮೇಶ, ಡಿ. ಶಾಮಣ್ಣ, ಡಿ.ಕೆ. ಉಮೇಶ, ಜಿ. ಮಂಜುನಾಥ, ಜಿ. ಬಸವನಗೌಡ, ಕೆ.ಬಿ. ವೀರಣ್ಣ, ಸಂಜೀವರೆಡ್ಡಿ, ಜಿ.ಬಿ. ಕೊಟ್ರೇಶ್, ಕೆ.ಜಿ. ಶಿವನಗೌಡ, ಟಿಡಿ. ರಾಜು, ಶಿವರಾಂ ರೆಡ್ಡಿ, ಮಲ್ಲಿಕಾರ್ಜುನಪ್ಪ, ಬಸಣ್ಣ, ಜಗನ್ನಾಥ, ಹೊರಟ್ಟಿ ವೀರಣ್ಣ ಹಾಗೂ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.