ದಾವಣಗೆರೆ

ಸಂಸ್ಕೃತಿಯಿಂದ ವೈವಿಧ್ಯಮಯ ಬದುಕು

Published On :

ಸಿರಿಗೆರೆ: ಇಂದಿನ ದಿನಗಳಲ್ಲಿ ಧರ್ಮ ಮತ್ತು ಸಂಸ್ಕೃತಿಯ ಅಂಶಗಳು ಒಂದರೊಳಗೊಂದು ಅಂತರ್ಗತವಾಗಿ ಸೇರಿವೆ. ಧರ್ಮ ದೇವರನ್ನು ಅರಿತುಕೊಳ್ಳುವ ಮಾಧ್ಯಮವಾದರೆ, ಸಂಸ್ಕೃತಿ ಮನುಷ್ಯನಿಗೆ  ವೈವಿಧ್ಯಮಯ ಬದುಕನ್ನು ಕುರಿತು ಕಲಿಸುತ್ತದೆ ಎಂದು ಲೇಖಕ ಬಿ.ಎಂ. ಹನೀಫ್ ಹೇಳಿದರು.
ವಿಭಿನ್ನ: ಸಿರಿಗೆರೆಯಲ್ಲಿ ಶನಿವಾರ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲ ದಿನದ ಸಮಾರಂಭದಲ್ಲಿ ಧರ್ಮ ಮತ್ತು ಸಂಸ್ಕೃತಿ ವಿಷಯ ಕುರಿತು ಮಾತನಾಡಿದ ಅವರು,
ಸಂಸ್ಕೃತಿಯ ಅಂಶಗಳು ಪ್ರಾದೇಶಿಕವಾಗಿ ವಿಭಿನ್ನವಾಗಿರುತ್ತದೆ. ಅವು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಮನುಷ್ಯನನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಕೃತಿ ವಿಚಾರಗಳು ಧರ್ಮದ ಚೌಕಟ್ಟಿನಲ್ಲಿ ಹೊರಹೊಮ್ಮುತ್ತಿರುತ್ತವೆ ಎಂದರು.
ಸುಕೃತಿ, ವಿಕೃತಿ: ಸಂಸ್ಕೃತಿ ವಿಚಾರಗಳನ್ನು ಅನುಸರಿಸುವ ವಿಷಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ ವಿಭಿನ್ನವಾಗಿರುವುದು ಸಹಜ. ಇವೆರಡು ಪರಸ್ಪರ ಪೂರಕವಾದ ರೀತಿಯಲ್ಲಿ ಬದುಕನ್ನು ತೆಗೆದುಕೊಂಡರೆ ಮನುಷ್ಯನ ಬದುಕಿಗೊಂದು ಅರ್ಥವಿರುತ್ತದೆ. ಮನುಷ್ಯನ ಸುಕೃತಿ, ವಿಕೃತಿಯೊಳಗೆ ಸೌಂದರ್ಯ ಅಡಗಿರುತ್ತದೆ. ಮನುಷ್ಯನನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆ ಧರ್ಮದಿಂದ ಸಾಧ್ಯವಾಗಬೇಕು ಎಂದು ತಿಳಿಸಿದರು.
ಅಹಿತಕರ ಘಟನೆ: ನಿವೃತ್ತ ಪ್ರಾಧ್ಯಾಪಕ ಪ್ರೊ. ಇಟಗಿ ಈರಣ್ಣನವರು ಬದುಕಿನ ಪರ್ಯಾಯ ಮಾರ್ಗಗಳು ಎಂಬ ವಿಷಯದ ಬಗ್ಗೆ ಮಾತನಾಡಿ, ಇವತ್ತಿನ ದಿನಗಳಲ್ಲಿ ಧರ್ಮ ಸರಿಯಾದ ಮಾರ್ಗವನ್ನು ತೋರಿಸುತ್ತದೆ ಎಂದು ನಂಬಿದ್ದರೂ ಮನುಷ್ಯನೂ ನೆಮ್ಮದಿಯಾಗಿ ಬದುಕುವುದಕ್ಕೆ ಸಾಧ್ಯವಾಗಿಲ್ಲ. ಹಲವು ರೀತಿಯ ಮತೀಯ ಗಲಭೆಗಳನ್ನು ಹುಟ್ಟು ಹಾಕಿ ಅವನ ನೆಮ್ಮದಿಯನ್ನೇ ಹಾಳುಮಾಡುತ್ತಿವೆ.
ತಿಳಿವಳಿಕೆಯ ಕೊರತೆ: ಆದರೆ, ಎಲ್ಲೆಡೆ ಧರ್ಮಗಳು ನಾವೇ ಶ್ರೇಷ್ಟ ಅನ್ನುವ ಅಹಂಕಾರದಲ್ಲಿ ಮೆರೆಯುತ್ತಿವೆ. ಜನರ ಭಾವನೆಗಳಲ್ಲಿ ಉದ್ವೇಗ ಉಂಟುಮಾಡಿ ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ಕಾರಣವಾಗಿದೆ. ಇಂದು ಮನುಷ್ಯ ಆನಂದವಾಗಿರುವುದಕ್ಕೆ ಸರಿಯಾದ ಮಾರ್ಗದರ್ಶನ, ತಿಳಿವಳಿಕೆಯ ಕೊರತೆ ಬಹುವಾಗಿ ಎಲ್ಲೆಡೆ ಕಾಣುತ್ತಿದೆ. ಪರ್ಯಾಯವಾದ ಮಾರ್ಗಗಳನ್ನು ಕಂಡುಕೊಳ್ಳಲು ಹೋಗಿ ನಾವು ಯೋಗ, ಧ್ಯಾನ, ಹಾಗೂ ಸಾತ್ವಿಕ ಆಹಾರ ಸೇವನೆಯಿಂದ ದೂರವಾಗುತ್ತಿದ್ದೇವೆ ಎಂದರು.
ಕಳಂಕ: ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಎಂದರೆ ಸನ್ನಡತೆ, ಸದಾಚಾರ ಮನುಷ್ಯ ತನ್ನ ಆಚಾರ ವಿಚಾರಗಳಲ್ಲಿ ಧರ್ಮದ ಸಂಗತಿಗಳನ್ನು ಅಳವಡಿಸಿಕೊಳ್ಳದೆ ತನ್ನತನ ಕಳೆದುಕೊಂಡು ಮೃಗವಾಗಿ ವರ್ತಿಸುತ್ತಿದ್ದಾನೆ. ಇದಕ್ಕೆ ಕಾರಣ ಇಂದು ಧರ್ಮದಲ್ಲಿ ಶ್ರದ್ಧೆ, ನಂಬಿಕೆ ಕಡಿಮೆಯಾಗಿದೆ. ಇದು ಮನುಷ್ಯ ಕುಲಕ್ಕೆ ಕಳಂಕ ಎಂದು ವಿಷಾದ ವ್ಯಕ್ತಪಡಿಸಿದರು.
ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಯಾವುದೇ ವೇದಿಕೆಗಳಿದ್ದರೂ ಅವುಗಳನ್ನು ರಾಜಕಾರಣಿಗಳು ರಾಷ್ಟ್ರೀಕರಣಗೊಳಿಸಿಕೊಂಡಿದ್ದಾರೆ. ಅವರು ಭಾಷಣ ಮಾಡದೇ ಇರುವ ವೇದಿಕೆಗಳು ಇಂದು ಅಪರೂಪವಾಗುತ್ತಿವೆ. ಅವರು ಭಾಷಣ ಮಾಡಿದರೇ ಅವುಗಳಿಗೊಂದು ಅರ್ಥಬರುತ್ತದೆನ್ನುವ ಮನೋಭಾವ ಜನರಲ್ಲಿ ಬೆಳೆದುಬಂದಿದೆ ಎಂದು ತಿಳಿಸಿದ ಶ್ರೀಗಳು, ಭ್ರಷ್ಟತೆ ಎನ್ನುವುದು ರಾಜಕಾರಣಿಗಳಿಗಷ್ಟೇ ಸೀಮಿತವಾಗಿಲ್ಲ. ಅದು ಇಂದು ಸರ್ವವ್ಯಾಪಿಯಾಗಿದೆ.
ಜನಸಾಮಾನ್ಯನಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರೂ ಅದರಲ್ಲಿ ಭಾಗಿಗಳಾಗಿದ್ದಾರೆ. ಇದು ರಾಷ್ಟ್ರ ಜೀವನದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.