ದಾವಣಗೆರೆ

ಡಿನೋಟಿಫೈ ವಿರುದ್ಧ ಕಾನೂನು ಸಮರ

Published On :

ದಾವಣಗೆರೆ: ದಾವಣಗೆರೆ ಪಾಲಿಕೆಯ ಕೋಟ್ಯಂತರ ರು. ಅವ್ಯವಹಾರ, ಶಾಬನೂರು ಬಳಿ ಪಾರ್ಕ್‌ಗಾಗಿ ಮೀಸಲಿಟ್ಟಿದ್ದಂತಹ 67 ಎಕರೆ ಜಮೀನು ಡಿನೋಟಿಫೈ ಪ್ರಕರಣದ ಬಗ್ಗೆ ನಕಲಿ ಛಾಪಾ ಕಾಗದ ಹಗರಣ ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ವಿನಾಯಕ ಟಿನೇಕರ್ ಜೊತೆಗೂಡಿ ಕಾನೂನು ಹೋರಾಟವನ್ನು ನಡೆಸುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ. ತಿಪ್ಪೇಸ್ವಾಮಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತ ಟಿನೇಕರ್ ದಾವಣಗೆರೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಅವ್ಯವಹಾರ, ಭ್ರಷ್ಟಾಚಾರ, ಡಿನೋಟಿಫೈ ಬಗ್ಗೆ ನನ್ನೊಡನೆ ಚರ್ಚಿಸಿದ್ದು, ಫೆ.24ರಂದು ದಾಖಲೆ ಸಮೇತ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದರು.
ಅಪೂರ್ಣ ಮಾಹಿತಿ: ಕಳೆದ ಐದು ವರ್ಷಗಳಲ್ಲಿ 450 ಕೋಟಿ ಅನುದಾನ ಬಂದಿದ್ದರೂ, 150 ಕೋಟಿ ವೆಚ್ಚದ ಕಾಮಗಾರಿ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ತಮಗೆ ಅಪೂರ್ಣ ಮಾಹಿತಿ ನೀಡಿದ್ದಾರೆ. ಇದೂ ಸಹ ಭ್ರಷ್ಟಾಚಾರವನ್ನು ಪರೋಕ್ಷವಾಗಿ ಪಾಲಿಕೆ ಆಡಳಿತ ಯಂತ್ರವೇ ಒಪ್ಪಿಕೊಂಡಂತಾಗಿದೆ ಎಂಬುದನ್ನು ಪುಷ್ಟೀಕರಿಸುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸದೆ ತಾವು ಬಿಡುವುದಿಲ್ಲ ಎಂದು ಅವರು ಹೇಳಿದರು.
ಹಣ ದುರ್ಬಳಕೆ: 23ನೇ ವಾರ್ಡ್‌ನ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷರು ತಮ್ಮ ದೊಡ್ಡಪ್ಪ ಕಾಮ್ರೆಡ್ ಶೇಖರಪ್ಪ ಹಾಗೂ ಮಾಜಿ ಶಾಸಕ ಪಂಪಾಪತಿ, ಕಾಮ್ರೆಡ್ ಸುರೇಶ ಸಮಾಧಿ ಇರುವ ಜಾಗದಲ್ಲಿ 7.91 ಲಕ್ಷ ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಿದ್ದಾಗಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲಿ ಯಾವುದೇ ಪಾರ್ಕ್ ಅಭಿವೃದ್ಧಿಯಾಗಿಲ್ಲ, ತಂತಿ ಬೇಲಿಯನ್ನೂ ಹಾಕಿಸಿಲ್ಲ. ಕಮ್ಯುನಿಷ್ಟ್ ಪಕ್ಷವೇ ಅಲ್ಲಿಗೆ ತಂತಿಬೇಲಿ ಅಳವಡಿಸಿತ್ತು ಎಂದರು.
ಸಿಎಂ ವಿಶೇಷಾನುದಾನದಲ್ಲಿ ಆವರಗೆರೆಯಿಂದ ಬಸಾಪುರವರೆಗಿನ ರಸ್ತೆ ಅಭಿವೃದ್ಧಿಗೆ 43.93 ಲಕ್ಷ ವೆಚ್ಚ ಮಾಡಿ, 2008- 09ನೇ ಸಾಲಿನ 12ನೇ ಹಣಕಾಸು ಯೋಜನೆಯಲ್ಲಿ ಅದೇ ರಸ್ತೆಗೆ 10 ಲಕ್ಷ ಕಾಯ್ದಿರಿಸಿದ್ದು, 9 ಲಕ್ಷ ವೆಚ್ಚ ಮಾಡಿದೆ. ಆದರೆ, ಅದು ಉತ್ತಮ ಚಂದ್ ಲೇಔಟ್‌ನವರು ತಾವೇ ಮಾಡಿದ ಕಾಮಗಾರಿ ಎಂದು ಪ್ಲಾನ್‌ಗೆ ಅಪ್ರೂವಲ್ ವೇಳೆ ದೃಢೀಕರಿಸಿದ್ದಾರೆ. ಆದರೂ, ಇಲ್ಲಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ದೂರಿದರು.
ಸಮುದಾಯ ಭವನಗಳೇ ಇಲ್ಲ: ಸ್ಮಶಾನದ ದಾರಿ, ಹಳ್ಳಕ್ಕೆ ರಸ್ತೆ, ಸೇತುವೆ ನಿರ್ಮಾಣಕ್ಕೆ 6.5 ಲಕ್ಷ ಮಂಜೂರಾಗಿದ್ದು, 90 ಸಾವಿರ ಪಾವತಿಯಾದರೂ, ಕೆಲಸವಾಗಿಲ್ಲ. ಹರಳಯ್ಯ ನಗರದಲ್ಲಿ ದುರ್ಗಾಂಬಿಕಾ ಸಮುದಾಯ ಭವನ, ಬಸವನಗೌಡ ಬಡಾವಣೆಯಲ್ಲಿ ಸೇಲಾವಾಲ್ ಸಮುದಾಯ ಭವನಕ್ಕೆ 1.5 ಲಕ್ಷ, 74 ಸಾವಿರ ಬಿಲ್ ಪಾವತಿಸಿದೆ. ಆದರೆ, ಸಮುದಾಯ ಭವನವಂತೂ ಅಲ್ಲಿಲ್ಲ. ಪಾರ್ಕ್‌ಗೆ 1.59 ಲಕ್ಷ ಬಿಡುಗಡೆಯಾದರೂ, ಒಂದೇ ಒಂದು ಸಸಿ ನೆಟ್ಟು, ಆರೈಕೆ ಮಾಡಿಲ್ಲ. ಕರಿಯಮ್ಮ ಸಮುದಾಯ ಭವನಕ್ಕೆ 4.92 ಲಕ್ಷ, ಎಕೆ ಕಾಲನಿ ದುರ್ಗಾಂಬಿಕಾ ಸಮುದಾಯ ಭವನಕ್ಕೆ 4.92 ಲಕ್ಷ, 4.68 ಲಕ್ಷ ಪಾವತಿಯಾದರೂ, ಆ ಸಮುದಾಯ ಭವನಗಳೇ ಇಲ್ಲ ಎಂದು ಅವರು ವಿವರಿಸಿದರು.
ಪಾಲಿಕೆಯ 32ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್‌ನ ವಿವಿಧ ಪಾರ್ಕ್‌ಗೆ ಸೋಲಾರ್ ದೀಪದ ಹೆಸರಿನಲ್ಲಿ 2009ರಲ್ಲಿ 7.27 ಲಕ್ಷ, 2010ರಲ್ಲಿ 4.99 ಲಕ್ಷ ವೆಚ್ಚ ತೋರಿಸಲಾಗಿದೆ. ಯಾವುದೇ ಪಾರ್ಕ್ ಸೋಲಾರ್ ದೀಪ ಹೊಂದಿಲ್ಲ. ಬಾಪೂಜಿ ಆಸ್ಪತ್ರೆ ಎದುರಿನ ರಸ್ತೆ ಗುಂಡಿ ಮುಚ್ಚಲು 1.66 ಲಕ್ಷ ವೆಚ್ಚ ತೋರಿಸಲಾಗಿದೆ. ಆದರೆ, ಉತ್ತಮವಾಗಿರುವ ಆ ರಸ್ತೆಯಲ್ಲಿ ಗುಂಡಿಗಳೇ ಇಲ್ಲ. ಬಿ ಬ್ಲಾಕ್‌ನ 1ರಿಂದ 7ನೇ ಮೇನ್‌ವರೆಗೆ ಒಟ್ಟು 6.40 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎನ್ನಲಾಗಿದೆ. ಆದರೆ, ಕೆಲಸವೇ ನಡೆದಿಲ್ಲ ಎಂದು ಆರೋಪಿಸಿದರು.
ವ್ಯಾಪಕ ಭ್ರಷ್ಟಾಚಾರ: ಸಿಎಂ ವಿಶೇಷಾನುದಾನದಲ್ಲಿ 2012ನೇ ಸಾಲಿನಲ್ಲಿ ಒಟ್ಟು 1.06 ಕೋಟಿ ವೆಚ್ಚದ ಕಾಮಗಾರಿ ಇಬ್ಬರು ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ, ಕಾಮಗಾರಿ ಬಗ್ಗೆ ಪೂರ್ಣ ಮಾಹಿತಿ ನನಗೆ ನೀಡಿಲ್ಲ. ಮಕ್ಕಳ ಪಾರ್ಕ್‌ನಲ್ಲಿ 6.65 ಲಕ್ಷ ವೆಚ್ಚದ ಪಾದಚಾರಿ ರಸ್ತೆಗಾಗಿ ಹಣ ವ್ಯಯಿಸಿದೆ. ಅದು ಹೆಚ್ಚು ವೆಚ್ಚವಾಗಿದೆ. ಅಷ್ಟು ಹಣದಲ್ಲಿ ಇಡೀ ಪಾರ್ಕ್‌ನಲ್ಲಿ ಸಿಮೆಂಟ್ ಸ್ಲ್ಯಾಬ್ ಅಳವಡಿಸಲು ಅವಕಾಶವಿತ್ತು. ಗುಂಡಿ ಸರ್ಕಲ್ 1ನೇ ಮೇನ್‌ನಿಂದ ಪತ್ರಿವನ ಪಾರ್ಕ್‌ಗೆ ಕಾಪೌಂಡ್‌ಗಾಗಿ 2 ಲಕ್ಷ ವ್ಯಯಿಸಲಾಗಿದೆ. ಆದರೆ, ಹತ್ತಾರು ವರ್ಷ ಮುಂಚೆಯೇ ಅಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗಿದ್ದು. ಈ ಎಲ್ಲಾ ಅವ್ಯವಹಾರ, ಭ್ರಷ್ಟಾಚಾರದ ಬಗ್ಗೆ ಪಾಲಿಕೆ ಸದಸ್ಯರು, ಅಧಿಕಾರಿಗಳೇ ಉತ್ತರಿಸಲಿ ಎಂದು ಎಂ.ಜಿ. ತಿಪ್ಪೇಸ್ವಾಮಿ ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.