ಇಂದು ಡಾ. ಮಹಾಂತ ಸ್ವಾಮೀಜಿ ಅಂತ್ಯಕ್ರಿಯೆ
ಹರಿಹರ ಸಮೀಪದ ಪೀಠದ ಆವರಣದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ
ದಾವಣಗೆರೆ: ಹೃದಯಾಘಾತದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಲಿಂಗೈಕ್ಯರಾದ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಪಾರ್ಥೀವ ಶರೀರವನ್ನು ನಗರಕ್ಕೆ ಸೋಮವಾರ ರಾತ್ರಿ ತರಲಾಯಿತು.
ಬೆಂಗಳೂರಿನಿಂದ ಹೊರಟ ಲಿಂಗೈಕ್ಯ ಗುರುಗಳ ಪಾರ್ಥೀವ ಶರೀರಕ್ಕೆ ಬೆಂಗಳೂರು, ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗ, ದಾವಣಗೆರೆ ಹೀಗೆ ಮಾರ್ಗದುದ್ದಕ್ಕೂ ಸಹಸ್ರಾರು ಭಕ್ತಾದಿಗಳು ಗುರುಗಳ ಅಂತಿಮ ದರ್ಶನ ಪಡೆದರು.
ಆವರಗೆರೆ ಮಾರ್ಗವಾಗಿ ನಗರವನ್ನು ಪ್ರವೇಶಿಸಿದ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಪಾರ್ಥೀವ ಶರೀರವನ್ನು ಗಾಂಧಿ ವೃತ್ತದ ಮುಖಾಂತರ ಚಾಮರಾಜ ಪೇಟೆ, ಚೌಕಿಪೇಟೆ, ವಸಂತಿ ರಸ್ತೆ, ಅಕ್ಕ ಮಹಾದೇವಿ ರಸ್ತೆ ಮಾರ್ಗವಾಗಿ ಶಾಬನೂರು ರಸ್ತೆಯ ಪಂಚಮಸಾಲಿ ಪೀಠದಲ್ಲಿ ಭಕ್ತಾದಿಗಳ ದರ್ಶನಕ್ಕಾಗಿ ಸುಮಾರು 2 ಗಂಟೆ ಕಾಲ ಇಟ್ಟು, ರಾತ್ರಿಯೇ ಹರಿಹರ ತಾ. ಹನಗವಾಡಿ ಸಮೀಪದ ಪಂಚಮಸಾಲಿ ಪೀಠದ ಆವರಣಕ್ಕೆ ಕೊಂಡೊಯ್ಯಲಾಗುವುದು.
ಇಂದು ಅಂತ್ಯಸಂಸ್ಕಾರ: ಹರಿಹರ ಸಮೀಪದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಫೆ.5ರಂದು ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಂತ್ಯಕ್ರಿಯೆಯನ್ನು ಸಮಸ್ತ ಭಕ್ತಾದಿಗಳು, ಪಂಚಮಸಾಲಿ ಸಮಾಜ ಬಾಂಧವರ ಸಮ್ಮುಖದಲ್ಲಿ ನೆರವೇರಿಸಲಾಗುವುದು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಭಕ್ತಾದಿಗಳು ಗುರುಗಳ ಅಂತಿಮ ದರ್ಶನಕ್ಕಾಗಿ ಆಗಮಿಸಲಿದ್ದು, ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಸುವುದಾಗಿ ಸಮಾಜದ ತಾಲೂಕು ಅಧ್ಯಕ್ಷ ಎಂ. ದೊಡ್ಡಪ್ಪ ತಿಳಿಸಿದರು.
ಉಪಾಧ್ಯಕ್ಷ, ವಕೀಲ ಹಾಲೇಶ ಅಂಗಡಿ ಮಾತನಾಡಿ, ಗುರುಗಳ ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸಾಕಷ್ಟು ಕಾಲಾವಕಾಶ ಮಾಡಿಕೊಟ್ಟಿದ್ದು, ಯಾರೂ ಧೃತಿಗೆಡದೆ, ಶಾಂತಿಯುತವಾಗಿ ವರ್ತಿಸಬೇಕು.
ಸಹಕರಿಸಲು ಮನವಿ: ದಾವಣಗೆರೆಯಲ್ಲಿರುವ ಪೀಠಕ್ಕೆ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನಾಳೆ ಹರಿಹರದ ಪೀಠಕ್ಕೆ ಲಕ್ಷಾಂತರ ಅಪಾರ ಭಕ್ತರು ಸೇರುವ ನಿರೀಕ್ಷೆ ಇದೆ, ಸಾರ್ವಜನಿಕರು, ಸರ್ವ ಭಕ್ತಾದಿಗಳು ಶಾಂತಿಯಿಂದ ವರ್ತಿಸುವ ಮೂಲಕ ಅಂತಿಮ ವಿಧಿವಿಧಾನಗಳು ವ್ಯವಸ್ಥಿತವಾಗಿ ನೆರವೇರಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಂ.ಎಸ್, ಪಾಟೀಲ್, ರಶ್ಮಿ ನಾಗರಾಜ ಮಾತನಾಡಿ, ಭಕ್ತರ ಬಗ್ಗೆ ಅಪಾರ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಇಟ್ಟುಕೊಂಡಿದ್ದ ಗುರುಗಳು ಬಡವರ ಮನೆಯಲ್ಲಿ ಪೂಜೆಗೆ ಕರೆದರೂ, ಹೋಗುತ್ತಿದ್ದಂತಹ ಸರಳ, ಮಾತೃಹೃದಯಿ ಗುರುಗಳಾಗಿದ್ದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

