ದಾವಣಗೆರೆ

ಲೋಕಾಯುಕ್ತ ಕೋರ್ಟ್‌ನಲ್ಲಿ ಹೋರಾಟ

Published On :

ದಾವಣಗೆರೆ: ಹೊನ್ನಾಳಿ ಪಪಂ ವ್ಯಾಪ್ತಿಯಲ್ಲಿ ನಡೆದಿರುವ ಕೋಟ್ಯಂತರ ರುಪಾಯಿಗಳ ಭ್ರಷ್ಟಾಚಾರದಲ್ಲಿ ಅಧಿಕಾರಿಗಳದ್ದೇ ಸಿಂಹಪಾಲು ಇದ್ದು, ಈ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಹೊನ್ನಾಳಿ ಪಟ್ಟಣದ ದಾರಿದೀಪ ಭ್ರಷ್ಟಾಚಾರ ವಿರೋಧಿ ವೇದಿಕೆ ತಿಳಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಮಠದ್, ಹೊನ್ನಾಳಿ ಪಪಂ ವ್ಯಾಪ್ತಿಯಲ್ಲಿ ಜನವರಿ 2011ರಿಂದ ಕೇವಲ 14 ತಿಂಗಳಲ್ಲಿ ಸಾಮಾನ್ಯ ಸಭೆಗಳಲ್ಲಿ ಮಂಡಿಸಿದ ಖರ್ಚಿನಲ್ಲಿ ಕೋಟ್ಯಂತರ ರು. ಭ್ರಷ್ಟಾಚಾರ ನಡೆದಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ತಿಳಿದುಬಂದಿದೆ.
ಲೋಕಾಗೆ ದೂರು: ಪಪಂನಿಂದ ಮಾಡಿದ ಖರ್ಚು, ವೆಚ್ಚಗಳ ಮಾಹಿತಿ ಕೋರಿ ಕಳೆದ ಅಕ್ಟೋಬರ್‌ನಲ್ಲೇ ಅರ್ಜಿ ಸಲ್ಲಿಸಿ, 3 ತಿಂಗಳಾದರೂ ಈವರೆಗೆ ಬಿಲ್‌ಗಳ ನಕಲು ಪ್ರತಿ ನೀಡಿಲ್ಲ. ಈ ಬಗ್ಗೆ ಮಾಹಿತಿ ಹಕ್ಕುಗಳ ಆಯೋಗಕ್ಕೂ ಲಿಖಿತ ದೂರು ಸಲ್ಲಿಸಿದ್ದೇವೆ. ಪಪಂನಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಮಾಹಿತಿ ನೀಡದಿರುವುದು ಪುಷ್ಟೀಕರಿಸುತ್ತದೆ. ಶೀಘ್ರವೇ ವೇದಿಕೆಯು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಿದ್ದೇವೆ ಎಂದು ಹೇಳಿದರು.
ಪಂಚಾಯತ್‌ನಲ್ಲಿ ಅಕ್ಚೋಬರ್ 2011ರ ಒಂದೇ ತಿಂಗಳ ಖರ್ಚಿನಲ್ಲಿ 15 ಸಾವಿರ ವ್ಯತ್ಯಾಸವಿದೆ. ಆ ತಿಂಗಳಲ್ಲಿ ಪಾವತಿಸಿದ ಬಿಲ್‌ಗೆ ಮತ್ತೆ ನವೆಂಬರ್‌ನಲ್ಲಿ ಹಣ ಪಾವತಿಸಿದೆ. ಅಂಬೇಡ್ಕರ್ ಭವನ ಉದ್ಘಾಟನೆಗೆ 1,97,590 ಮುಖ್ಯಾಧಿಕಾರಿ ಸ್ವಂತಕ್ಕೆಂದು ಡ್ರಾ ಮಾಡಿದ್ದು, ಫ್ಲೆಕ್ಸ್‌ಗಾಗಿ 19 ಸಾವಿರ ನೀಡಿದ್ದಾರೆ. ಅಷ್ಟೊಂದು ಹಣ ಪಡೆಯಲು ಜಿಲ್ಲಾಧಿಕಾರಿ ಅನುಮೋದನೆ ಕಡ್ಡಾಯವಾದರೂ ಅದನ್ನು ಪಾಲಿಸಿಲ್ಲ ಎಂದು ದೂರಿದರು.
ಎಲ್ಲೆಲ್ಲಿ ಅವ್ಯವಹಾರ: ಜೆರಾಕ್ಸ್ ಯಂತ್ರ, ಕಂಪ್ಯೂಟರ್ ಖರೀದಿ, ಬೀದಿ ದೀಪ ದುರಸ್ಥಿ, ಎಲೆಕ್ಟ್ರಿಕಲ್ ಸಾಮಾನು, ಪೈಪ್ ಮತ್ತು ಕಾಲರ್ ಖರೀದಿ ಹೀಗೆ ಖರೀದಿಸಿದ ವಸ್ತು ಸ್ಟಾಕ್ ಮತ್ತು ಹಾಳಾದ ಹಳೆ ವಸ್ತುಗಳಿಗೆ ಲೆಕ್ಕವಿಲ್ಲ. ಆರೋಗ್ಯ ವಿಭಾಗದ ಖರೀಸಿದ ವಸ್ತು, ಫ್ಲೆಕ್ಸ್ ಮಾಡಿಸುವಲ್ಲಿ, ವಾಹನ ಬಾಡಿಗೆ ಪಡೆಯುವಲ್ಲಿ, ಪ್ರಿಂಟಿಂಗ್ ಮಾಡಿಸುವಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಕ್ಕಳಿಗೆ ಸಿಹಿ ಹಂಚಲು ಫೆಬ್ರುವರಿ 2011ರಲ್ಲಿ 27,940ಗಳನ್ನು, 2012ನೇ ಸಾಲಿನಲ್ಲಿ ಇದೇ ರೀತಿ ಸಿಹಿ ಹಂಚಲು 43,265 ಖರ್ಚು ಮಾಡಲಾಗಿದೆ. ಇಷ್ಟೊಂದು ಹಣದಲ್ಲಿ ಇಡೀ ಹೊನ್ನಾಳಿ ಪಟ್ಟಣದಲ್ಲಿರುವ ಎಲ್ಲಾ ಮಕ್ಕಳಿಗೂ ಪಪಂ ಸಿಹಿ ಹಂಚಿಕೆಯಾಯಿತೇ ಎಂದರು.
ಕಳಪೆ ಕಾಮಗಾರಿ: ಹೊನ್ನಾಳಿ ಪಪಂನಿಂದ ನಡೆದ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆ ಎಂಬುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿದೆ. ಸರ್ಕಾರದ ಬೊಕ್ಕಸಕ್ಕೆ 18,36,606 ನಷ್ಟ ಮಾಡಿದ್ದರಿಂದ ಜೆಇ, ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲ ಮಡಿವಾಳ ಚಂದ್ರಪ್ಪ ಹೋರಾಟದ ಹಿನ್ನೆಲೆಯಲ್ಲಿ ಲೋಕಾಯುಕ್ತರು ತನಿಖೆ ನಡೆಸಿ, ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಹೇಳಿದರು. ಚಿ.ಮ. ಚಂದ್ರಪ್ಪ, ಎಚ್.ಜಿ. ಬಾಷಾ, ಹನುಮಂತಪ್ಪ ಸೊರಟೂರು, ಡಿಎಸ್ಸೆಸ್ ಮುಖಂಡ ರುದ್ರೇಶ ಕೊಡತಾಳ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.