ಸರ್ಕಾರಿ ಶಾಲೆ ಕಡೆಗಣನೆ ಸಲ್ಲದು
ದಾವಣಗೆರೆ: ಖಾಸಗಿ ಶಾಲಾ- ಕಾಲೇಜಿಗಿಂತ ಉತ್ತಮ ಸಾಧನೆಯನ್ನು ಮಾಡಲು ಸರ್ಕಾರಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕರು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. . ರವೀಂದ್ರನಾಥ ಕರೆ ನೀಡಿದ್ದಾರೆ.
ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ, ಕಾಲೇಜುಗಳು ಯಾವುದೇ ಖಾಸಗಿ ಸಂಸ್ಥೆಗಳ ಶಾಲಾ- ಕಾಲೇಜಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ನೀವೆಲ್ಲರೂ ನಿರೂಪಿಸಬೇಕು ಎಂದರು.
ಉತ್ತಮ ಸಾಧನೆಯಾಗಲಿ: ಸರ್ಕಾರಿ ಶಾಲಾ- ಕಾಲೇಜುಗಳ ಬಗ್ಗೆ ಉದಾಸೀನ ಮನೋಭಾವ ಕೈಬಿಡಬೇಕು. ಸರ್ಕಾರಿ ಶಾಲೆ, ಕಾಲೇಜು ಎಂಬುದಾಗಿ ಹೀಗಳೆಯುವುದನ್ನು ನಿಲ್ಲಿಸಿ. ಇಂತಹ ಎಲ್ಲಾ ಮನೋಭಾವವನ್ನು ತೊಲಗಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳು ಖಾಸಗಿ ಸಂಸ್ಥೆಗಳಿಗಿಂತ ಉತ್ತಮ ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ನಿಮ್ಮಿಂದ ಮೂಡಿ ಬರಬೇಕು ಎಂದು ತಿಳಿಸಿದರು.
ಜನರಲ್ಲೂ ಸರ್ಕಾರಿ ಶಾಲಾ- ಕಾಲೇಜು ಬಗ್ಗೆ ತಪ್ಪು ಕಲ್ಪನೆ ಇದೆ. ಕೇವಲ ಖಾಸಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಾರೆಂಬ ಭ್ರಮೆ ಇದೆ. ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಅತ್ಯುತ್ತಮ ಶಿಕ್ಷಕರು, ಬೋಧಕರು ಇದ್ದಾರೆ. ಅಂತಹ ಬುದ್ಧಿವಂತರು ತಮ್ಮ ಬುದ್ಧಿವಂತಿಕೆಯನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕೀರ್ತಿ ತನ್ನಿ: ಖಾಸಗಿ ಶಾಲೆಗಳಿಗೆ ಹೋಗಿ ಪಾಲಕರು ತಮ್ಮ ಮಕ್ಕಳಿಗೆ ಪ್ರವೇಶ ನೀಡುವಂತೆ ಬೇಡಿಕೊಳ್ಳುತ್ತಾರೆ. ಇಂತಹ ವಿಚಾರಗಳನ್ನು ಅರಿತು, ಸುಮಾರು 1 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಾಲೇಜನ್ನು ಇಲ್ಲಿ ಸ್ಥಾಪಿಸಲಾಗಿದೆ. ಉತ್ತಮ ಎನ್ನುವುದಕ್ಕಿಂತ ಬುದ್ಧಿವಂತ ಶಿಕ್ಷಕರು, ಬೋಧಕರು ಇಲ್ಲಿದ್ದೀರಿ. ಇಂತಹವರ ಜ್ಞಾನದ ಸದುಪಯೋಗ ಪಡೆಯುವ ಮೂಲಕ ಮಕ್ಕಳು ಉತ್ತಮ ಸಾಧನೆ ಮಾಡಿ, ಶಾಲೆ- ಕಾಲೇಜು, ಜಿಲ್ಲೆಗೆ ಕೀರ್ತಿ ತರುವಂತಾಗಬೇಕು ಎಂದು ಸಲಹೆ ನೀಡಿದರು.
ಈ ಕಾಲೇಜಿಗೆ ಎಲ್ಲಾ ಅಗತ್ಯತೆ ಪೂರೈಸಿದ್ದೇವೆ. ಇನ್ನೂ ಯಾವುದಾದರೂ ಕೊರತೆ ಇದ್ದಲ್ಲಿ ಅವನ್ನು ಭರಿಸಲಾಗುವುದು. ಈಗ ಕಲ್ಪಿಸಿದ ಸೌಲಭ್ಯ ಸದ್ಭಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಪಾಲಕರೂ ಸರ್ಕಾರಿ ಶಾಲೆ, ಕಾಲೇಜು ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸನ್ಮಾನಿತರಾದ ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಜಿ.ಬಿ. ಚಂದ್ರಶೇಖರಪ್ಪ ಮಾತನಾಡಿ, ಖಾಸಗಿ ಶಾಲಾ- ಕಾಲೇಜಿನತ್ತಲೇ ಪಾಲಕರು ಮುಖ ಮಾಡುತ್ತಿರುವುದು ಸರಿಯಲ್ಲ. ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ರೀತಿಯಿಂದಾಗಿಯೇ ಸಮಾಜದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿವೆ. ಅಂತಹ ಸಂಸ್ಥೆಗಳಲ್ಲಿ ಕೇವಲ ಅಂಕ ಗಳಿಕೆಯ ಶಿಕ್ಷಣ ಮಾತ್ರ ನೀಡುತ್ತಿದ್ದು, ನೈತಿಕ ಶಿಕ್ಷಣದಿಂದ ಮಕ್ಕಳನ್ನು ದೂರ ಉಳಿಯುವಂತಾಗಿರುವುದೇ ಇಷ್ಟಕ್ಕೆಲ್ಲಾ ಕಾರಣ ಎಂದರು.
ಮಕ್ಕಳನ್ನು ಟಿವಿ, ಮೊಬೈಲ್ನಿಂದ ವಿದ್ಯಾರ್ಥಿಗಳು ಹೊರ ಬಂದು, ತಮ್ಮ ಜ್ಞಾನಾಭಿವೃದ್ಧಿಗೆ, ವಿದ್ಯಾರ್ಜನೆಗೆ ಪೂರಕವಾದ ಗ್ರಂಥಾಲಯಗಳಿಗೆ ಹೋಗಿ, ಓದುವಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೇಯರ್ ಸುಧಾ ಜಯರುದ್ರೇಶ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಡಿ.ಕೆ. ಶಿವಕುಮಾರ, ಬಿಇಓ ಬಿ.ಸಿ. ಸಿದ್ದಪ್ಪ, ಗುತ್ತಿಗೆದಾರ ನಾಗರಾಜ, ಪ್ರಾಚಾರ್ಯ ಎಂ. ಕರಿಸಿದ್ದಪ್ಪ, ಉಪ ಪ್ರಾಚಾರ್ಯ ರಾಮಕೃಷ್ಣಪ್ಪ, ರಾಜಣ್ಣ, ಬೋಧಕ- ಬೋಧಕೇತರ ಸಿಬ್ಬಂದಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಇದ್ದರು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳು, ಕ್ರೀಡಾ, ಸಾಂಸ್ಕೃತಿಕ, ಚರ್ಚಾ ಸ್ಪರ್ಧೆ ಮತ್ತಿತರೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಚಿವ ರವೀಂದ್ರನಾಥ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

