ದಾವಣಗೆರೆ

ನದಿ ನೀರು ಕೃಷಿಗೆ ಬಳಸದಿರಿ: ಡಿಸಿ

Published On :

ದಾವಣಗೆರೆ: ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ತೀವ್ರ ಸಮಸ್ಯೆ ಹಿನ್ನೆಲೆಯಲ್ಲಿ ಸಾರ್ವಜನಿಕರು, ಜಾನುವಾರುಗಳಿಗಾಗಿ ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಯಲ್ಲಿ ಬಿಟ್ಟಿರುವಂತಹ ನೀರನ್ನು ಯಾವುದೇ ಕಾರಣಕ್ಕೂ ಪಂಪ್‌ಸೆಟ್ ಬಳಸಿ, ಕೃಷಿಗೆ ಬಳಸದಂತೆ ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ನದಿಪಾತ್ರದ ರೈತರಲ್ಲಿ ಮನವಿ ಮಾಡಿದ್ದಾರೆ.
ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ತುಂಗಭದ್ರಾ ನದಿಯಲ್ಲಿ ಭದ್ರಾ ಡ್ಯಾಂನಿಂದ ನೀರು ಬಿಡಲಾಗಿದೆ. ಹೊನ್ನಾಳಿ, ಹರಿಹರ ಹಾಗೂ ಹರಪನಹಳ್ಳಿ ತಾಲೂಕುಗಳನ್ನು ಹಾದು ಹೋಗಿರುವ ತುಂಗಭದ್ರಾ ನದಿ ಪಾತ್ರದಲ್ಲಿ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳು ಇದ್ದು, ಅವುಗಳನ್ನು ನೀರೆತ್ತಿ ಬೆಳೆ ಬೆಳೆಯುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೃಷಿಗೆ ಬಳಸಬೇಡಿ: ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಬಿಟ್ಟ ನೀರನ್ನು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗೆ ಬಳಸಬಾರದು. ನದಿ ತಟದಲ್ಲಿರುವ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಕರ್ನಾಟಕ ಸರ್ಕಾರ ನೀರಾವರಿ ನಿಗಮ ನಿಯಮಿತದಿಂದ ರೈತ ಬಾಂಧವರು ಮಳೆಗಾಲದ ಅವದಿಯಲ್ಲಿ ಬೇಸಿಗೆ ಹೊರತುಪಡಿಸಿ, ಜುಲೈನಿಂದ ನವೆಂಬರ್ ತನಕ ಮಾತ್ರ ಖುಷ್ಕಿ ಬೆಳೆ ಬೆಳೆಯಲು ಸರ್ಕಾರದ ಆದೇಶದನ್ವಯ ಇಲಾಖೆ ಅನುಮತಿ ನೀಡಿರುತ್ತದೆ ಎಂದು ಅವರು ಹೇಳಿದರು.
ತೀವ್ರ ಸಮಸ್ಯೆ: ನವೆಂಬರ್‌ನಿಂದ ಜುಲೈವರೆಗೆ ಯಾವುದೇ ಸಂದರ್ಭದಲ್ಲೂ ನದಿಯಿಂದ ನೀರು ಎತ್ತಬಾರದೆಂಬ ನಿಬಂಧನೆಯನ್ನೂ ಇಲಾಖೆ ವಿಧಿಸಿದೆ. ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗಾಗಿ ನದಿಗೆ ಈಗ ಬಿಡಲಾಗುತ್ತಿದೆ. ಜನ, ಜಾನುವಾರು ಕುಡಿಯುವ ನೀರು ಇಲ್ಲದೆ, ತೀವ್ರ ಸಮಸ್ಯೆ ಎದುರಿಸುತ್ತಿರುವುದು ಎಲ್ಲರ ಕಣ್ಣ ಮುಂದೆಯೂ ಇದೆ. ಕುಡಿಯುವ ನೀರಿಗೋಸ್ಕರ ನದಿಗೆ ಬಿಟ್ಟ ನೀರನ್ನು ರೈತ ಬಾಂಧವರು ಯಾವುದೇ ಕಾರಣಕ್ಕೂ ಕೃಷಿಗೆ, ಬೆಳೆಗೆ, ತೋಟಗಳಿಗೆ ಬಳಸಬಾರದು ಎಂದು ಅವರು ಸೂಚಿಸಿದ್ದಾರೆ.
ವಿರುದ್ಧ ಕಠಿಣ ಕ್ರಮ: ಹಿಂದೆಯೂ ಈ ಬಗ್ಗೆ ಎಚ್ಚರಿಸಿದ್ದರೂ ಇನ್ನೂ ಕೂಡ ನದಿಪಾತ್ರದ ರೈತರು ನದಿಯಿಂದ ಪಂಪ್‌ಸೆಟ್‌ನಿಂದ ಬೆಳೆಗೆ ನೀರಿ ಹಾಯಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ನದಿಯಲ್ಲಿ ಬಿಟ್ಟ ಕುಡಿಯುವ ನೀರನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಒಂದು ವೇಳೆ ಯಾರಾದರೂ ಕುಡಿಯುವ ನೀರನ್ನು ಪಂಪ್‌ಸೆಟ್‌ಗಳ ಮೂಲಕ, ಜನರೇಟರ್‌ನಂ ಸಹಾಯದಿಂದ ಬೆಳೆಗಳಿಗೆ, ಇಟ್ಟಿಗೆ ಭಟ್ಟಿಗೆ ಬಳಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ನದಿ ತಟದಲ್ಲಿರುವ ವಿದ್ಯುತ್ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಥಗಿತಗೊಳಿಸಲು ಬೆಸ್ಕಾಂಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗಾಗಿ ಬಿಟ್ಟಿರುವ ನೀರಿನ ವಿಚಾರಕ್ಕೆ ನದಿ ಪಾತ್ರದ ರೈತರೂ ಸಹಕರಿಸಬೇಕು. ಈ ಬಗ್ಗೆ ಯಾವುದೇ ದೂರುಗಳು ಇದ್ದಲ್ಲಿ ನೀರಾವರಿ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.