ದಾವಣಗೆರೆ

ಐತೀರ್ಪು ರಾಜ್ಯದ ಮರಣ ಶಾಸನ

Published On :

ದಾವಣಗೆರೆ: ಕಾವೇರಿ ನ್ಯಾಯ ಮಂಡಳಿ ಐತೀರ್ಪಿನ ಅಧಿಸೂಚನೆಯು ರಾಜ್ಯದ ಪಾಲಿಗೆ ಮರಣಶಾಸನವಾಗಿದ್ದು, ಇದಕ್ಕೆ ಕಾರಣವಾದ ರಾಜ್ಯ ಸರ್ಕಾರವನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಮಾಜಿ ಸಿಎಂ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರದ ನಿರ್ಲಿಪ್ತತೆ, ಬೇಜವಾಬ್ಧಾರಿತನವೇ ಇದಕ್ಕೆಲ್ಲಾ ಕಾರಣವಾಗಿದ್ದು, ಇಂತಹ ಸರ್ಕಾರವನ್ನು ಜನ ಕ್ಷಮಿಸುವುದಿಲ್ಲ ಎಂದರು.
ಎಲ್ಲರಿಗೂ ಅನ್ಯಾಯ: ನಾಡನ್ನು ಆಳಿದ್ದ ಯಾವೊಬ್ಬ ಮುಖ್ಯಮಂತ್ರಿಯೂ ಮಾಡದ ತಪ್ಪನ್ನು ಜಗದೀಶ ಶೆಟ್ಟರ್ ಮಾಡಿದ್ದಾರೆ. ಕಾವೇರಿ ನ್ಯಾಯ ಮಂಡಳಿ ಐತೀರ್ಪಿನ ಅಧಿಸೂಚನೆಗೆ ಅನುಮತಿ ನೀಡುವ ಮೂಲಕ ಕಾವೇರಿ ಕೊಳ್ಳದ ರೈತರಿಗಷ್ಟೇ ಅಲ್ಲ, ಕಾವೇರಿ ನೀರು ಆಶ್ರಿತ ನಗರ, ಪಟ್ಟಣ, ಗ್ರಾಮೀಣ ಜನರಿಗೂ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಐತೀರ್ಪಿನಿಂದಾಗಿ ಕಾವೇರಿ ಕೊಳ್ಳದಲ್ಲಿ ನೀರಿರಲಿ, ಬಿಡಲಿ. ತಮಿಳುನಾಡಿಗೆ ನೀರು ಬಿಡಲೇಬೇಕಾದ ದುಸ್ಥಿತಿಯನ್ನು ರಾಜ್ಯಕ್ಕೆ ತಂದೊಡ್ಡಿದೆ. ಪ್ರಧಾನಿ ಬಳಿ ನಿಯೋಗ ಹೋಗಿದ್ದಾಗ ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲೂ  ಸರ್ಕಾರ ವಿಫಲವಾಗಿದೆ. ಮಾಜಿ ಪ್ರಧಾನಿ ದೇವೇಗೌಡರಿಂದ ಏನು ಸಲಹೆ ಸಿಕ್ಕಿತೋ ಗೊತ್ತಿಲ್ಲ. ಐತೀರ್ಪಿಗೆ ಸಿಎಂ ಶೆಟ್ಟರ್ ಸಮ್ಮತಿಸುವ ಮೂಲಕ ಜನತೆಗೆ ದ್ರೋಹ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.
ಅಕ್ಷಮ್ಯ ಅಪರಾದ: ಐತೀರ್ಪಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ತಾನೇ ಅಧಿಸೂಚನೆ ಹೊರಡಿಸಲು ಲಿಖಿತವಾಗಿ ಬರೆದುಕೊಟ್ಟಿದ್ದೂ ಇದೇ ಸರ್ಕಾರ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂದು ರಾಜ್ಯದಲ್ಲಿ ನೀರಿಲ್ಲದಿದ್ದರೂ, ತಮಿಳುನಾಡಿಗೆ ನೀರು ಬಿಡುವ ಸಂದಿಗ್ಧತೆ ತಂದೊಡ್ಡಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲೇ ಇಂದು ಕುಡಿಯುವ ನೀರಿಲ್ಲ. ಬಹುತೇಕ ಡ್ಯಾಂಗಳು ಮಳೆ ಇಲ್ಲದೇ, ಖಾಲಿಯಾಗಿವೆ. ಈ ಸ್ಥಿತಿಯಲ್ಲಿ ನೆರೆ ರಾಜ್ಯಕ್ಕೆ ನೀರು ಬಿಟ್ಟರೆ, ಇಲ್ಲಿನ ಜನರ ಗತಿ ಏನು ಎಂಬ ಕನಿಷ್ಠ ಆಲೋಚನೆಯನ್ನು ಮಾಡಲಾಗದ, ವಾಸ್ತವ ದುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ರಾಜ್ಯ ಸರ್ಕಾರ ನಿರ್ಲಿಪ್ತವಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರಕ್ಕೆ ಲಿಖಿತ ಉತ್ತರ ನೀಡುವುದಕ್ಕೂ ಮುನ್ನ ರಾಜ್ಯದ ಸಂಸದರು, ನೀರಾವರಿ ತಜ್ಞರು, ನೀರು ನಿರ್ವಹಣಾ ತಜ್ಞರ, ರೈತ ಮುಖಂಡರನ್ನು ಸಂಪರ್ಕಿಸದಿರುವ ರಾಜ್ಯ ಸರ್ಕಾರವು ತನ್ನ ಬೇಜವಾಬ್ದಾರಿತನವನ್ನು ಮೆರೆದಿದೆ ಎಂದು ಅವರು ಟೀಕಿಸಿದರು.

ಐತೀರ್ಪು: ಕರವೇ ಪ್ರತಿಭಟನೆ
ದಾವಣಗೆರೆ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟ ಕಾವೇರಿ ನದಿ ನೀರು ಹಂಚಿಕ ನ್ಯಾಯ ಮಂಡಳಿಯ ನಿಲುವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಗರದ ರೈಲ್ವೆ ನಿಲ್ದಾಣದ ಬಳಿ ಬುಧವಾರ ಪ್ರತಿಭಟನೆ ನಡೆಸಿತು.
 ನಗರದ ರೈಲ್ವೆ ನಿಲ್ದಾಣದ ಬಳಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆಯನ್ನು ನಡೆಸಿದ ಕಾರ್ಯಕರ್ತರು, ಕಾವೇರಿ ನದಿ ನೀರು ಹಂಚಿಕೆ ನ್ಯಾಯ ಮಂಡಳಿ ನಿಲುವಿನಿಂದ ರಾಜ್ಯಕ್ಕೆ, ನಾಡಿನ ಜನತೆಗೆ ತೀವ್ರ ಅನ್ಯಾಯವಾಗಿದೆ ಎಂದು ಆರೋಪಿಸಿ, ತಕ್ಷಣ ಕಾವೇರಿ ನೀರು ಬಿಡುವುದನ್ನು ನಿಲ್ಲಿಸುವಂತೆ ಘೋಷಣೆ ಕೂಗಿದರು.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ  ಸ್ಥಿತಿಯಲ್ಲಿ ನೀರನ್ನು ಬಿಟ್ಟು ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿದರು. ಶಬ್ಬೀರ್ ಅಹಮ್ಮದ್, ಶಂಕರಾನಂದ, ಅಲ್ತಾಫ್, ಖಾದರ್, ಈಶ್ವರ್, ಮುರುಗೇಶ, ವಿಜಯೇಂದ್ರ, ಇಮ್ತಿಯಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.