ಪಾಲಿಕೆ ಗದ್ದುಗೆಗೆ ಹೋರಾಟ ಶುರು
ದಾವಣಗೆರೆ: ಸ್ಥಳೀಯ ಸಂಸ್ಥೆಗೆ ಮಾ.7ರಂದು ಚುನಾವಣೆ ಘೋಷಣೆಯಾಗುತ್ತಲೇ ರಾಜಕೀಯ ಪಕ್ಷ, ಆಕಾಂಕ್ಷಿಗಳು, ಹಾಲಿ ಜನ ಪ್ರತಿನಿಧಿ, ಕಾರ್ಯಕರ್ತರಲ್ಲಿ ಸಂಚಲನ ಉಂಟಾಗಿದ್ದು, ಯುದ್ಧಕಾಲೇ ಶಸ್ತ್ರಾಭ್ಯಾಸೇ... ಎಂಬಂತೆ ಪಕ್ಷದ ಕಚೇರಿಯನ್ನೇ ಈವರೆಗೆ ತುಳಿಯದಿದ್ದ ಮಾಜಿಗಳು ಮತ್ತೆ ಪಕ್ಷದ ಬಾಗಿಲನ್ನು ಎಡತಾಕಲಾರಂಭಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಮಾ.7ರಂದು ಸ್ಥಳೀಯ ಸಂಸ್ಥೆಗೆ ಚುನಾವಣೆ ಘೋಷಣೆ ಮಾಡುತ್ತಿದ್ದಂತೆ ದಾವಣಗೆರೆ ಪಾಲಿಕೆ 41 ವಾರ್ಡ್ಗಳಲ್ಲೂ ಮಿಂಚಿನ ಸಂಚಲನ ಉಂಟಾಗಿದೆ. ಪಾಲಿಕೆ 41 ಸದಸ್ಯರ ಪೈಕಿ ಕೆಲಸ ಮಾಡಿದವರು ಆತ್ಮವಿಶ್ವಾಸದಿಂದ ಬೀಗಿದರೆ, ವಾರ್ಡ್ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಆಡಳಿತ, ವಿಪಕ್ಷ ಸದಸ್ಯರು ಬೇರೆ ವಾರ್ಡ್ನ ಹುಡುಕಾಟಕ್ಕೆ ಪ್ರಯತ್ನ ನಡೆಸಿದ್ದಾರೆ.
27 ಹಿಂಪಡೆಯಲು ಕೊನೆ ದಿನ: ಫೆ.23 ನಾಮಪತ್ರ ಸಲ್ಲಿಸಲು ಅಂತಿಮ ದಿನ. ಫೆ.25ಕ್ಕೆ ನಾಮಪತ್ರ ಪರಿಶೀಲನೆ, ಫೆ.27ಕ್ಕೆ ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಕಡೇ ದಿನ. ಮಾ.7ರಂದು ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳಲ್ಲಿ ಸಂಚಲನ ಉಂಟಾಗುತ್ತಿದೆ. ಎಲ್ಲಾ ಆಕಾಂಕ್ಷಿಗಳು ಆಯಾ ಪಕ್ಷದ ಮುಖಂಡರ ಕೃಪಾಕಟಾಕ್ಷ ಗಳಿಸಲು ಕಸರತ್ತು ಆರಂಭಿಸಿದ್ದಾರೆ. ಹಾಲಿ ಪಾಲಿಕೆ 41 ಸದಸ್ಯರ ಪೈಕಿ ಬೆರಳೆಣಿಕೆಯಷ್ಟು ಮಂದಿ ಆಡಳಿತ, ವಿಪಕ್ಷ ಸದಸ್ಯರು ಜನರ ವಿಶ್ವಾಸ ಉಳಿಸಿಕೊಂಡಿದ್ದಾರೆ.
5 ವರ್ಷದಲ್ಲಿ ಜನರ ಬವಣೆಗೆ ಸ್ಪಂದಿಸದ ಸದಸ್ಯರು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕೆಲವರಂತೂ ಇಲ್ಲಿ ಟಿಕೆಟ್ ಇಲ್ಲದಿದ್ದರೆ, ಮತ್ತೊಂದು ಪಕ್ಷವೆಂಬ ಲೆಕ್ಕಾಚಾರದಲ್ಲಿದ್ದಾರೆ ಹಾಗೆ ನೋಡಿದರೆ, ಸ್ವತಂತ್ರವಾಗಿ ಕಣಕ್ಕಿಳಿದು, ತಮ್ಮ ಬಾಹುಬಲ ಪ್ರದರ್ಶಿಸಲು ಸಜ್ಜಾಗುತ್ತಿದ್ದಾರೆ. ಒಟ್ಟಾರೆ, ಆಯೋಗದಿಂದ ಹೊರ ಬಿದ್ದ ಚುನಾವಣೆ ದಿನಾಂಕದ ಘೋಷಣೆಯಂತೂ ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಅಧಿಕಾರದಲ್ಲಿ ಬಿಜೆಪಿ: 22 ಸದಸ್ಯ ಬಲದ ಬಿಜೆಪಿ ಅಧಿಕಾರದಲ್ಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು, ಪಕ್ಷೇತರರಾಗಿದ್ದ ಇಬ್ಬರು ಸದಸ್ಯರು ಬಿಜೆಪಿಗೆ ಕೈಜೋಡಿಸಿದ್ದರು. ಕಾಂಗ್ರೆಸ್ ಇಬ್ಬರು ಪಕ್ಷೇತರ ಬೆಂಬಲದೊಂದಿಗೆ 12 ಸದಸ್ಯ ಬಲದೊಂದಿಗೆ 2ನೇ ದೊಡ್ಡ ಪಕ್ಷವಾಗಿದ್ದರೆ, 5 ಸದಸ್ಯ ಬಲದ ಜೆಡಿಎಸ್ ತೃತೀಯ ಸ್ಥಾನದಲ್ಲಿದೆ.
ಈಗ ಎಲ್ಲರ ಕಣ್ಣೂ ಪಾಲಿಕೆ ಮೇಲೆಯೇ ಇದೆ. ಪಾಲಿಕೆಗೆ 2007ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಹು ಸ್ಥಾನ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿತು.
ಹೊಸಪಕ್ಷ: ಕಾಂಗ್ರೆಸ್, ಬಿಜೆಪಿ ಅವಕಾಶ ವಂಚಿತರಿಗೆ ಹೊಸ ಪಕ್ಷ ಕೆಜೆಪಿ, ಬಿಎಸ್ಸಾರ್ ಬಾಗಿಲು ತೆರೆದಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆಡಳಿತ ಪಕ್ಷ, ವಿಪಕ್ಷಗಳ ಪೈಕಿ ಕೆಲ ಸದಸ್ಯರಂತೂ ವೇದಾಂತಿಗಳಂತೆ ಈಗ ಮಾತನಾಡುತ್ತಿದ್ದಾರೆ. ತಮ್ಮ ಐದು ವರ್ಷದ ಅವಧಿಯಲ್ಲಿ ತಾವೇ ಸ್ವಯಂ ಮೌಲ್ಯಮಾಪನ ಮಾಡಿಕೊಂಡವರಂತೆ ವರ್ತಿಸುತ್ತಿರುವ ಅಂತಹ ಸದಸ್ಯರು ಪಾಲಿಕೆಯ ಸಹವಾಸವೇ ಬೇಡ ಎಂಬಂತೆ ಕೆಲವರಲ್ಲಿ ಮೊಸಳೆ ಕಣ್ಣೀರಿಡುತ್ತಿದ್ದಾರೆ.
ಮತ್ತೆ ಕೆಲ ಮಹಿಳಾ ಸದಸ್ಯರಂತೂ ರಾಜಕಾರಣವೇ ಬೇಡ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ತಮಗೆ ಸುಲಭವಾಗಿ ಒಲಿದು ಬರುವ ಅವಕಾಶ ಮತ್ತೊಬ್ಬರಿಗೆ ಬಿಟ್ಟು ಕೊಡಲು ಸಿದ್ಧರಾಗಿದ್ದಾರೆ. ಮತ್ತೆ ಕೆಲ ಸದಸ್ಯರು ಮುಂದಿನ ಚುನಾವಣೆಯಲ್ಲಾದರೂ ಗೆದ್ದು, ಒಮ್ಮೆ ಅಧಿಕಾರ ಅನುಭವಿಸುವ ಲೆಕ್ಕಾಚಾರದಲ್ಲಿದ್ದಾರೆ. ಹೆಸರು ಕೆಡಿಸಿಕೊಂಡವರಿಗಂತೂ ಆಯಾ ಪಕ್ಷಗಳ ಮುಖಂಡರೇ ಟಿಕೆಟ್ ನಿರಾಕರಿಸುತ್ತಾರೆಂಬುದೂ ಅನೇಕರಿಗೆ ಮನವರಿಕೆಯೂ ಆಗಿದೆ.
ಬಹುತೇಕ ಪಕ್ಷದ ನಾಯಕರು ಕೆಲ ವಾರ್ಡ್ಗೆ ಹೊಸ ಮುಖ, ಅವಕಾಶ ವಂಚಿತರಿಗೆ ಮಣೆ ಹಾಕಲು ಚಿಂತನೆ ನಡೆಸಿದ್ದಾರೆ. ಮತ್ತೆ ಕೆಲ ಮಹಿಳಾ ಸದಸ್ಯರು ತಮ್ಮ ಬದಲು ಬೇರೊಂದು ವಾರ್ಡ್ನಲ್ಲಿ ತಮ್ಮ ಪತಿ, ಸಂಬಂಧಿಗೆ ಅವಕಾಶ ನೀಡುವಂತೆ ಒತ್ತಡ ಹೇರುವ ಸಾಧ್ಯತೆಯೂ ಇವೆ. 5 ವರ್ಷದಲ್ಲಿ ಪಕ್ಷಕ್ಕೆ ಒಂದಿಷ್ಟು ಹೆಸರು ತಂದು ಕೊಟ್ಟ ಮಹಿಳಾ ಸದಸ್ಯರ ಮಾತನ್ನೂ ಮುಖಂಡರು ಕಡೆಗಣಿಸುವ ಸಾಧ್ಯತೆ ಕಡಿಮೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಸಮೀಪಿಸಿರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಮನೆ ಮುಂದೆ ಆಕಾಂಕ್ಷಿಗಳಿಂದ ತುಂಬಿ ತುಳುಕುವುದರಲ್ಲ ಎರಡು ಮಾತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

