ರೋಗ ಪೀಡಿತ ತೋಟಕ್ಕೆ ಅನುದಾನ
ಚಿಕ್ಕಮಗಳೂರು: ಗೋರಖ್ ಸಿಂಗ್ ವರದಿ ಆಧಾರಿತ ಅಡಕೆ ಬೆಳೆಗಾರರ ತೋಟಗಳ ಪುನಶ್ಚೇತನ ಕಾರ್ಯಕ್ರಮದಡಿ ತೋಟಗಳಲ್ಲಿ ಕಾಣಿಸಿಕೊಳ್ಳುವ ಇತರೆ ರೋಗಗಳಿಗೂ ಅನುದಾನವನ್ನು ಬಳಕೆ ಮಾಡಲು ತೋಟಗಾರಿಕೆ ಇಲಾಖೆ ಆದೇಶಿಸಿದೆ ಎಂದು ಕಾಂಗ್ರೆಸ್ ಪ್ರದೇಶ ಸಮಿತಿಯ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಉಪಾಧ್ಯಕ್ಷ ಸಚೀನ್ ಮೀಗಾ ಹೇಳಿದ್ದಾರೆ.
ತೋಟಗಾರಿಕೆ ಇಲಾಖೆ ನಿರ್ದೇಶಕ ಜಗದೀಶ್ ಹಾಗೂ ರಾಜ್ಯ ತೋಟಗಾರಿಕೆ ಸಚಿವ ರವೀಂದ್ರನಾಥ್ ಕೇಂದ್ರ ಸರ್ಕಾರದ ಗೋರಖ್ ಸಿಂಗ್ ವರದಿ ಆಧಾರಿತ ಕಾರ್ಯಕ್ರಮದಡಿ ನೀಡುವ ಅನುದಾನವನ್ನು ಇತರೆ ಬೆಳೆಗಳಿಗೂ ಬಳಸಬಹುದು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ ಕಸಬಾ ಮತ್ತು ಹರಿಹರಪುರ ಹೋಬಳಿಯ ಅಡಕೆ ಬೆಳೆಗಾರರು ತೋಟಗಾರಿಕೆ ಇಲಾಖೆಗೆ ಇತರೆ ಬೆಳೆಗಳಿಗೆ ಅನುದಾನ ಬಳಸಲು ಅರ್ಜಿ ನೀಡಿದಾಗ ತಿರಸ್ಕರಿಸಿದ ಕಾರಣ ಅಡಕೆ ತೋಟಗಳ ಅನುದಾನ ಪಡೆದುಕೊಳ್ಳಲು ರೈತರು ಸಂಪೂರ್ಣ ವಿಫಲರಾಗಿದ್ದರು ಎಂದಿದ್ದಾರೆ.
ಈ ಬಗ್ಗೆ ತಾವು ತಾಲೂಕು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ಕೇಂದ್ರ ರಾಷ್ಟ್ರೀಯ ತೋಟಗಾರಿಕೆ ಇಲಾಖೆಯ ಆದೇಶ ಪತ್ರವನ್ನು ತೊರಿಸಿದರೂ ನಿರ್ಲಕ್ಷ್ಯಿಸಲಾಗಿತ್ತು. ಈ ನಡುವೆ ರಾಜ್ಯ ತೋಟಗಾರಿಕಾ ನಿರ್ದೇಶಕರು ಹಾಗೂ ಸಚಿವರಿಗೆ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟ ಬಳಿಕ ಪರಿಸ್ಥಿತಿ ತಿಳಿಯಾಯ್ತು ಎಂದಿದ್ದಾರೆ.
ಈ ಆದೇಶದ ಅನ್ವಯ ಇತರೆ ರೋಗಗಳಿರುವ ಅಡಕೆ ತೋಟಗಳ ಪುನಶ್ಚೇತನಕ್ಕೆ 15 ಸಾವಿರ ರು. ನೀಡುವಂತೆ ಸೂಚಿಸಲಾಗಿದ್ದು, ಕೊಪ್ಪ, ನರಸಿಂಹರಾಜಪುರ, ಕಳಸ, ತರೀಕೆರೆ ಭಾಗದಲ್ಲಿ ಇತರೆ ರೋಗಗಳಿಂದ ಬಳಲುತ್ತಿರುವ ಅಡಕೆ ತೋಟಗಳ ಬೆಳೆಗಾರರು ಅರ್ಜಿ ಸಲ್ಲಿಸಿ ಅನುದಾನ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ತಾಲೂಕು ತೋಟಗಾರಿಕೆ ಅಧಿಕಾರಿಗಳು ಇನ್ನು ಮುಂದೆಯಾದರೂ ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಲಿ ಎಂದಿರುವ ಅವರು, ಇಲ್ಲದಿದ್ದರೆ ಈ ಭಾಗದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿ, ಕೂಡಲೇ ರೈತರು ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ. ತೋಟಗಾರಿಕೆ ನಿಯಮಾವಳಿ ಪ್ರಕಾರ ಪ್ರತಿವರ್ಷ ಪುನಶ್ಚೇತನ ಅನುದಾನ ನೀಡುವ ಅವಕಾಶವಿದ್ದು, ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಉಸ್ತುವಾರಿ ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ರಾಜ್ಯ ಸರ್ಕಾರದ ಸುತ್ತೋಲೆಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

