ದಾವಣಗೆರೆ

ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ: ಬಿಎಸ್‌ವೈ

Published On :

ದಾವಣಗೆರೆ: ರಾಜ್ಯದಲ್ಲಿ ಶೀಘ್ರವೇ ರಾಜಕೀಯ ಧೃವೀಕರಣವಾಗುತ್ತಿದ್ದು, ಸಚಿವರು, ಶಾಸಕರು ತಾವು ಯಾವ ಪಕ್ಷದಲ್ಲಿರಬೇಕು ಎಂಬ ಬಗ್ಗೆ ತಾವೇ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಕೆಜೆಪಿ ನೂತನ ಜಿಲ್ಲಾ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಚಿವರು, ಶಾಸಕರು ತಮ್ಮ ಸ್ಥಾನಗಳಿಗೆ ಈಗ ರಾಜೀನಾಮೆ ನೀಡಿ ಪಕ್ಷಾಂತರಗೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ರಾಜ್ಯ ರಾಜಕೀಯ ಧ್ರುವೀಕರಣವೂ ನಿಶ್ಚಿತ ಎಂದರು.
ಯಾರನ್ನೂ ಆಹ್ವಾನಿಸಿಲ್ಲ: ಬಿಜೆಪಿ ಸಚಿವರು, ಶಾಸಕರ ಪೈಕಿ ಯಾರಿಗೂ ಕೆಜೆಪಿಗೆ ಬರುವಂತೆ ಒತ್ತಡ ಹೇರಿಲ್ಲ. ಆಹ್ವಾನಿಸಿಲ್ಲ. ನಿರೀಕ್ಷೆ ಇಟ್ಟುಕೊಂಡು ಯಾರೇ ಬಂದರೂ ಕೆಜೆಪಿಗೆ ಸ್ವಾಗತಿಸುತ್ತೇನೆ. ಸಚಿವರಾದ ರಾಜುಗೌಡ, ಯೋಗೇಶ್ವರಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ಆಡಳಿತ ಪಕ್ಷದ ಅನೇಕ ಸಚಿವರು, ಶಾಸಕರು ಪಕ್ಷ ತೊರೆಯುವುದಾಗಿ ಹೇಳುತ್ತಿದ್ದಾರೆ. ಒಮ್ಮೆ ಬಿಜೆಪಿ ತೊರೆದ ನಾನು ಮತ್ತೆ ಆ ಪಕ್ಷಕ್ಕೆ ಹೋಗುವುದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.
ಅಲ್ಪಮತಕ್ಕೆ ಕುಸಿದಿದೆ: ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮುಗಿಯುತ್ತಾ ಬರುತ್ತಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮೂಹಿಕ ನಾಯಕತ್ವದ ಕೊರತೆಯಿಂದಾಗಿ ಅನೇಕರನ್ನು ಪಕ್ಷ ಕಳೆದುಕೊಳ್ಳುತ್ತಲೇ ಇದೆ. ಇಂದು ಬಿಜೆಪಿ ಬಲಹೀನವಾಗಿದ್ದು, ಚುನಾವಣೆ ನಂತರ ಆ ಪಕ್ಷದ ಪರಿಸ್ಥಿತಿ ಏನೆಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದರು.
ದಾವಣಗೆರೆ ಪಾಲಿಕೆ ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಜೆಪಿ ಪ್ರತಿಯೊಂದು ವಾರ್ಡ್‌ಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಶಕ್ತಿ, ಸಾಮರ್ಥ್ಯ, ಸೇವಾ ಮನೋಭಾವ ಇದ್ದವರನ್ನು ಗುರುತಿಸಿ, ಅವಕಾಶ ನೀಡುತ್ತೇವೆ. ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳಿಂದ ಉತ್ತಮ ಫಲಿತಾಂಶ ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದರು.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಬಿ.ಪಿ. ಹರೀಶ, ಬಿ.ಎಸ್. ಲಿಂಗರಾಜ, ಬಸವರಾಜ, ಬಿ.ಎಸ್. ಜಗದೀಶ, ವೀರೇಶ, ಅಮೀರಾಬಾನು, ವಸಂತಕುಮಾರ, ರೇಣುಕಾಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.