ದಕ್ಷಿಣ ಕನ್ನಡ

ಉನ್ನತ ಶಿಕ್ಷಣದಲ್ಲಿ ಬದಲಾವಣೆ

Published On :

ಮಂಗಳೂರು: ಉನ್ನತ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಲು ಸರ್ಕಾರ ಉದ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
 ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಎಲ್ಲರಿಗೆ ಬಯಸಿದ ಶಿಕ್ಷಣ ಸಿಗುವಂತಾಗಬೇಕು. ಅದಕ್ಕೆ ಬೇಕಾದ ಪೂರಕ ವಾತಾರಣ ನಿರ್ಮಿಸಲಾಗುವುದು. ಮಹಿಳೆಯರು, ಶೋಷಿತರು, ಬಡವರು, ರೈತರ ಉದ್ಧಾರ ಸರ್ಕಾರದ ಉದ್ದೇಶವಾಗಿದ್ದು, ಸ್ವತಂತ್ರವಾಗಿ ಜೀವನ ನಡೆಸಬೇಕು ಎಂಬುದು ಇರಾದೆ ಎಂದರು.
 ದೇಶವನ್ನು ಭಯೋತ್ಪಾದನೆ, ಧರ್ಮದ ಹೆಸರಲ್ಲಿ ವಿಭಜಿಸುವ ಯತ್ನ ನಡೆಯುತ್ತಿದ್ದು, ಜತೆಗೆ ನಕ್ಸಲೀಯ ಚಟುವಟಿಕೆಯನ್ನು ನಿಲ್ಲಿಸಬೇಕು. ಬಡತನ, ನಿರುದ್ಯೋಗ, ಲಂಚಗುಳಿತನಕ್ಕೆ ಕಡಿವಾಣ ಹಾಕಿ ಎಲ್ಲೆಡೆಯಿಂದ ಜ್ಞಾನ ಹರಿದುಬರಬೇಕು ಎಂದು ಆಶಿಸಿದರು.
5 ವರ್ಷದಲ್ಲಿ ಸಾಧಿಸಿದ್ದು...: ಜಿಲ್ಲೆಯಲ್ಲಿ 5 ವರ್ಷಗಳಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 23555 ಫಲಾನುಭವಿಗಳು ಮಾಸಿಕ ರು. 500 ಪಡೆಯುತ್ತಿದ್ದು, 5429 ಮಂದಿ ಅಂಗವಿಕಲರಿಗೆ ಮಾಸಿಕ ರು. 1 ಸಾವಿರದಂತೆ ಪಡೆಯುತ್ತಿದ್ದಾರೆ. ಮಂಗಳಾ ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೆಟಿಕ್ ಟ್ರಾಕ್ ನಿರ್ಮಾಣಕ್ಕೆ ರು. 3.60 ಕೋಟಿ ಮಂಜೂರಾಗಿದ್ದು, ಸಿವಿಲ್ ಕಾಮಗಾರಿ ಮುಗಿದಿದೆ. ಟ್ರಾಕ್ ಅಳವಡಿಕೆ ಪ್ರಾರಂಭಿಸಲಾಗುವುದು. ಮಂಗಳೂರಿನ ಮಿನಿ ವಿಧಾನಸೌಧಕ್ಕೆ ರು. 4 ಕೋಟಿ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಮನೆ ಮನೆ ಕಸ ಸಂಗ್ರಹಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಘನತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರ್ವೋತ್ತಮ ಪ್ರಶಸ್ತಿ: ಇದೇ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖಾ ಅಧಿಕಾರಿಗಳಾದ ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಡಾ.ದುರ್ಗಾ ಪ್ರಸಾದ್, ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಂಜುನಾಥ ಶೆಟ್ಟಿ, ಪಡಿತರ ಮತ್ತು ಆಹಾರ ಇಲಾಖಾ ಉಪನಿರ್ದೇಶಕ ಶರಣಬಸಪ್ಪ, ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಗುಮಾಸ್ತೆ ಜೂಲಿಯಟ್ ಫೆರ್ನಾಂಡಿಸ್‌ರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
 ಕ್ರೀಡಾರಂಗದಲ್ಲಿ ಸಾಧನೆ ತೋರಿಸಿದ ಅವನಿ ಕುಮಾರಿ, ಸಂಕೇತ, ಕೃಷಿ ಸಾಧಕ ಸೀತಾರಾಮ ಶೆಟ್ಟಿ, ರಾಮ ಸುವರ್ಣ, ಚಂದ್ರಶೇಖರ ಶೆಟ್ಟಿ, ಹಮೀದ್‌ರನ್ನು ಗೌರವಿಸಲಾಯಿತು. ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಎನ್‌ಸಿಸಿ ನೇವಿ ಹಿರಿಯ ಮತ್ತು ದ್ವಿತೀಯ ಸ್ಥಾನ ಪಡೆದ ಎನ್‌ಸಿಸಿ ವಾಯುದಳ ಹಿರಿಯ ತಂಡಕ್ಕೆ ಪುರಸ್ಕಾರ ನೀಡಲಾಯಿತು.
 ಪಥಸಂಚಲನದಲ್ಲಿ ವಿವಿಧ 20 ತಂಡಗಳು ಭಾಗವಹಿಸಿದ್ದವು. ನಗರದ ವಿವಿಧ ಶಾಲೆಗಳ 5 ಸಾವಿರ ವಿದ್ಯಾರ್ಥಿಗಳಿಂದ ಗಾನ-ನೃತ್ಯ-ಭಾವೈಕ್ಯ ಸಂಗಮ ನೃತ್ಯ ನಡೆಯಿತು. ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನಿಂದ ವಿಂಟೇಜ್ ಕಾರುಗಳ ಪ್ರದರ್ಶನ ಏರ್ಪಟ್ಟಿತು. ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ.ಖಾದರ್, ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ, ರಾಜ್ಯ ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ತಹಸೀಲ್ದಾರ್ ರವಿಚಂದ್ರ ನಾಯಕ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.