ದಾವಣಗೆರೆ

ಛಾಪಾ ಕಾಗದದ ಷರತ್ತು ಒಪ್ಪಿದರೆ ಮತ!

Published On :

ಹರಪನಹಳ್ಳಿ: ಯುವಕರ  ಗುಂಪೊಂದು ಒಡ್ಡಿದ ಷರತ್ತುಗಳನ್ನು  ಒಪ್ಪಿ ಛಾಪಾ ಕಾಗದದ ಮೇಲೆ ಗ್ರಾಮದ ಹಿರಿಯರ  ಸಮ್ಮುಖದಲ್ಲಿ ಕರಾರು ಬರೆದುಕೊಟ್ಟು ಅಭ್ಯರ್ಥಿಗಳು ಚುನಾವಣೆ ಎದುರಿಸಿದ ಪರಿಸ್ಥಿತಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿಯಲ್ಲಿ ಭಾನುವಾರ ನಡೆದಿದೆ.  
ಫೆ.17ರಂದು ಭಾನುವಾರ ಹಾರಕನಾಳು ಗ್ರಾಮ ಪಂಚಾಯ್ತಿಯ 18 ಸ್ಥಾನಗಳಲ್ಲಿ ಎರಡು ಅವಿರೋಧ ಆಯ್ಕೆ  ಹೊರತು ಪಡಿಸಿ 16 ಸ್ಥಾನಗಳಿಗೆ ಮತದಾನಕ್ಕೆ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಚನ್ನಹಳ್ಳಿ ತಾಂಡ  ಗ್ರಾಮಕ್ಕೆ ಎರಡು ಸ್ಥಾನಗಳು ಇದ್ದವು. ಆ ಎರಡು ಸ್ಥಾನಕ್ಕೆ ಎಂಟು ಅಭ್ಯರ್ಥಿಗಳು ಸ್ಪರ್ಧಿಸಲು ಆಸಕ್ತಿ ತೋರಿದ್ದರು.
ಹಲವಾರು ವರ್ಷಗಳಿಂದ ಗ್ರಾಮ ಪಂಚಾಯ್ತಿಗೆ ಸದಸ್ಯರಾಗಿ ಆಯ್ಕೆಯಾದವರು ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದುದನ್ನು ಮನಗಂಡ ಯುವಕರ ತಂಡ ಈ ಬಾರಿ ಅಭ್ಯರ್ಥಿಗಳು ಯಾರೇ ಆಗಲಿ ಅವರಿಗೆ ಬೇಡಿಕೆ ಪಟ್ಟಿ ಇಟ್ಟು ಗೆದ್ದರೆ ಅವುಗಳನ್ನು ಈಡೇರಿಸಬೇಕು. ಹಾಗಂತ ರು. 20ರ ಛಾಪಾ ಕಾಗದದ ಮೇಲೆ ಲಿಖಿತ ರೂಪದಲ್ಲಿ ಬರೆದು ಕೊಡಬೇಕು ಎಂದು ಷರತ್ತು ವಿಧಿಸಿದರು.
ಬೇಡಿಕೆಗಳು: ಗ್ರಾಮದಲ್ಲಿ ಚರಂಡಿ ನಿರ್ಮಾಣ, ಗ್ರಂಥಾಲಯ ಆರಂಭಿಸಬೇಕು. ಸೂಕ್ತ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ಕೊಳವೆ ಬಾವಿ ದುರಸ್ತಿ, ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು, ಬೀದಿ ದೀಪ, ನಿಯಮಾನುಸಾರ ಶಾಲಾಭಿವೃದ್ಧಿ ಸಮಿತಿ ರಚನೆ ಸೇರಿದಂತೆ 25 ಬೇಡಿಕೆಗಳನ್ನು ಮುಂದಿಡಲಾಯಿತು. ಅಭ್ಯರ್ಥಿಗಳು ಅನಿವಾರ್ಯವಾಗಿ ಮರು ಮಾತನಾಡದೆ ಛಾಪಾ ಕಾಗದದ ಮೇಲೆ ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರತಿಯೊಬ್ಬರು ಪ್ರತ್ಯೇಕವಾಗಿ ಬರೆದುಕೊಟ್ಟಿದ್ದಾರೆ.  
ಗ್ರಾಮದ  ಯುವ ಮುಖಂಡ ಗೋಪಿನಾಯ್ಕ, ಚುನಾವಣೆಯಲ್ಲಿ ಯಾರೇ ಇಬ್ಬರು ಸದಸ್ಯರಾಗಿ ಆಯ್ಕೆಯಾದ ನಂತರ ಪುನಃ ಅವರಿಂದ ಗ್ರಾಮದ ಪಂಚಾಯ್ತಿ ಕಟ್ಟೆಯಲ್ಲಿ ಚುನಾವಣೆ ಪೂರ್ವದಲ್ಲಿ ಬರೆದುಕೊಟ್ಟಂತೆ ಬೇಡಿಕೆ ಈಡೇರಿಸುತ್ತೇವೆ ಎಂದು ಪ್ರಮಾಣ ಮಾಡಿಸುತ್ತೇವೆ, ಕೆಲವು ದಿನಗಳು ಕಾಯುತ್ತೇವೆ,   ಆ ನಂತರವೂ ಬೇಡಿಕೆ ಈಡೇರದಿದ್ದರೆ ಆ ಚುನಾಯಿತ ಸದಸ್ಯರ ವಿರುದ್ಧ ಹೋರಾಟಕ್ಕಿಳಿಯುತ್ತೇವೆ ಎಂದು   ತಿಳಿಸಿದ್ದಾರೆ.
ರವಿನಾಯ್ಕ, ಶಿವಕುಮಾರ, ಗಿರೀಶನಾಯ್ಕ, ಸಂತೋಷನಾಯ್ಕ, ಶಂಕರ, ಲಕ್ಷ್ಮಣ, ಹಾಲೇಶನಾಯ್ಕ ಸೇರಿದಂತೆ 35 ಯುವಕರ ಗುಂಪು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅಭ್ಯರ್ಥಿಗಳಿಗೆ ಇಂತಹ ಷರತ್ತು ವಿಧಿಸಿ ಸ್ಥಳೀಯ  ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.