ಚಾಮರಾಜನಗರ

ಕಾಡು ಪ್ರಾಣಿ ಕಾಟ ತಪ್ಪಿಸಲು ಆಗ್ರಹ

Published On :

ಕೊಳ್ಳೇಗಾಲ: ತಾಲೂಕು ಆಡಳಿತ ಕುಂತೂರು ಕಾರ್ಖಾನೆ ಜಾಗ ಅತಿಕ್ರಮಿಸಿಕೊಂಡಿದ್ದರೂ ತೆರವುಗೊಳಿಸುವಲ್ಲಿ ಮೀನ ಮೇಷ ಎಣಿಸುತ್ತಿದೆ. ರೈತರು ಬೆಳೆದ ಫಸಲನ್ನು ಕಾಡು ಪ್ರಾಣಿಗಳಾದ ಕೋತಿ ಹಾಗೂ ಹಂದಿಗಳ ನಾಶಪಡಿಸುತ್ತಿದ್ದು, ಈ ಸಂಬಂಧ ಸೂಕ್ತ ಪರಿಹಾರ ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.   
 ಕೊಳ್ಳೇಗಾಲ ಪಟ್ಟಣದಲ್ಲಿ ರೈತ ಮುಖಂಡರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನಾ ಮೆರವಣಿಗೆ ತೆರಳಿ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಕೆಲಕಾಲ ಪ್ರತಿಭಟನೆ ನಡೆಸಿದರು. ಇದಕ್ಕೂ ಮೊದಲು ಪಟ್ಟಣದ ಎಪಿಎಂಸಿ ಆವರಣದಿಂದ ಮೆರವಣಿಗೆ ತೆರಳಿದ ರೈತರು ತಾಲೂಕು ಆಡಳಿತ ಹಾಗೂ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆ ಕೂಗಿದರು.
ಕುಂತೂರು ಬಣ್ಣಾರಿ ಅಮ್ಮನ್ ಕಾರ್ಖಾನೆ ವಿವಾದಿತ ಜಾಗ ತೆರವುಗೊಳಿಸಲು ಜಿಲ್ಲಾಡಳಿತ ಸೂಚಿಸಿದ್ದರೂ, ತಾಲೂಕು ಆಡಳಿತ ಈ ಸಂಬಂಧ ಮೌನ ತಳೆದಿರುವ ಕ್ರಮದ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಹೊಸ  ಬಸಸ್ನಿಲ್ದಾಣ,   ಸ್ಟೇಟ್‌ಬ್ಯಾಂಕ್ ರಸ್ತೆ, ಡಾ.ರಾಜಕುಮಾರ, ರಸ್ತೆ, ಅಂಬೇಡ್ಕರ್, ನಾಗಪ್ಪ ವೃತ್ತಗಳ ಮೂಲಕ ಸಾಗಿ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಶಿರಸ್ತೇದಾರ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ನಂಜುಂಡಸ್ವಾಮಿ ಮಾತನಾಡಿ, ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲಾ, ಸರ್ಕಾರ ನಿರ್ಲಕ್ಷ್ಯಗಳಿಂದಾಗಿ ರೈತ ಆತ್ಮಹತ್ಯೆಗೆ ಶರಣಾಗಬೇಕಾದ ಅನಿವಾರ್ಯ ನಿರ್ಮಾಣವಾಗಿದೆ ಎಂದರು.
ರೈತ ಮುಖಂಡರಾದ ಕುಂತೂರು ನಂಜುಂಡಸ್ವಾಮಿ, ಅರೇಪಾಳ್ಯ ನಾಗರಾಜು, ಶ್ರೀಕಂಠೆಗೌಡ, ಗುಂಡೇಗಾಲ ಬಸವಣ್ಣ, ತೇರಂಬಳ್ಳಿ ಲೋಕೇಶ, ಬಸವರಾಜು, ಪಾಪಣ್ಣ, ಮಹದೇವಸ್ವಾಮಿ, ಸಿದ್ದರಾಜು ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.



ಹಕ್ಕೋತ್ತಾಯಗಳ ಈಡೇರಿಕೆಗೆ ಒತ್ತಾಯ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು, ರೈತರಿಂದ ಸಾಲ ವಸೂಲಾತಿಗೆ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆಯನ್ನು ರದ್ದುಗೊಳಿಸಬೇಕು, ಭೂ ರೈತ ಕೃಷಿ ಕಾರ್ಮಿಕರಿಗೆ ಕನಿಷ್ಠ 1ಲಕ್ಷದ ತನಕ ಬದುಕಿನ ಸಾಲ ನೀಡಬೇಕು, ಕಬಿನಿ ಇಲಾಖೆ ಚಾಲನ್‌ಗಳಲ್ಲಿ ವಿತರಣೆ ನಾಲೆ 40ರಿಂದ ನಾಲೆ 62ರವರೆವಿಗೂ ನೀರು ಹರಿಸಲು ಕ್ರಮವಹಿಸಬೇಕು, ಹಂದಿ ಹಾಗೂ ಕೋತಿಗಳ ಹಾವಳಿಗೆ ಬೆಳೆ ನಷ್ಟವಾಗುತ್ತಿರುವುದನ್ನು ಪರಿಗಣಿಸಿ ಸರ್ಕಾರ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು, ರೈತರ ಜಮೀನುಗಳ ಖಾತಾ ಬದಲಾವಣೆಗಳು  ಸುಮಾರು ವರ್ಷಗಳಿಂದಲೂ ಪೂರ್ವಿಕರ ಹೆಸರಿನಲ್ಲಿದ್ದು ಅವುಗಳನ್ನು ಸಾಮಾಹಿಕವಾಗಿ ಅದಾಲತ್ ನಡೆಸಿ ಖಾತೆ ಬದಲಾವಣೆ ಮಾಡಿಕೊಡಬೇಕು, ಸಾಲದ ಸುಳಿಗೆ ಸಿಲುಕಿರುವ ರೈತರ ರಕ್ಷಣೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು, ಆ ಮೂಲಕ ರೈತರ ಆತ್ಮಹತ್ಯೆ ತಪ್ಪಿಸಬೇಕು ರೈತರ ಜಮೀನುಗಳಲ್ಲಿ ಟಿಸಿ ಸುಟ್ಟು ಹೋದರೆ 72ಗಂಟೆಯೊಳಗೆ ಸರ್ಕಾರ ಟಿಸಿ ದುರಸ್ತಿಗೆ ಮುಂದಾಗದಿದ್ದರೆ ಬೆಳೆ ನಷ್ಟವಾದರೆ  ರೈತರಿಗೆ  ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟು ರೈತರು ಪ್ರತಿಭಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.