ಚಿಕ್ಕಮಗಳೂರು

ನಗರಸಭೆ 'ಕಸ'ರತ್ತು

Published On :

ಚಿಕ್ಕಮಗಳೂರು: ನಗರದಲ್ಲಿ ಮನೆ ಮನೆ ಕಸ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಅದರ ವಿಲೇವಾರಿ ನಗರಸಭೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ನಗರಸಭೆ ಸದಸ್ಯರು ಅಧ್ಯಕ್ಷರಿಗೆ ಸಲಹೆ ನೀಡಿದರು.
ನಗರಸಭಾಧ್ಯಕ್ಷ ಕೆ.ಎಸ್. ಪುಷ್ಪರಾಜ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ಕೇಂದ್ರ ಸರ್ಕಾರದ ನೆರವಿನ ಯುಐಡಿಎಸ್‌ಎಸ್‌ಎಂಟಿ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ನಗರದಲ್ಲಿ ರಸ್ತೆ (ಎಕ್ಸ್ ಪ್ರೆಸ್ ವೇ)ಗಳ ನಿರ್ಮಾಣ, ಮಳೆ ನೀರು ಚರಂಡಿ ನಿರ್ಮಾಣ ಹಾಗೂ ಅಭಿವೃದ್ಧಿ, ಘನತ್ಯಾಜ್ಯ  ವಸ್ತುಗಳ ನಿರ್ವಹಣೆ, ಜಲರಾಶಿಗಳ ಸಂರಕ್ಷಣೆ, ಹೆರಿಟೇಜ್ ಪ್ರದೇಶಗಳ ಅಭಿವೃದ್ಧಿಗಾಗಿ ರು. 31 ಕೋಟಿ  ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಕಸ ವಿಲೇವಾರಿಗೆ ಬಂದಿರುವ ಹಣವನ್ನು ಕಸದ ರೀತಿಯಲ್ಲಿ ಸುರಿಯಬೇಡಿ, ಇಂದಾವರ ಗ್ರಾಮ ಸಮೀಪದಲ್ಲಿ ಕಸ ಹಾಕುತ್ತಿರುವುದರಿಂದ ನಿಜವಾಗಿಯೂ ಅಲ್ಲಿನ ಜನರಿಗೆ ತೊಂದರೆಯಾಗುತ್ತಿದೆಯಾ ಅಥವಾ ನಗರಸಭೆಗೆ ಕೆಲವರು ಬ್ಲಾಕ್ ಮೇಲ್ ಮಾಡುತ್ತಿದ್ದಾರಾ ಎಂಬುದರ ಬಗ್ಗೆಯೂ ಗಮನಹರಿಸಬೇಕು.
ಅಲ್ಲಿನ ಜನರಿಗೆ ತೊಂದರೆಯಾಗಿದ್ದರೆ, ಕಸ ವಿಲೇವಾರಿಗೆ ವೈಜ್ಞಾನಿಕ ಕ್ರಮ ಅನುಸರಿಸಬೇಕು ಎಂದು ನಗರಸಭಾ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಹೇಳಿದರು.
ಈಗ ಸಿದ್ದಪಡಿಸಿರುವ ಕ್ರಿಯಾ ಯೋಜನೆಯಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ 4 ಕೋಟಿ ಮೀಸಲಿಡಲಾಗಿದೆ. ಹಿಂದೆಯೂ ಇದಕ್ಕೆ ಹಣ ಮೀಸಲಿಡಲಾಗಿತ್ತು. ಹಣ ಬಳಕೆಯ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ನಗರಸಭೆಯಲ್ಲಿ ಆಡಳಿತಾಧಿಕಾರಿಗಳು ಅಧಿಕಾರದಲ್ಲಿದ್ದಾಗ ಸಿದ್ದಪಡಿಸಲಾಗಿರುವ ಕಾಮಗಾರಿಗಳ ಪಟ್ಟಿಯಲ್ಲಿ ಒಂದೇ ಕಾಮಗಾರಿ ಎರಡೆರಡು ಬಾರಿ ಸೇರಿಸಲಾಗಿದೆ ಎಂಬುದು ಗಮನಕ್ಕೆ ಬಂದಿದೆ ಎಂದು ನಗರಸಭಾಧ್ಯಕ್ಷ ಪುಷ್ಪರಾಜ್ ಹೇಳಿದಾಗ, ಆಡಳಿತಾಧಿಕಾರಿಗಳು ಸಿದ್ದಪಡಿಸಿರುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಅಧ್ಯಕ್ಷರು ಹಾಗೂ ಆಯುಕ್ತರು ಪರಿಶೀಲಿಸಿ, ಎರಡನೇ ಬಾರಿ ಸೇರಿರುವ ಕಾಮಗಾರಿಯನ್ನು ಕೈಬಿಡಬೇಕು ಎಂದು ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎಸ್.ಎಫ್.ಸಿ.  ಯೋಜನೆಯಡಿಯಲ್ಲಿ ಅನುದಾನ ಬಳಕೆ ಮಾಡುವ ಸಂಬಂಧ ಟೆಂಡರ್ ಕರೆಯಲು ಸಭೆ ಅನುಮೋದನೆ ನೀಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.