ಬಯಲುಸೀಮೆಗೂ ಬಂತು ಮಳೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುರುವಾರವೂ ಮಳೆ ಮುಂದುವರೆದಿತ್ತು. ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಗುರುವಾರ ಮಳೆಯ ಆರ್ಭಟ ಮುಂದುವರೆದಿದ್ದರಿಂದ ಸ್ಥಳೀಯ ಪರಿಸ್ಥಿತಿಯ ಆಧಾರದ ಮೇಲೆ ಶಾಲೆಗಳಿಗೆ ರಜೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಮಧ್ಯಾಹ್ನ ಆರಂಭಗೊಂಡ ಮಳೆ ಗುರುವಾರ ಸಂಜೆಯಾದರೂ ಬಿಡುವು ನೀಡಿರಲಿಲ್ಲ. ಮಲೆನಾಡು ಸೇರಿದಂತೆ ಜಿಲ್ಲೆಯ ಬಯಲುಸೀಮೆಯಲ್ಲೂ ಮಳೆ ಮುಂದುವರೆದಿದೆ.
ಮಳೆಯಿಂದಾಗಿ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ನದಿಗಳ ಆಸುಪಾಸಿನಲ್ಲಿರುವ ಹೊಲ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮಲೆನಾಡಿನಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ತುಂಗಾ ಹಾಗೂ ಭದ್ರಾ ಜಲಾಶಯಗಳ ಒಳ ಹರಿವು ಹೆಚ್ಚಳವಾಗಲಿದೆ. ಮಳೆಯಿಂದಾಗಿ ಮಲೆನಾಡಿನಲ್ಲಿ ಬತ್ತದ ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ. ಆದರೆ, ತೋಟಗಾರಿಕೆ ಬೆಳೆಗಳಿಗೆ ಮಳೆ ದುಷ್ಪರಿಣಾಮ ಬೀರಿದೆ.
ಜಿಲ್ಲೆಯ ಏಳು ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಒಂದೇ ದಿನದಲ್ಲಿ 226 ಮಿ.ಮೀ. ಮಳೆ ಬಂದಿದೆ. ಮೂಡಿಗೆರೆ ಪಟ್ಟಣದಲ್ಲಿ 98.6, ಜಾವಳಿ- 80.4, ಗೋಣಿಬೀಡು- 59, ಕಳಸ- 121.2, ಕೊಪ್ಪ- 149, ಹರಿಹರಪುರ- 153.2, ಜಯಪುರ- 112, ಕಮ್ಮರಡಿ- 65.3, ಬಸರೀಕಟ್ಟೆ- 190.3, ಎನ್.ಆರ್.ಪುರ- 81, ಬಾಳೆಹೊನ್ನೂರು- 81, ಮೇಗರಮಕ್ಕಿ- 60, ಶೃಂಗೇರಿ- 95.6, ಕಿಗ್ಗಾ- 161.7, ಕೆರೆಕಟ್ಟೆ- 178.7 ಮಿ.ಮೀ. ಮಳೆ ಬಂದಿದೆ.
ಚಿಕ್ಕಮಗಳೂರು ನಗರದಲ್ಲಿ 8.3, ವಸ್ತಾರೆ- 24, ಜೋಳ್ದಾಳ್- 27.4, ಆಲ್ದೂರು- 42.3, ಅತ್ತಿಗುಂಡಿ- 45.2, ಸಂಗಮೇಶ್ವರಪೇಟೆ- 63, ಬ್ಯಾರವಳ್ಳಿ- 49, ಕಡೂರು- 7.6, ಯಗಟಿ- 8.2, ಸಖರಾಯಪಟ್ಟಣ- 14, ಬೀರೂರು- 11.8, ಎಮ್ಮೆದೊಡ್ಡಿ- 40.5, ತರೀಕೆರೆ- 27.4, ಲಕ್ಕವಳ್ಳಿ- 52.2, ಅಜ್ಜಂಪುರ- 9.6, ಶಿವನಿ- 13.3, ಬುಕ್ಕಾಂಬೂದಿ- 12.1, ಲಿಂಗದಹಳ್ಳಿ- 22.7, ತಣಿಗೇಬೈಲು- 32.4, ತ್ಯಾಗದಬಾಗಿ- 37.8, ರಂಗೇನಹಳ್ಳಿಯಲ್ಲಿ 45 ಮಿ.ಮೀ. ಮಳೆ ಬಂದಿದೆ.
ತರೀಕೆರೆ
ಪಟ್ಟಣ ಮತ್ತು ಸುತ್ತಮುತ್ತ ಪುಷ್ಯ ನಾಲ್ಕನೇ ಪಾದದ ಮಳೆ ಬುಧವಾರ ಮತ್ತು ಗುರುವಾರ ಎಡಬಿಡದೆ ಹಗಲು ರಾತ್ರಿ ಸುರಿಯಿತು. ಗುರುವಾರ ನಾಗರ ಪಂಚಮಿ ಅಂಗವಾಗಿ ಭಕ್ತರು ಮಳೆಯಲ್ಲೇ ಅರಳಿಕಟ್ಟೆ ಮತ್ತು ನಾಗರಕಟ್ಟೆಗೆ ತೆರಳಿ ನಾಗದೇವತೆಗೆ ತನಿ ಎರೆದು ಪೂಜೆ ಸಲ್ಲಿಸಿದರು. ಪಟ್ಟಣದ ಅನೇಕ ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿವೆ.
ಮೂಡಿಗೆರೆ
ತಾಲೂಕಿನಾದ್ಯಂತ ಕುಂಭದ್ರೋಣ ಮಳೆ ಬಿಡದೆ ಸುರಿಯುತ್ತಿದ್ದು, ವಾಣಿಜ್ಯ ಬೆಳೆಗಳಾದ ಕಾಫಿ, ಅಡಕೆ ಕಾಳುಮೆಣಸಿಗೆ ಹಾನಿಯಾಗುತ್ತಿದ್ದು, ಕೋಟ್ಯಂತರ ರು. ನಷ್ಟ ಉಂಟಾಗಿದೆ.
ಕೆರೆ ದಂಡೆ ಒಡೆದು ಭಾರಿ ನಷ್ಟ
ನರಸಿಂಹರಾಜಪುರ: ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಹಾತೂರು ಗ್ರಾಮದ ನರಿಮಸೆ ಕೆರೆ ದಂಡೆ ಒಡೆದು ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.
ಬುಧವಾರ ಸುರಿದ ಜೋರು ಮಳೆಯ ಪರಿಣಾಮ ರಾತ್ರಿ ಹಾತೂರು ಗ್ರಾಮದ ನರಿ ಮಸೆ ಕೆರೆಯು ಒಡೆದು ಕೆರೆಯ ಕೆಳ ಭಾಗದ 20 ಎಕರೆ ಜಮೀನಿನ ಮೇಲೆ ನೀರು ಹಾದು ಹೋಗಿರುವುದರಿಂದ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ. ರೈತ ಬೆಳ್ಳೂರಿನ ವೆಂಕರಮಣಯ್ಯ ಅವರ ನಾಟೀ ಮಾಡಿದ ಗದ್ದೆಯಲ್ಲಿ ನೀರು ಹರಿದು ಗದ್ದೆಯ ಮೇಲೆ ಮರುಳು ತುಂಬಿ ನಿಂತಿದೆ. ಪಕ್ಕದ ರೈತರಾದ ಸೀತಮ್ಮ, ನವೀನ್, ಕೆ.ಪಿ.ಕೃಷ್ಣಮೂರ್ತಿ,ಚಂದ್ರೇಗೌಡ ಎಂಬುವರ ಜಮೀನಿನಲ್ಲೂ ನೀರು ಹರಿದು ಫಸಲು ಹಾನಿಯಾಗಿದೆ. ಬತ್ತದ ಸಸಿ, ಅಡಕೆ, ರಬ್ಬರ್ ಗಿಡ ಹಾಳಾಗಿದೆ. ಬತ್ತದ ಗದ್ದೆಗಳ ಅಂಚುಗಳು ನೆಲ ಸಮವಾಗಿದ್ದು ಗದ್ದೆಗಳ ಮಧ್ಯೆ ಹಳ್ಳಗಳಾಗಿದೆ. ಕೆಲವು ತಂತಿ ಬೇಲಿಗಳು ಉರುಳಿ ಬಿದ್ದಿದೆ.
ಅಧಿಕಾರಿಗಳ ಭೇಟಿ: ಗುರುವಾರ ಬೆಳಿಗ್ಗೆ ತಹಸೀಲ್ದಾರ್ ಲೋಕೇಶಪ್ಪ, ಜಿಪಂ ಸಹಾಯಕ ಕಾರ್ಯಪಾಲಕ ಮಹಮ್ಮದ್ ಹುಸೇನ್, ಇಂಜಿನಿಯರ್ ಅಶೋಕ್, ಕಿಶೋರ್, ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರಪ್ಪ, ಸೀತೂರು ಗ್ರಾಪಂ ಸದಸ್ಯ ಕೆ.ಎಸ್.ಉಮೇಶ್ ಹಾತೂರು ಗ್ರಾಮದ ನರಿಮಸೆ ಕೆರೆ ಹಾಗೂ ಹಾನಿಗೊಳಗಾದ ಬತ್ತದ ಗದ್ದೆ,ತೋಟಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

