ದಾವಣಗೆರೆ

ಮಾಯಕೊಂಡ ಬಂದ್‌ಗೆ ಬೆಂಬಲ

Published On :

ದಾವಣಗೆರೆ: ಐತಿಹಾಸಿಕ ಮಾಯಕೊಂಡ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಿಸಿ ಫೆ.11ರಂದು ಕರೆ ನೀಡಿರುವ ಬಂದ್‌ಗೆ ತಮ್ಮ ಸಂಪೂರ್ಣ ಬೆಂಬಲವಿದೆ. ಹೋಬಳಿ ಜನತೆ ನಡೆಸುವ ಎಂತಹದ್ದೇ  ಹೋರಾಟಕ್ಕೆ ರೈತನ ಮಗನಾಗಿ, ಸಾಮಾನ್ಯ ಕಾರ್ಯಕರ್ತನಾಗಿ ಪಾಲ್ಗೊಳ್ಳುವೆ ಎಂದು ಕೆಪಿಸಿಸಿ ಸದಸ್ಯ, ಜಿಪಂ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ತಿಳಿಸಿದ್ದಾರೆ.
ಮಾಯಕೊಂಡ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕೆಂಬುದು ದಿ.ಎಸ್. ನಿಜಲಿಂಗಪ್ಪ, ದಿ.ಜೆ.ಎಚ್. ಪಟೇಲರ ಕನಸಾಗಿತ್ತು. ನೂತನ ಜಿಲ್ಲೆಗಳ ರಚನೆ ಸಂದರ್ಭದಲ್ಲಿ ಪಟೇಲರು ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿಸುವ ಆಸೆಯನ್ನು ಹೊಂದಿದ್ದರಾದರೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಪುರಾತತ್ವ ಇಲಾಖೆಯಲ್ಲಿ ಮಾಯಕೊಂಡ ಗ್ರಾಮ ಪ್ರಮುಖ ಐತಿಹಾಸಿಕ ತಾಣವಾಗಿ ಗುರುತಿಸಿಕೊಂಡಿದೆ. ಚಿತ್ರದುರ್ಗದ ಹಿರೆಮದಕರಿ ನಾಯಕರ ಸಮಾಧಿ ಇರುವ ಕ್ಷೇತ್ರ ಇದು. ನಜೀರಸಾಬ್ ಮಾಯಕೊಂಡ ತಾಲೂಕು ಆಗಬೇಕೆಂಬುದಾಗಿ ಒತ್ತಿ ಹೇಳಿದ್ದರು. ಆದರೆ, ಕ್ಷೇತ್ರದ ಶಾಸಕ ಎಂ. ಬಸವರಾಜನಾಯ್ಕ ಅವರ ನಿರಾಸಕ್ತಿ, ನಿರ್ಲಕ್ಷ್ಯದ ಪರಿಣಾಮ ಅಂತಹ ಅವಕಾಶದಿಂದ ಗ್ರಾಮ ವಂಚಿತವಾಗಬೇಕಾಗಿದೆ ಎಂದು ಟೀಕಿಸಿದ್ದಾರೆ.
ತಾ. ಕೇಂದ್ರವೆಂದು ಘೋಷಿಸಲಿ: ಬ್ರಿಟೀಷರ ಕಾಲದಲ್ಲೇ ಪ್ರಮುಖ ಕೇಂದ್ರವಾಗಿದ್ದ ಮಾಯಕೊಂಡ ನಂತರದಲ್ಲಿ ಅವಕಾಶ ವಂಚಿತವಾಯಿತು. ಪೊಲೀಸ್ ಠಾಣೆ, ಬೆಸ್ಕಾಂ, ಕೃಷಿ, ಶಾಲಾ- ಕಾಲೇಜುಗಳು, ರಸ್ತೆ, ರೇಲ್ವೆ ಮಾರ್ಗಗಳು ಹೀಗೆ ಎಲ್ಲಾ ಪೂರಕ  ಸೌಲಭ್ಯಗಳನ್ನು ಹೊಂದಿರುವ ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿ ಘೋಷಿಸಿ, ಹೋಬಳಿ ಜನರ ಬಹು ವರ್ಷದ ಬೇಡಿಕೆಗೆ ಶೀಘ್ರ ಸ್ಪಂದಿಸಬೇಕು. ಬಜೆಟ್‌ನಲ್ಲಿ ನಿರಾಸೆ ಮಾಡಿದ ಸರ್ಕಾರ ಬಜೆಟ್ ಮೇಲಿನ ಚರ್ಚೆ ವೇಳೆಯಾದರೂ ತಾಲೂಕು ಕೇಂದ್ರವೆಂದು ಘೋಷಿಸಲಿ ಎಂದು ಒತ್ತಾಯಿಸಿದ್ದಾರೆ.
ದೈನಂದಿನ ಕೆಲಸ ಕಾರ್ಯಗಳಿಗೆ, ಯಾವುದೇ ದಾಖಲೆ, ಪ್ರಮಾಣಪತ್ರಗಳನ್ನು ಪಡೆಯಲು ಸುಮಾರು 32 ಕಿ.ಮೀ ದೂರದ ತಾಲೂಕು ಕೇಂದ್ರಕ್ಕೆ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಅಂಗವಿಕಲರು, ರೈತರು ಅಲೆದಾಡಬೇಕಾಗಿದೆ. ರೈತರಂತೂ ದೂರದ ತಾಲೂಕು ಕೇಂದ್ರಕ್ಕೆ ಹೋಗಿ ಬರಲು ವಾರಗಟ್ಟಲೆ ತಮ್ಮ ಕೆಲಸ ಬಿಟ್ಟು, ಸುತ್ತಾಡಬೇಕಾದ ಸ್ಥಿತಿ ಬಂದೊದಗಿದೆ.
ಮುಂಬರುವ ದಿನಗಳಲ್ಲಿ ಮಾಯಕೊಂಡ ತಾಲೂಕು ಹೋರಾಟ ಸಮಿತಿ ಕೈಗೊಳ್ಳುವ ಎಂತಹದ್ದೇ ಹೋರಾಟದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ಅಲ್ಲದೆ, ಸರ್ಕಾರದ ಬಳಿ ಹೋಗುವ ನಿಯೋಗದಲ್ಲಿ ತೆರಳುತ್ತೇವೆ. ಒಟ್ಟಾರೆ,  ಮಾಯಕೊಂಡ ಹೋಬಳಿ ಜನತೆ ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ, ತಾಲೂಕು ಕೇಂದ್ರ  ಘೋಷಣೆಯಾಗಲೇಬೇಕೆಂಬ ಬೇಡಿಕೆ ಮುಂದಿಟ್ಟು ಹೋರಾಟದಲ್ಲಿ ಹೆಜ್ಜೆ ಹಾಕುತ್ತೇನೆ ಎಂದು ಡಾ.ವೈ. ರಾಮಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.