ಜಯಲಲಿತಾ ಪ್ರತಿಕೃತಿ ದಹಿಸಿ ಪ್ರತಿಭಟನೆ
ದಾವಣಗೆರೆ: ರಾಜ್ಯದಲ್ಲೇ ತೀವ್ರ ಬರ ಆವರಿಸಿರುವ ದುಸ್ಥಿತಿಯಲ್ಲಿ ಪದೇಪದೇ ಕಾವೇರಿ ನೀರಿನ ವಿಚಾರವಾಗಿ ಕ್ಯಾತೆ ತೆಗೆಯುತ್ತಿರುವ ಜಯ ಲಲಿತಾ ವರ್ತನೆ ಖಂಡಿಸಿ, ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ತಕ್ಷಣ ಬಂದ್ ಮಾಡಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ನೇತೃತ್ವದಲ್ಲಿ ಜಯಲಲಿತಾ ಪ್ರತಿಕೃತಿ ದಹಿಸಲಾಯಿತು.
ಘೋಷಣೆ: ನಗರದ ಗಾಂಧಿ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹಿಸುವುದರ ಮೂಲಕ ನೆರೆ ರಾಜ್ಯಕ್ಕೆ ಬಿಡುತ್ತಿರುವ ನೀರನ್ನು ತಕ್ಷಣ ತಡೆ ಹಿಡಿಯಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರವೇ ಮುಖಂಡರು ಕಾರ್ಯಕರ್ತರು ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಪ್ರವೀಣ ಶೆಟ್ಟಿ, ಇಡೀ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಆವರಿಸಿದೆ. ಯಾವುದೇ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿಲ್ಲ. ಇಲ್ಲಿನ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ವಾಸ್ತವ ಸಂಗತಿಯನ್ನು ಸುಪ್ರೀಂ ಕೋರ್ಟ್, ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರವೂ ವಿಫಲವಾಗಿದೆ. ನಮ್ಮ ರಾಜ್ಯದ ರೈತರ, ಜನರ ಹಿತ ಬಲಿ ಕೊಟ್ಟು, ನೆರೆ ರಾಜ್ಯಕ್ಕೆ ನೀರು ಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ತಮಿಳುನಾಡಿನಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಬಿಡಲಿ. ಕಾವೇರಿ ನೀರಿನ ವಿಚಾರ ಬಂದಾಗ ಸಂಘಟಿತರಾಗಿ ಧ್ವನಿ ಎತ್ತುತ್ತಾರೆ. ಆದರೆ, ಈ ರಾಜ್ಯದ ನಾಯಕರಿಗೆ ತಮ್ಮ ಹೈಕಮಾಂಡ್ ಬಳಿ ಚಕಾರವನ್ನೂ ಎತ್ತದೆ ರಾಜ್ಯದ ಜನತೆಯು ಇಟ್ಟ ವಿಶ್ವಾಸ ಹುಸಿಗೊಳಿಸಿದ್ದಾರೆ. ರಾಜ್ಯದ ಸಂಸದರಿಗೆ ನಾಡಿನ ಬಗ್ಗೆ ಅಭಿಮಾನವಿದ್ದರೆ, ಪಕ್ಷಬೇಧ ಮರೆತು, ಕಾವೇರಿ ನೀರಿನ ವಿಚಾರವಾಗಿ ಧ್ವನಿ ಎತ್ತಲಿ ಎಂದು ಪ್ರವೀಣ ಶೆಟ್ಟಿ ತಾಕೀತು ಮಾಡಿದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ.ಜಿ. ಯಲ್ಲಪ್ಪ ಮಾತನಾಡಿ, ಕೇಂದ್ರ ತಮಿಳುನಾಡಿನ ಬೇಡಿಕೆಗೆ ಮಣೆ ಹಾಕುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಂಜುನಾಥ ಕೊಟ್ಯಾನ್, ಬಳ್ಳಾರಿ ಜಿಲ್ಲಾಧ್ಯಕ್ಷ ಅದ್ದಿಗೆರೆ ರಾಮಣ್ಣ, ಅಮ್ಜದ್ ಅಲಿ, ಚಿತ್ರದುರ್ಗ ಜಿಲ್ಲಾ ಸಂಚಾಲಕ ಗಂಡಿಗಟ್ಟೆ ರಮೇಶ, ತಿಮ್ಮಪ್ಪ ಪೂಜಾರ, ಮೆಹಬೂಬ್, ಬಿಲಾಲ್, ದಾನಪ್ಪ ಗುತ್ತೇದಾರ, ಗೋಪಾಲಕೃಷ್ಣ, ಶ್ರೇಯಸ್, ತಿಮ್ಮೇಶ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

