ಬೆಸ್ಕಾಂಗೆ ರೈತಸಂಘ ಮುತ್ತಿಗೆ
ಜಗಳೂರು: ಕೃಷಿಗೆ ನಿರಂತರ ವಿದ್ಯುತ್ ಪೂರೈಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಟ್ಟಣದ ಬೆಸ್ಕಾಂ ಕಚೇರಿಗೆ ಮಂಗಳವಾರ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ರೈತಸಂಘದ ಮುಖಂಡರು, ಕಾರ್ಯಕರ್ತರು, ರೈತರು, ಸಮರ್ಪಕ ವಿದ್ಯುತ್ ಪೂರೈಸದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೆಸ್ಕಾಂ ಕಚೇರಿಯನ್ನು ತಲುಪಿ, ಸಮರ್ಪಕ ವಿದ್ಯುತ್ಗೆ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ, ಗ್ರಾಮೀಣ ಪ್ರದೇಶಕ್ಕೆ 12 ತಾಸು ತ್ರಿಫೇಸ್ ವಿದ್ಯುತ್ ನೀಡಬೇಕು. 6 ಗಂಟೆ ವಿದ್ಯುತ್ ನೀಡುವ ಸರ್ಕಾರ ಹಗಲು ಹೊತ್ತಾದರೂ 6 ಗಂಟೆ ಸಮರ್ಪಕ ವಿದ್ಯುತ್ ನೀಡದೆ, 3 ಗಂಟೆಗೊಮ್ಮೆ ಎರಡು ಅವಧಿಗೆ ನೀಡುತ್ತದೆ. ಅದೂ ಹತ್ತಾರು ಬಾರಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುವುದರಿಂದ ಹೊಲದಲ್ಲಿ ಬೆಳೆದು ನಿಂತ ಬೆಳೆಗಳಿಗೆ ನಿತ್ಯ ನೀರುಣಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರಾತ್ರಿ ಹೊತ್ತಿನಲ್ಲೂ ಬೇಕಾಬಿಟ್ಟಿ ವಿದ್ಯುತ್ ಪೂರೈಸುವುದರಿಂದ ರಾತ್ರಿ ಹೊಲಕ್ಕೆ ನೀರು ಹಾಯಿಸಲು ಹೋಗುವ ರೈತರು ಹಾವು ಸೇರಿದಂತೆ ವಿಷಜಂತುಗಳ ಕಡಿತಕ್ಕೆ ಒಳಗಾಗಿರುವುದು, ಕರಡಿ, ನರಿ, ತೋಳ, ಚಿರತೆಯಂತಹ ಪ್ರಾಣಿಗಳ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿರುವ ನಿದರ್ಶನಗಳೂ ಇರುವುದನ್ನು ಬೆಸ್ಕಾಂ ಮರೆಯಬಾರದು ಎಂದು ಹೇಳಿದರು.
ಆದರೆ, ಐಷಾರಾಮಿ ಸೌಲಭ್ಯ, ಕೈತುಂಬಾ ಸಂಬಳ ಎಣಿಸಿಕೊಳ್ಳುವ ಬೆಸ್ಕಾಂ ಅಧಿಕಾರಿಗಳಿಗೆ, ಆಳುವ ಸರ್ಕಾರಕ್ಕೆ ಇದರ ಪರಿವೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ಹೋರಾಟ: ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು. 12 ತಾಸು ನಿರಂತರ ವಿದ್ಯುತ್ ಒದಗಿಸಬೇಕು. ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿದೆ. ಅಂತಹ ನಷ್ಟವನ್ನು ರೈತರಿಗೆ ಸರ್ಕಾರ ಹಾಗೂ ಬೆಸ್ಕಾಂ ತುಂಬಿ ಕೊಡಬೇಕಾದೀತು. ಅಗತ್ಯ ಬಿದ್ದರೆ ಅಸಮರ್ಪಕ ವಿದ್ಯುತ್ನಿಂದಾಗಿ ನಷ್ಟಕ್ಕೀಡಾದ ರೈತರು ಲುಕ್ಸಾನು ತುಂಬಿಕೊಡುವಂತೆ ಸರ್ಕಾರ, ಬೆಸ್ಕಾಂ ವಿರುದ್ಧ ಕಾನೂನು ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಜಗಳೂರು ತಾಲೂಕು ಬರಪೀಡಿತವಾಗಿದೆ. ಜನ, ಜಾನುವಾರುಗಳು ಕುಡಿಯುವ ನೀರಿಲ್ಲದೆ, ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಡಿವ ನೀರೊದಗಿಸಲು ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇನ್ನಾದರೂ ಸರ್ಕಾರ ಗ್ರಾಮೀಣ ಜನರಿಗೆ ನೀರೊದಗಿಸುವ ಜೊತೆಗೆ ಬೆಳೆಗಳನ್ನು ಕಾಪಾಡಿಕೊಳ್ಳಲು ಸಮರ್ಪಕ ವಿದ್ಯುತ್ ಪೂರೈಸಲು ಮುಂದಾಗಲಿ ಎಂದು ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಅರ್ಪಿಸಿದ ಮನವಿ ಪತ್ರದಲ್ಲಿ ರೈತರು ಒತ್ತಾಯಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಕಾನನಕಟ್ಟೆ ತಿಪ್ಪೇಸ್ವಾಮಿ, ಮುಖಂಡರಾದ ಗಡಿಮಾಕುಂಟೆ ಬಸವರಾಜಪ್ಪ, ಭರಮಸಮುದ್ರ ಗುರುಸಿದ್ದಪ್ಪ ನೇತೃತ್ವದಲ್ಲಿ ಹಲವಾರು ಹಳ್ಳಿಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

