ಭಯದ ನೆರಳಲ್ಲಿ ಜನತೆ: ಸಿದ್ದರಾಮಯ್ಯ
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಕೇವಲ ಒಂದು ಕೋಮಿನ ಜನ ಮಾತ್ರ ಭೀತಿಯಿಂದ ಬದುಕುತ್ತಿಲ್ಲ, ಎಲ್ಲ, ಧರ್ಮ, ಜಾತಿಯ ಜನರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಎಲ್ಲರೂ ಭಯದ ನೆರಳಲ್ಲಿ ಬದುಕುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಉಳ್ಳಾಲದಿಂದ ಉಡುಪಿ ಮಲ್ಪೆವರೆಗೆ ನಾಲ್ಕು ದಿನಗಳು 'ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ಕಾರದಿಂದ ಜನರಿಗೆ ರಕ್ಷಣೆ ಇದೆ ಎಂಬ ಭಾವನೆ ಬರಬೇಕು. ಸುರಕ್ಷತೆ ಭಾವನೆಯಿಂದ 6.5ಕೋಟಿ ಜನರು ಬದುಕಬೇಕಾಗಿದೆ. ಕಾಂಗ್ರೆಸ್ ಎಲ್ಲರನ್ನು ಸಮಾನವಾಗಿ ನೋಡುತ್ತದೆ ಎಂದರು.
ಕೋಮುವಾದ ಪ್ರತಿಪಾದಕರು ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯದಲ್ಲಿ ಕೋಮುದ್ವೇಷ ಭುಗಿಲೆದ್ದಿದೆ. ಕರಾವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಕೋಮುವಾದಿ ಪಕ್ಷ ಎನ್ನುತ್ತಲೇ ದೇವೇಗೌಡರು ಪುತ್ರ ವ್ಯಾಮೋಹದಿಂದ ಬಿಜೆಪಿ ಜತೆ ಸೇರಿಕೊಂಡರು. ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ನಡೆಸಿದರು. ಅಂದು ಮೈತ್ರಿ ಮಾಡದಿದ್ದರೆ ಇಂದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಇರಲಿಲ್ಲ.
'ನಾನು ಮೈಮರೆತಾಗ ಮಗ ಹಿಂಬಾಗಿಲಿಂದ ಅಧಿಕಾರ ಪಡೆದ. ಈಗ ಮುಂಬಾಗಿಲಿಂದ ಅವಕಾಶ ಕೊಡಿ' ಎಂದು ಮರ್ಯಾದೆ ಬಿಟ್ಟು ದೇವೇಗೌಡರು ಕೇಳುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದದ್ದು ಗೊತ್ತಾಗದು ಎಂದು ತಿಳಿದಿದ್ದಾರೆ.
ಚರ್ಚ್, ಪಬ್, ಮಸೀದಿ, ಹೋಮ್ಸ್ಟೇ ದಾಳಿ, ಬಿಜೆಪಿಯವರು ಉಡುಪಿಯಲ್ಲಿ ನಡೆಸಿದ ರೇವು ಪಾರ್ಟಿ ಒಂದೇ ಎರಡೇ, ಆರ್ಎಸ್ಎಸ್, ಬಜರಂಗದಳ, ವಿಶ್ವಹಿಂದು ಪರಿಷತ್, ಶ್ರೀರಾಮಸೇನೆ ದಾಳಿ ನಿರ್ಮಾಪಕರು, ಇದಕ್ಕೆ ಸಾಕ್ಷಿಗಳಿವೆ. ಕಾಲೇಜಿನಲ್ಲಿ ಬೇರೆ, ಬೇರೆ ಧರ್ಮದ ಹುಡುಗ, ಹುಡುಗಿಯಲು ಒಟ್ಟಿಗೆ ಕುಳಿತುಕೊಂಡು ಕಾಫಿ ಕುಡಿಯುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ಟರು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಅವರು ಜಿಲ್ಲಾಧಿಕಾರಿ, ಎಸ್ಪಿ, ಸಚಿವರ ಪಕ್ಕ ಕುಳಿತುಕೊಳ್ಳುತ್ತಾರೆ ಇದು ನಾಚಿಕೆಗೇಡು.
ವಿಧಾನಸಭೆಯಲ್ಲಿ ಸಚಿವರು ನೀಲಿ ಚಿತ್ರ ನೋಡುತ್ತಾರೆ. ಶೋಭಾ ಕರಂದ್ಲಾಜೆ ದಿಲ್ಲಿ ಅತ್ಯಾಚಾರ ವಿರುದ್ಧ ಬೊಬ್ಬೆ ಹೊಡೆಯುತ್ತಾರೆ. ಆದರೆ ತನ್ನ ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರ ನಡೆಸಿದ ಶಾಸಕ ಹಾಲಪ್ಪ ಅವರ ಜತೆಯಲ್ಲಿಯೇ ಇದ್ದಾರೆ. ಇಂಥಾ ಸರ್ಕಾರವನ್ನು ಕಿತ್ತು ಹಾಕಬೇಕು. ಜೆಡಿಎಸ್ 3,4 ಜಿಲ್ಲೆಗಳಲ್ಲಿ ಮಾತ್ರ ಪ್ರಭಾವ ಇದೆ. ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಬಿಜೆಪಿಯಲ್ಲಿ ಇದ್ದವುಗಳೇ. ಇವುಗಳು ಪರಿಣಾಮ ಬೀರುವುದಿಲ್ಲ. ಶೇ.50 ಸಚಿವರು ಜೈಲು, ಬೇಲು ಎಂದುಕೊಂಡಿದ್ದಾರೆ. ಇನ್ನು ಕೆಲವರು ಜೈಲು ಸೇರಲು ಸಿದ್ಧವಾಗಿದ್ದಾರೆ. ಖಜಾನೆಯ ರು. ಲಕ್ಷ ಕೋಟಿ ಲೂಟಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದರೆ ಲೋಕಾಯುಕ್ತರು ಶಿಫಾರಸು ಮಾಡಿದ್ದನ್ನು ಜಾರಿಗೆ ತರುತ್ತೇವೆ. ವಿಶೇಷ ಕೋರ್ಟ್ ಸ್ಥಾಪಿಸಿ, ಎಲ್ಲ ಲೂಟಿಕೋರರನ್ನು ಜೈಲಿಗೆ ಅಟ್ಟುತ್ತೇವೆ ಎಂದರು.
ರಾಜ್ಯಪಾಲರ ಜತೆ ಭೇಟಿಯಾಗಿ ತಕ್ಷಣ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವಂತೆ ವಿನಂತಿ ಮಾಡಿದ್ದೇನೆ. ಸೋಮವಾರ ರಾಜ್ಯಪಾಲರ ಜತೆ ಮಾತುಕತೆ ನಡೆಸಿದ್ದು, ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡುವಂತೆ ಹೇಳಿದ್ದೇನೆ. ಶಾಸಕರು ನೀಡಿದ ರಾಜೀನಾಮೆ ಕ್ರಮಬದ್ಧವಾಗಿದ್ದರೆ ಸ್ಪೀಕರ್ ತಕ್ಷಣ ಸ್ವೀಕರಿಸಬೇಕು. ಸ್ಪೀಕರ್ ಮುಂದಿನ ಕ್ರಮ ಕಾಯುತ್ತೇವೆ, ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ.
-ಪ್ರತಿಪಕ್ಷ ನಾಯಕ ಸಿದ್ದಾರಾಮಯ್ಯ
ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಬಜೆಟ್ ಮಂಡಿಸಲು ಅರ್ಹತೆ ಇಲ್ಲ. ಪಕ್ಷಪಾತಿ ಸ್ಪೀಕರ್ 2 ಬಾರಿ ಸರ್ಕಾರ ಉಳಿಸಲು ಪ್ರಯತ್ನ ಮಾಡಿದರು. ಈ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈಗ ಮೂರನೇ ಬಾರಿ ಪ್ರಯತ್ನ ಮಾಡಿದ್ದಾರೆ. ಕ್ಲಿಷ್ಟ ಸಂದರ್ಭದಲ್ಲಿ ಸ್ಪೀಕರ್ ನಾಪತ್ತೆಯಾಗಿರುವುದು ಸರಿ ಇಲ್ಲ. ಯಾವುದೇ ಪಕ್ಷಕ್ಕೆ ಸೇರಿದರೂ ಸ್ಪೀಕರ್ ಪಕ್ಷಾತೀತರಾಗಿರಬೇಕು. 2,3 ದಿನಗಳವರೆಗೆ ಪರಿಸ್ಥಿತಿತ ಅವಲೋಕಿಸುತ್ತೇವೆ. ಫೆ.4 ರಂದು ಶಾಸಕಾಂಗ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುತ್ತೇವೆ.
-ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ.
ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳ ಬಿಜೆಪಿ ಸರ್ಕಾರ ತನ್ನದೇ ಭಾರದಿಂದ ಕುಸಿಯಲಿದೆ. ಆಂತರಿಕ ಕಲಹ ಸರ್ಕಾರವನ್ನು ಬಲಿಪಡೆಯಲಿದೆ. ಅಮೃತವನ್ನು ಕುಡಿದವರೇ ಬದುಕುವುದಿಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರೆಯೇ?
-ಎಂ.ವೀರಪ್ಪ ಮೊಯ್ಲಿ, ಕೇಂದ್ರ ಇಂಧನ ಸಚಿವ
ಪಾದಯಾತ್ರೆಯಲ್ಲಿ 'ಕೈ' ಚಳಕ
ಮಂಗಳೂರು ಉತ್ತರ ಕ್ಷೇತ್ರದ ಟೆಕೆಟ್ ಆಕಾಂಕ್ಷಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಪಾದಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಪರ್ಸ್ ಕಳೆದುಕೊಂಡರು. ಕಳ್ಳರ ಕೈ ಚಳಕಕ್ಕೆ 20 ಸಾವಿರ ಮಾಯವಾಗಿತ್ತು. ಜಿಲ್ಲಾ ಪಂಚಾಯ್ತಿ ಸದಸ್ಯ ಮೆಲ್ವಿನ್ ಡಿಸೋಜ ಅವರ ಪರ್ಸ್ ಎಗರಿ ಹೋಗಿತ್ತು. ವಿಶೇಷ ಎಂದರೆ ಇವರಲ್ಲಿ ಇದ್ದದ್ದು 20 ಸಾವಿರ. ನಜೀರ್ ಅಹಮ್ಮದ್ ಅವರ ಪರ್ಸ್ ಹೋಗಿತ್ತು. ಇದು ಆರಂಭದಲ್ಲಿ ಕೈ ಚಳಕ. ದಾಖಲೆ, ಐಡಿ ಕಾರ್ಡ್ಗಳನ್ನಾದರೂ ವಾಪಸ್ ನೀಡಿ ಎಂದು ಸಂಘಟಕರು ಗೋಗರೆದರೂ ಕಳ್ಳರಿಗೆ ಕೇಳಿಸಲಿಲ್ಲ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

