ಚಿಕ್ಕಮಗಳೂರು

ಬಸ್ಸಿನಲ್ಲಿ ಪುಂಡಾಟಿಕೆ ತಡೆಯಲು ಮನವಿ

Published On :

ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕೆಲವರು ನಡೆಸುತ್ತಿರುವ ಪುಂಡಾಟವನ್ನು ತಡೆಗಟ್ಟಿ ಪ್ರಯಾಣಿಕರಿಗೆ ರಕ್ಷಣೆ ಒದಗಿಸುವಂತೆ ಬೇಲೂರು ತಾಲೂಕಿನ ಹಲ್ಮಿಡಿ, ಬೆಣ್ಣೂರು, ನಾರಾಯಣಪುರ, ಹೊಸಮನೆಹಳ್ಳಿ, ಹೆಜ್ಜೆನಹಳ್ಳಿ, ಬಿಗ್ಗದೇವನಹಳ್ಳಿ ಮತ್ತು  ಹಾದಿ ಹಳ್ಳಿ ಗ್ರಾಮಸ್ಥರು ಜಿಲ್ಲಾ ರಕ್ಷಣಾಧಿಕಾರಿ ಎನ್. ಶಶಿಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಪೊಲೀಸ್ ಮುಖ್ಯಾಧಿಕಾರಿ ಶಶಿಕುಮಾರ್ ಅವರನ್ನು ಈ ಸಂಬಂಧ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಗ್ರಾಮಸ್ಥರು ತಮ್ಮ ಗ್ರಾಮಗಳಿಂದ ಸುಮಾರು 70 ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಚಿಕ್ಕಮಗಳೂರಿನ ಶಾಲಾ, ಕಾಲೇಜುಗಳಿಗೆ ಬರುತ್ತಿದ್ದು, ಇವರು ಬರುವ ಬಸ್ ಕೋಡಿಹಳ್ಳಿ ಗ್ರಾಮದ ಮಾರ್ಗವಾಗಿ ಚಿಕ್ಕಮಗಳೂರಿಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ಕೋಡಿಹಳ್ಳಿ ಗ್ರಾಮದ ಎಂಟು ಹತ್ತು ಜನರಿರುವ ಪುಂಡರ ಗುಂಪೊಂದು ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಮತ್ತು ಪ್ರಯಾಣಿಕರಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಚುಡಾಯಿಸುವುದು. ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡುವ ಮೂಲಕ ಹಿಂಸೆ ನೀಡುತ್ತಿದ್ದು, ಅದನ್ನು ಪ್ರಶ್ನಿಸಿದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಪುಂಡಾಟಿಕೆಯಿಂದಾಗಿ ಭಯಗೊಂಡಿರುವ ಕೆಲವು ವಿದ್ಯಾರ್ಥಿನಿಯರು ಈಗಾಗಲೇ ಶಾಲೆಗಳಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಇನ್ನುಳಿದವರು ಭಯದಿಂದಲೇ ಶಾಲೆಗೆ ತೆರಳುತ್ತಿದ್ದಾರೆ ಎಂದ ಅವರು, ತಕ್ಷಣ ಪುಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರಾದ ಶಿವಕುಮಾರ್, ಚಂದ್ರಕಲಾ, ಉಮೇಶ್, ರಮೇಶ್, ತುಳಸಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.