ಕಾಯಕ ಸಂಘಗಳ ರಚನೆ ಖಾತ್ರಿ
ಅಂಶಿ ಪ್ರಸನ್ನಕುಮಾರ್
ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ಹೊಂದಿರುವವರನ್ನು ಒಗ್ಗೂಡಿಸಿ ರಾಜ್ಯಾದ್ಯಂತ ಪ್ರತಿ ಗ್ರಾಮಗಳಲ್ಲಿ ಕಾಯಕ ಸಂಘಗಳನ್ನು ರಚಿಸಲಾಗುವುದು.
ಉದ್ಯೋಗ ಚೀಟಿ ಹೊಂದಿರುವವರ ಸಬಲೀಕರಣ ಉದ್ದೇಶ ಹೊಂದಿರುವುದರಿಂದ ಇದೊಂದು ರೀತಿಯಲ್ಲಿ ಈಗಾಗಲೇ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳ ಮಾದರಿ ಎನ್ನಬಹುದು. ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರನ್ವಯ ಕಾಯಕ ಸಂಘ, ಸಂಘಟನೆ ಹಾಗೂ ಕಾಯಕ ಬಂಧುಗಳ ಆಯ್ಕೆ ನಡೆಯಲಿದೆ ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ನಿರ್ದೇಶಕ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಸಂಘದ ರಚನೆ ಹೇಗೆ?: ಒಂದೇ ಗ್ರಾಮದ ನಿವಾಸಿಗಳಾಗಿರುವ ಹಾಗೂ ಸಿಂಧುವಾದ ಉದ್ಯೋಗ ಚೀಟಿ ಹೊಂದಿರುವ ಪುರುಷರು ಹಾಗೂ ಮಹಿಳೆಯರು ಸೇರಿ 20-25 ಜನರಿಂದ ಒಂದು ಕಾಯಕ ಸಂಘ ಸಂಘಟಿಸಲಾಗುತ್ತದೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತಮ್ಮ ಗ್ರಾಮದ ಯಾವುದೇ ಕಾಯಕ ಸಂಘದಲ್ಲಿ ಸದಸ್ಯರಾಗಬಹುದು. ಏಕರೂಪದ ಗುಂಪನ್ನು ಸಂಘಟಿಸುವುದು ಇದರ ಉದ್ದೇಶವಾಗಿದ್ದು, ಇದರಿಂದ ಅವರು ಧ್ವನಿ ಎತ್ತಲು ಸಹಾಯವಾಗುತ್ತದೆ ಹಾಗೂ ಅವರ ಸಬಲೀಕರಣ ಸಾಧ್ಯ. ಈ ಸಂಘವು ಗ್ರಾಪಂ, ಪಂಚಾಯತ್ ರಾಜ್ ಸಂಸ್ಥೆಗಳು, ಸರ್ಕಾರದೊಂದಿಗೆ ಒಂದು ಘಟಕದಂತೆ ಸ್ಪಂದಿಸಿ, ಕಾರ್ಯನಿರ್ವಹಿಸುತ್ತದೆ. ಈ ಕಾಯಕ ಸಂಘವು ಒಮ್ಮೆ ಸಂಘಟನೆ ಆದ ನಂತರ 20-25 ಜನ ಸದಸ್ಯರು ಅವರಲ್ಲೇ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳುವರು. ಆಯ್ಕೆಯಾದ ಕಾಯಕ ಸಂಘದ ಈ ಸದಸ್ಯನನ್ನು ಕಾಯಕ ಬಂಧು ಎಂದು ಕರೆಯಲಾಗುತ್ತದೆ. ವೈಯಕ್ತಿಕ ಫಲಾನುಭವಿಗಳ ಪ್ರಕರಣದಲ್ಲಿ ಅವರು ಇಚ್ಛಿಸಿದಲ್ಲಿ ಅವರೇ ಕಾಯಕ ಬಂಧು ಆಗಬಹುದು.
ಈ ಕಾಯಕ ಬಂಧುವು ಸಂಘದ ಪರವಾಗಿ ಗ್ರಾಪಂ, ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಸತತವಾಗಿ ಸಮನ್ವಯತೆ ಹೊಂದವರು. ಈ ಹೆಚ್ಚಿನ ಕೆಲಸಕ್ಕಾಗಿ ಅವರಿಗೆ ಹೆಚ್ಚಿನ ಹಣ ಸಿಗಲಿದೆ. ಕಾಯಕ ಸಂಘವು ಒಂದು ಗುಂಪಾಗಿ ಪ್ರತಿವಾರವು ಕೆಲಸಕ್ಕಾಗಿ ಅಕುಶಲ ಕಾರ್ಮಿಕರು ಕೋರುವ ನಮೂನೆ-6 ಅನ್ನು ಸಲ್ಲಿಸಬೇಕು. ಕಾಯಕ ಬಂಧು ಈ ನಮೂನೆ-6 ಅನ್ನು ಗ್ರಾಪಂ ಸಹಾಯವಾಣಿಗೆ ನೀಡಬೇಕು. ಕೆಲಸದ ಬೇಡಿಕೆಯು ಶೂನ್ಯ ಇದ್ದರೂ ಕಾಯಕ ಬಂಧುವು ಶೂನ್ಯ-ನಮೂನೆ-6 ಅನ್ನು ತನ್ನ ಸಹಿಯೊಂದಿಗೆ ಸಲ್ಲಿಸಬೇಕು. ಎಲ್ಲರಿಗೂ ಅನ್ವಯಿಸುವ ಒಂದೇ ಕಾಮಗಾರಿಯ ಸ್ಥಳದಲ್ಲಿ ಕಾಯಕ ಸಂಘವು ಕಾಮಗಾರಿ ಪಡೆಯಬೇಕು. ಕಾಯಕ ಬಂಧುವು ಕೆಲಸ ನಿರ್ವಹಿಸಿದನ್ವಯ ಅಕುಶಲ ಕೂಲಿ ಮಂಜೂರಿ ಪಡೆಯುವರು. ಕಾಯಕ ಬಂಧುವು ಹೆಚ್ಚಿನ ಕೆಲಸವನ್ನು ನಿರ್ವಹಿಸುವುದರಿಂದ ಇವರು ಹೆಚ್ಚುವರಿ ಕೆಲಸದ ಬಾಬ್ತು ಹೆಚ್ಚುವರಿ ಹಣ ಪಡೆಯುವರು.
ಸಂಘದ ಜವಾಬ್ದಾರಿಗಳೇನು?: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಂತದಲ್ಲಿ ಮೊದಲಿಗೆ ಎಲ್ಲ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಮತ್ತು ಕ್ರಿಯಾಶೀಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಯೋಜನಾ ಸಭೆ ಕರೆಯಬೇಕು.
ಈ ಸಭೆಗೆ, ಖಾತ್ರಿ ಯೋಜನೆಯ ಉಸ್ತುವಾರಿ ಹೊಂದಿರುವ ಉಪಕಾರ್ಯದರ್ಶಿ, ಯೋಜನಾ ನಿರ್ದೇಶಕರು ಹಾಗೂ ಕ್ರಿಯಾಶೀಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಸಹ ಕರೆಯಬೇಕು. ಪ್ರತಿ ಹೋಬಳಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ನೋಡಲ್ ಅಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿ ಪ್ರತಿ ಗ್ರಾಪಂಗೆ 5 ರಿಂದ 6 ಜನ ನೌಕರರನ್ನು ಗುರುತಿಸಿ ಅವರಿಗೆ ಗ್ರಾಮವಾರು ಕಾಯಕ ಸಂಘ ಸಂಘಟಿಸುವ ಪ್ರಕಾರ್ಯ ವಹಿಸಬೇಕು.
ಪ್ರತಿ ಗ್ರಾಪಂಗೆ ಒಬ್ಬರು ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಇಲಾಖಾ ವತಿಯಿಂದ ಯಾವುದೇ ಹಣ ಅಥವಾ ಪ್ರೋತ್ಸಾಹ ಧನವಿಲ್ಲದೆ ಸರ್ಕಾರೇತರ ಸಂಸ್ಥೆಗಳು, ಹಕ್ಕೋತ್ತಾಯದ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳು ಕಾಯಕ ಸಂಘಗಳನ್ನು ಸಂಘಟಿಸಲು ಸ್ವತಂತ್ರವಾಗಿವೆ. ಅಂತಹ ಸಂಸ್ಥೆಗಳನ್ನು ಪ್ರತ್ಯೇಕವಾದ ಸಭೆಗೆ ಪ್ರತ್ಯೇಕವಾಗಿ ಕರೆಯಬೇಕು
ಗ್ರಾಮಮಟ್ಟದಲ್ಲಿ ನೌಕರರ ಆಯ್ಕೆ
ಗ್ರಾಮ ಮಟ್ಟದಲ್ಲಿ ಕಾಯಕ ಸಂಘ ಸಂಘಟಿಸುವುದಕ್ಕಾಗಿ ಗ್ರಾಪಂ ಕರ ವಸೂಲಿಗಾರರು, ಗ್ರಾಪಂ ನೀರುಗಂಟಿಗಳು, ವಯಸ್ಕರ ಶಿಕ್ಷಣ ಬೋಧಕರು, ಅಂಗನವಾಡಿ ಶಿಕ್ಷಕರು, ಸಹಾಯಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಳಗೆ, ಗ್ರಾಪಂ ಗಣಕ ಯಂತ್ರ ನಿರ್ವಾಹಕರು, ಆಶಾ ಕಾರ್ಯಕರ್ತರು, ಕಾರ್ಯಕರ್ತೆಯರು ಮತ್ತು ಮುಂತಾದವರನ್ನು ಆಯ್ಕೆ ಮಾಡಬೇಕು. ಈ ರೀತಿ ಪ್ರತಿ ತಾಲೂಕಿನ ನೋಡಲ್ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯು ತಮ್ಮ ತಾಲೂಕು ನೌಕರರ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರತಿಯೊಂದು ಗ್ರಾಪಂನಲ್ಲಿ 5 ಜನ ನೌಕರರನ್ನು ಅವರ ಹೆಸರು, ಪದನಾಮದೊಂದಿಗೆ ಗುರುತಿಸಬೇಕು. ಅವರು ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಆ ಗ್ರಾಮದಲ್ಲಿ ಕಾಯಕ ಸಂಘ ಸಂಘಟಿಸಬೇಕು. ಈ ನೌಕರರು ಪ್ರತಿ ಗ್ರಾಮದಲ್ಲಿ ಆ.1 ರಿಂದ 14ರ ನಡುವೆ ಸಭೆ ಕರೆದು, ಕಾಯಕ ಸಂಘದ ಪರಿಕಲ್ಪನೆ ವಿವರಿಸಬೇಕು ಎಂದು ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

