ದಕ್ಷಿಣ ಕನ್ನಡ

ಆಂಜನೇಯಗೆ ಮತ್ತಷ್ಟು ಹೊಣೆ

Published On :

ಬೆಂಗಳೂರು: ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ನೇಮಕಗೊಂಡಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಂಜನೇಯ ನೇಮಕಗೊಂಡಿದ್ದಾರೆ.

ಆ.1ರಿಂದ ಯೋಗ ತರಗತಿ
ಬೆಂಗಳೂರು: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಚಾಮರಾಜಪೇಟೆ ಹಾಗೂ ಜಯನಗರ ಶಾಖೆಗಳಲ್ಲಿ ಅಷ್ಟಾಂಗ ಯೋಗ ತರಗತಿಗಳನ್ನು ಆ.1ರಿಂದ ಆರಂಭಿಸಲಿದೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪ್ರತ್ಯೇಕ ಯೋಗ ಚಿಕಿತ್ಸೆ ತರಗತಿಗಳಿದ್ದು, ಅನುಭವಿ ಶಿಕ್ಷಕ ಶಿಕ್ಷಕಿಯರು ತರಬೇತಿ ನೀಡಲಿದ್ದಾರೆ. ಹೆಚ್ಚಿನ ವಿವರಕ್ಕೆ 9481240770, 22441486.

ದೇಗುಲ ಅಭಿವೃದ್ಧಿ; ಭೂಸ್ವಾಧೀನಕ್ಕೆ ತಡೆ
ಬೆಂಗಳೂರು:  ಮೈಸೂರಿನ ಚಾಮುಂಡೇಶ್ವರಿ ದೇಗುಲದ ಅಭಿವೃದ್ಧಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಭೂಮಾಲಿಕರಿಗೆ ಮಾಹಿತಿ ನೀಡದೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಆರೋಪಿಸಿ ಮೇಹುಲ್ ಜೆ.ಪಟೇಲ್ ಹಾಗೂ ಜಯಮ್ಮ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಭೂಸ್ವಾಧೀನದ ಕುರಿತು ತಮಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಜಮೀನು ತಮ್ಮ ಹೆಸರಿಗೆ ನೋಂದಣಿಯಾಗಿದ್ದರೂ, ಮೂಲ ಮಾಲಿಕರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ವಿವಾದವೇನು?: ಚಾಮುಂಡೇಶ್ವರಿ ದೇಗುಲದ ಅಭಿವೃದ್ಧಿಗಾಗಿ ಸುತ್ತಮುತ್ತಲಿನ 8.16 ಎಕರೆ ಜಮೀನು ಸ್ವಾಧೀನಕ್ಕಾಗಿ ಮೈಸೂರು ಜಿಲ್ಲಾಧಿಕಾರಿ 2012ರ ಆಗಸ್ಟ್ 17ರಂದು ಪ್ರಥಮ ಅಧಿಸೂಚನೆ ಹೊರಡಿಸಿದ್ದರು. ನಂತರ 2013ರ ಜನವರಿ 22ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ 21 ಕುಟುಂಬಗಳಿಗೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಇದರಲ್ಲಿ ಕೆ.ಎನ್. ಸತ್ಯನಾರಾಯಣ ಎಂಬುವರು ತಮ್ಮ ಜಮೀನನ್ನು 1983ರಲ್ಲೇ ಹೋಟೆಲ್ ಉದ್ಯಮಕ್ಕೆ ಪರಿವರ್ತನೆ ಮಾಡಿಸಿಕೊಂಡಿದ್ದರು. ನಂತರ ಆ ಭೂಮಿಯನ್ನು ಮೇಹುಲ್ ಜಿ. ಪಟೇಲ್ ಹಾಗೂ ಜಯಮ್ಮ ಎಂಬುವರು ಖರೀದಿಸಿದ್ದರು. ಆದರೆ, ಇದನ್ನು ಪರಿಗಣಿಸದ ಜಿಲ್ಲಾಧಿಕಾರಿ ಕೇವಲ ಮೂಲ ಮಾಲಿಕರಿಗೆ ನೋಟಿಸ್ ನೀಡಿದ್ದರು. ಇದರ ಪರಿಣಾಮವಾಗಿ ಅರ್ಜಿದಾರರಿಗೆ ಮಾಹಿತಿ ನೀಡದೆ ಭೂಸ್ವಾಧೀನದ ಅಧಿಸೂಚನೆ ಹೊರಡಿಸಲಾಗಿದ್ದು,  ಭೂಮಿ ತೆರವಿಗೆ ಅಧಿಕಾರಿಗಳು ಆಗಮಿಸದಾಗಲೇ ಅವರಿಗೆ ಮಾಹಿತಿ ದೊರೆತಿದೆ. ಇದು ಕಾನೂನುಬಾಹಿರ ಎಂದು ಅರ್ಜಿದಾರರ ಪರ ವಕೀಲರಾದ ಪವನ್ ಚಂದ್ರಶೆಟ್ಟಿ ವಾದಿಸಿದರು.

ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು:  ಟೋಕರೆ ಕೋಲಿ, ಅಂಬಿಗ, ಬಾರಕೇರ ಸೇರಿದಂತೆ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ಧಿಗೆ ಒತ್ತು ನೀಡುವಂತೆ ಆಗ್ರಹಿಸಿ ಮಂಗಳವಾರ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಸದಸ್ಯರು ಬೆಂಗಳೂರು ಚಲೋ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಪೀಠದ ಅಧ್ಯಕ್ಷ ಶ್ರೀ ಶಾಂತಮುನಿ ಮಹಾಸ್ವಾಮಿಗಳು ಫ್ರೀಡಂಪಾರ್ಕ್‌ನಲ್ಲಿ ಜ್ಯೋತಿ ಬೆಳಗುವ ಮೂಲಕ ಬೆಂಗಳೂರು ಚಲೋಗೆ ಚಾಲನೆ ನೀಡಿದರು. ಅದಕ್ಕೂ ಮುನ್ನ ಪ್ರತಿಭಟನಾಕಾರರು ಸಿಟಿ ರೇಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಮಹಾಸ್ವಾಮಿಗಳು, ನಿಜಸರಣ ಅಂಬಿಗರ ಚೌಡಯ್ಯ ಅವರ ಜಯಂತೋತ್ಸವಕ್ಕೆ ಜನವರಿ 21ರಂದು ರಜೆ ಘೋಷಣೆ ಮಾಡಬೇಕು. ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಅಭಿವೃದ್ಧಿಗೆ 25 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ತಾಲೂಕು ಮಟ್ಟದಲ್ಲಿ ಆಚರಿಸಬೇಕು. ಜನಾಂಗದ ವಿವಿದೋದ್ದೇಶ ಅಭಿವೃದ್ಧಿಗೆ ಬೆಂಗಳೂರು ಸುತ್ತುಮುತ್ತ ಜಮೀನು ನೀಡಬೇಕು. ಈ ಜನಾಂಗದ ಮೇಲಿನ ಜನರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ತಡೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಿ ಹಿಂದುಳಿದವರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದರು. ಪ್ರತಿಭಟನೆಯಲ್ಲಿ ಅಪಾರ ಸದಸ್ಯರು ಭಾಗವಹಿಸಿದ್ದರು.

ಆ.1ರಿಂದ  ಕ್ರೀಡಾ ಸ್ಪರ್ಧೆ
ಶ್ರೀರಾಮ ವಿದ್ಯಾಲಯವು 19ನೇ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಅಂತರ್‌ಶಾಲಾ ವಾಲಿಬಾಲ್ ಕ್ರೀಡಾ ಸ್ಪರ್ಧೆಯನ್ನು ಆ.1ರಿಂದ 3ರವರೆಗೆ ನಡೆಸಲಿದೆ. 14ವರ್ಷ ವಯೋವುತಿಯೊಳಗಿನ ಭಾಗವಹಿಸಲಿಚ್ಚಿಸುವ ತಂಡಗಳು ಜು.30ರೊಳಗಾಗಿ ಪ್ರವೇಶ ಪತ್ರಗಳನ್ನು ಪಡೆಯಲು ಕೋರಲಾಗಿದೆ.ಮಾಹಿತಿಗೆ-26564250, 9448867958.

28ರಂದು ಆಯುರ್ವೇದ ಉಚಿತ ಚಿಕಿತ್ಸಾ ಶಿಬಿರ
ಬೆಂಗಳೂರು: ಧನ್ವಂತರಿ ಆಸ್ಪತ್ರೆಯಲ್ಲಿ ಜು.28ರಂದು ಆಯುರ್ವೇದ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ. ಬೊಜ್ಜುತನ, ಆರ್ಥ್ರೈಟಿಸ್ ಹಾಗೂ ಬೆನ್ನು ಹುರಿ ಸಂಬಂಧಿತ ನೋವುಗಳಿಗೆ ಶಿಬಿರ ಸಹಾಯಕವಾಗಲಿದೆ. ಶಿಬಿರಕ್ಕೆ ಬಂದವರಿಗೆ ಉಚಿತ ಪರೀಕ್ಷೆ, ಚಿಕಿತ್ಸೆ ಬಗ್ಗೆ ಸವಿಸ್ತಾರ ತಿಳುವಳಿಕೆ ಹಾಗೂ ಔಷಧಿಗಳನ್ನು ವಿತರಿಸಲಾಗುವುದು. ವಿವರ ಮತ್ತು ನೋಂದಣಿಗೆ-  ಡಾ.ಎಸ್.ಎಸ್.ಹಿರೇಮಠ- 935377772, 8105136482.

ಟೈಲರಿಂಗ್ ತರಬೇತಿ ಶಿಬಿರ
ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಮೂರು ತಿಂಗಳ ಅವಧಿಯ ಉಚಿತ ಟೈಲರಿಂಗ್ ತರಬೇತಿ ಹಮ್ಮಿಕೊಂಡಿದೆ. ತರಬೇತಿ ನಂತರ ಪ್ರಮಾಣಪತ್ರ ಲಭ್ಯವಿದ್ದು, ಉದ್ಯೋಗಾವಕಾಶ ಬಯಸುವವರಿಗೆ ಉದ್ಯೋಗ ಕಲ್ಪಿಸಲಾಗುವುದು. ಹೆಬ್ಬಾಳ, ಮನೋರಾಯನಪಾಳ್ಯ, ಕನಕನಗರ, ಚಾಮುಂಡಿನಗರ, ಮಠದಹಳ್ಳಿ, ಗಂಗಾನಗರ, ಚೋಳನಾಯಕನಹಳ್ಳಿ, ಆರ್.ಟಿ.ನಗರ ಸುತ್ತಮುತ್ತಲಿನ ಪ್ರದೇಶದ ಎಸ್ಸಿ/ಎಸ್ಟಿ/ಜನರಲ್ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಮಾಹಿತಿಗೆ - 9980124423, 9845157001.

ಜೆಆರ್‌ಎಫ್ ಹುದ್ದೆಗೆ ಅರ್ಜಿ
ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗವು ಐ.ಸಿ.ಎಂ.ಆರ್.ನವದೆಹಲಿ ಪ್ರಾಜೆಕ್ಟ್‌ನಡಿಯಲ್ಲಿ ಒಂದು ಕಿರಿಯ ಸಂಶೋಧನಾ ವಿದ್ಯಾರ್ಥಿ (ಜೆಆರ್‌ಎಫ್) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಎಂ.ಎಸ್ಸಿ ಪದವಿಯಲ್ಲಿ ಶೇ.55ಕ್ಕೂ ಹೆಚ್ಚು ಅಂಕ ಪಡೆದಿರುವವರು ಜು.24ರಂದು ಸಂದರ್ಶನಕ್ಕೆ  ಹಾಜರಾಗಲು ಕೋರಲಾಗಿದೆ.

ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು ವಿಶ್ವವಿದ್ಯಾಲಯ ಪರಿಸರ ವಿಜ್ಞಾನ ವಿಭಾಗದ ವತಿಯಿಂದ ನ್ಯಾಷನಲ್ ಏರ್ ಕ್ವಾಲಿಟಿ ಪ್ರೋಗ್ರಾಮ್ ಫಾರ್ ಕರ್ನಾಟಕ ಪ್ರಾಜೆಕ್ಟ್ ಅಡಿಯಲ್ಲಿ ಸೇವೆ ಸಲ್ಲಿಸಲು ವೈಜ್ಞಾನಿಕ ಸಹಾಯಕ (1) ಮತ್ತು ಲ್ಯಾಬ್ ಅಸಿಸ್ಟೆಂಟ್ (3) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಸಂಪೂರ್ಣ ವಿವರಗಳನ್ನು ಆ.10ರೊಳಗಾಗಿ ವಿವಿಗೆ ಕಳುಹಿಸಬಹುದು. ಮಾಹಿತಿಗೆ- 9880839109.

ಧನ ಸಹಾಯಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ ಮಹಿಳೆಯರಿಗೆ ಉದ್ಯೋಗಿ ವಾಹಿನಿ ಯೋಜನೆಯಡಿ ಸಾಲ ಹಾಗೂ ಸಹಾಯಧನ ಮಂಜೂರಾತಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಮಹಿಳೆಯರು ಆ.20ರೊಳಗಾಗಿ ತಮ್ಮ ವ್ಯಾಪ್ತಿಗೆ ಬರುವ ಶಿಶು ಅಭಿವೃದ್ಧಿ ಯೋಜನೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9663683150/ 984435045893 ಸಂಪರ್ಕಿಸಬಹುದು.

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಇಂಟಿಗ್ರೇಟೆಡ್ ಬಯಾಲಾಜಿಕಲ್ ಸೈನ್ಸ್ ವಿದ್ಯಾರ್ಥಿಗಳಿಗೆ ಕಾಂಪ್ಯೂಟೇಶ್ನಲ್ ಬಯಾಲಜಿ, ಬಯೋ ಮ್ಯಾತ್‌ಮಿಟಿಕ್ಸ್, ಭಾರತ ಸಂವಿಧಾನ, ಕನ್ನಡ, ಹಿಂದಿ, ಸಂಸ್ಕೃತ, ಆಂಗ್ಲ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯುಜಿಸಿ ನಿಯಾಮಾನುಸಾರ ಆರ್ಹತೆ ಹೊಂದಿದ ಅಭ್ಯರ್ಥಿಗಳು ತಮ್ಮ ಸ್ವ-ಪರಿಚಯ, ಬೋಧನಾ ಅನುಭವ, ಎನ್‌ಇಟಿ/ಎಸ್‌ಎಲ್‌ಇಟಿ/ ಪಿಎಚ್‌ಡಿ ಬೋಧನಾ ಮತ್ತು ಸಂಶೋಧನಾ ಅನುಭವ. ಜಾತಿ ಪ್ರಮಾಣ ಪತ್ರ ಲಗತ್ತಿಸಿ ಜು.31ರೊಳಗೆ ಡಾ.ಎಚ್.ಪಿ.ಪುಟ್ಟರಾಜು, ಸಂಯೋಜಕರು, ಇಂಟಿಗ್ರೇಟೆಡ್ ಬಯಾಲಾಜಿಕಲ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಆ.5ರಂದು ಕುಲಪತಿಗಳ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.

'ರಾಮಬಾಣ' ವ್ಯಂಗ್ಯಚಿತ್ರ ಪ್ರದರ್ಶನ
ಬೆಂಗಳೂರು: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ವತಿಯಿಂದ 'ರಾಮಬಾಣ' ರಾಜಕೀಯ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಜು.27ರಿಂದ ಆರಂಭಿಸಲಿದೆ. ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಪ್ರದರ್ಶನ ಏರ್ಪಾಡಾಗಿದ್ದು, ಸಾರ್ವಜನಿಕರಿಗೆ ಆ.10 ರವರೆಗೂ ಮುಕ್ತ ಅವಕಾಶವಿದೆ. ರಾಮಧ್ಯಾನಿ ಎಂದೇ ಹೆಸರಾಗಿರುವ ಆರ್.ಕೃಷ್ಣಮೂರ್ತಿ ರಚಿಸಿರುವ ರಾಜಕೀಯ ವ್ಯಂಗ್ಯಚಿತ್ರಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದ್ದು, ವಿವಿಧ ಪತ್ರಿಕೆಗಳಲ್ಲಿ ಬಂದಿರುವ, ವಿವಿಧ ಪ್ರಶಸ್ತಿಗಳನ್ನು ಪಡೆದಿರುವ 61 ಹೆಸರಾಂತ ವ್ಯಂಗ್ಯಚಿತ್ರಗಳನ್ನು ಪ್ರದರ್ಶನದಲ್ಲಿ ನೋಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.