ವಿದ್ಯುತ್ ಸಮಸ್ಯೆ ಪರಿಹರಿಸಲು ಆಗ್ರಹ
ಸೊರಬ: ಜೆಡಿಎಸ್ ತಾಲೂಕು ಘಟಕದ ವತಿಯಿಂದ ವಿದ್ಯುತ್ ಸಮಸ್ಯೆ ಹಾಗೂ ಅರಣ್ಯ ಇಂಡೀಕರಣ ವಿರೋಧಿಸಿ ಗುರುವಾರ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಲಜ್ಜೆಗೇಡಿ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ಕಾಂಗ್ರೆಸ್ ಸರ್ಕಾರ ರೈತರ ಪರ ಯಾವುದೇ ಯೋಜನೆ ರೂಪಿಸಲಿಲ್ಲ, ಸಮರ್ಪಕ ವಿದ್ಯುತ್ ನೀಡುವಲ್ಲಿಯೂ ತಾರತಮ್ಯ ಮಾಡಿರುವುದರಿಂದ ದೇಶಕ್ಕೆ ಅನ್ನ ನೀಡುವ ರೈತನಿಂದು ಕುಡಿಯುವ ನೀರಿಗೂ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಶೈಕ್ಷಣಿಕ ಪ್ರಗತಿಗೆ ಅಡ್ಡಿ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯುಂಟಾಗಿದೆ. ಒಂದೆಡೆ ಬರಗಾಲದ ಛಾಯೆ, ಇನ್ನೊಂದೆಡೆ ವಿದ್ಯುತ್ ಕೊರತೆ ಇರುವ ಬೆಳೆ ಉಳಿಸಿಕೊಳ್ಳಲಾಗದ ಪರದಾಟ, ಮುಂತಾದ ಹತ್ತು ಹಲವು ಬವಣೆಯಿಂದ ಬಳಲಿರುವ ಜನ ಸಾಮಾನ್ಯರಿಗೆ ಕವಡೆ ಕಿಮ್ಮತ್ತು ನೀಡದ ರಾಜ್ಯಾಡಳಿತ ತನ್ನ ಕುರ್ಚಿ ಭದ್ರತೆಗೆ ಶಮಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂಬ ಆರೋಪ, ಆಕ್ಷೇಪಗಳು ಪ್ರತಿಭಟನೆ ವೇಳೆ ವ್ಯಕ್ತವಾಯಿತು.
ಇತ್ತ ಬಗರ್ ಹುಕುಂ ರೈತರಿಂದ ಮತ ಪಡೆದು ಅಧಿಕಾರ ಅನುಭವಿಸಿದ ಇಬ್ಬರು ಮಾಜಿ ಮಂತ್ರಿಗಳು ಮತ ಪಡೆದ ರೈತರನ್ನು ಒಕ್ಕಲೆಬ್ಬಿಸುವಾಗ ಬೆಂಬಲ ನೀಡದೇ ದ್ರೋಹ ಎಸಗಿದ್ದಾರೆ. ಇವರೊಂದಿಗೆ ಅರಣ್ಯ ಇಲಾಖೆಯೂ ರೈತರ ಮೇಲೆ ನಿರಂತರ ಪ್ರಹಾರ ನಡೆಸುತ್ತಿದ್ದು, ನೋಡಿಯೂ ನೋಡದಂತೆ ನಮ್ಮ ಜನಪ್ರತಿನಿಧಿಗಳು ನಿರುಮ್ಮಳರಾಗಿ ಉಳಿದಿದ್ದಾರೆ. ಇಂತಹವರು ಈಗ ಮತ ಕೇಳಲು ಬರಲಿ, ತಕ್ಕ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂಬ ಆಕ್ರೋಷ ಕೂಡ ವ್ಯಕ್ತವಾಯಿತು.
ಕಲ್ಲು ತೂರಾಟ: ಪ್ರತಿಭಟನೆ ಆರಂಭಕ್ಕೆ ಮುನ್ನ ಮೆಸ್ಕಾಂ ಕಚೇರಿ ಒಳಗೆ ನುಗ್ಗಲು ಪ್ರಯತ್ನಿಸಿದವರನ್ನು ತಡೆದಾಗ ಕೆಲವರು ಕಚೇರಿ ಮೇಲೆ ಕಲ್ಲುತೂರಾಟ ನಡೆಸಿದರು. ರಕ್ಷಣಾ ಇಲಾಖೆ, ಪಕ್ಷದ ಮುಖಂಡರು ಉದ್ರಿಕ್ತ ವಾತಾವರಣವನ್ನು ತಿಳಿಗೊಳಿಸಿದರು.
ಪ್ರತಿದಿನ 6 ತಾಸು ತ್ರೀಫೇಸ್, 8 ತಾಸು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು, ಸೊರಬ ಗ್ರಿಡ್ಗೆ ನೇರ ವಿದ್ಯುತ್ ಸರಬರಾಜು ಆಗಬೇಕು. ಕಂದಾಯ ಹಾಗೂ ಗೋಮಾಳ ಭೂಮಿಯನ್ನು ಇಂಡೀಕರಣಗೊಳಿಸಿ ಅರಣ್ಯ ಎಂದು ನಮೂದಿಸುವ ಪ್ರಕ್ರಿಯೆ ರದ್ದುಗೊಳಿಸಬೇಕು.
ಕಂದಾಯ ಇಲಾಖೆ ಭೂಮಿ ವಾಪಸ್ಸಾಗಬೇಕು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ನಡೆಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.
ಬೇಡಿಕೆ ಈಡೇರುವಲ್ಲಿ ಉದಾಸೀನವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಹಸೀಲ್ದಾರ್ ಶ್ರೀಧರಮೂರ್ತಿ ಪಂಡಿತ್ ಮುಖಾಂತರ ಮನವಿ ಸಲ್ಲಿಸಿದರು. ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಶೇಖರಮ್ಮ, ಮುಖಂಡ ಸುರೇಶ್ ಒಡೆಯರ್, ಎಂ.ಡಿ. ಶೇಖರಪ್ಪ, ಮಾಕೊಪ್ಪದ ಫಕ್ಕೀರಪ್ಪ, ಅಡೆಮನೆ ಸುಬ್ಬರಾವ್, ಎನ್. ಕುಮಾರ್, ಮಧುರಾಯ್ ಶೇಠ್, ಶ್ರೀಪಾದರಾವ್ ನಿಸರಾಣಿ, ಎಸ್.ಆರ್. ಕುಮಾರಸ್ವಾಮಿ, ಸಂಜೀವ್ ಲಕ್ಕವಳ್ಳಿ, ಅತಿಕುರ್ ರಹಮಾನ್, ಕೆ.ಪಿ. ಸಂಜೀವ್, ಗೂಳಿ ಬಂಗಾರಪ್ಪ, ಶಬ್ಬೀರ್ ಅಹ್ಮದ್, ಲತಾ ಹೇಮಪ್ಪ, ಚಂದ್ರಕಾಂತ್, ಬಸವೇಶ್ ಮೊದಲಾದವರೊಂದಿಗೆ ಹಲವು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

