ಹೆಸರಿಗಷ್ಟೇ ವೈದ್ಯ ತಪಾಸಣೆ ಶಿಬಿರ
-ದೇವರಾಜು ಕಪ್ಪಸೋಗೆ
ಚಾಮರಾಜನಗರ: ವೈದ್ಯರಿಲ್ಲದ ಹಳ್ಳಿಗಳಲ್ಲಿ ದಾದಿಯರೇ ರೋಗಿಗಳಿಗೆ ಒಂದೆರಡು ಮಾತ್ರೆ ಕೊಟ್ಟು ಕಳುಹಿಸುತ್ತಾರೆ. ಹಾಗಾಗಿದೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಪ್ರತಿ ವರ್ಷ ನಡೆಸುವ ವಿಕಲಚೇತನ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ.
ಚಾಮರಾಜನಗರದಲ್ಲಿ ಸೋಮವಾರ ಸಂತ ಪೌಲರ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಕಲಚೇತನ ಮಕ್ಕಳ ತಪಾಸಣೆ ಶಿಬಿರದಲ್ಲಿ ವೈದ್ಯರು ಮಕ್ಕಳನ್ನು ನೋಡಿ ನಾಳೆ ಬನ್ನಿ, ನಾಳಿದ್ದು ಬನ್ನಿ ಎಂದು ಚೀಟಿ ಬರೆದು ಕೊಟ್ಟರೆ ಹೊರತು ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ಮುಟ್ಟಿಯೂ ನೋಡಲಿಲ್ಲ. ಸುಮಾರು 500ಕ್ಕೂ ಹೆಚ್ಚು ಮಕ್ಕಳ ತಪಾಸಣೆ ಕೇವಲ ಎರಡು ಗಂಟೆಗಳ ಅವಧಿಯಲ್ಲೇ ಮುಗಿದು ಹೋಯಿತು.
ಅಂದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ವಿಕಲಚೇತನ ಮಕ್ಕಳನ್ನು ಶಾಲೆಗೆ ಕರೆತರಲು ಎಷ್ಟರ ಮಟ್ಟಿಗೆ ವೈದ್ಯ ತಪಾಸಣೆ ನಡೆಸಿತು ಎಂಬುದನ್ನು ಊಹಿಸಿಕೊಳ್ಳಬಹುದು.
ವಿಶೇಷ ಅಗತ್ಯವುಳ್ಳ ವಿಕಲಚೇತನ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಯಿಂದ ವಂಚಿತ ರಾಗುವುದನ್ನು ತಪ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಪ್ರತಿ ವರ್ಷ 6ರಿಂದ 14 ವರ್ಷದ ಮಕ್ಕಳಿಗೆ ವಲಯ ಮಟ್ಟದಲ್ಲಿ ಆರೋಗ್ಯ ಶಿಬಿರ ಏರ್ಪಡಿಸುತ್ತದೆ. ಆದರೆ, ಅದು ಪ್ರತಿ ವಲಯಕ್ಕೆ ಸರ್ಕಾರ ಬಿಡುಗಡೆ ಮಾಡುವ 20 ಸಾವಿರ ರು. ಖರ್ಚು ಮಾಡಲಷ್ಟೇ ಏರ್ಪಾಡು ಮಾಡುವ ಆರೋಗ್ಯ ಶಿಬಿರ ಇದಾಗಿತ್ತು. ಇದು ನಿಜವಾಗಿಯೂ ವಿಕಲಚೇತನ ಮಕ್ಕಳಿಗೆ ಸದ್ಬಳಕೆಯಾಗುತ್ತಿಲ್ಲ.
ಚಾಮರಾಜನಗರ ಜಿಲ್ಲೆಯ ಐದು ವಲಯದಲ್ಲೂ ಈಗಾಗಲೇ ವೈದ್ಯ ತಪಾಸಣೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆದಿದ್ದು, ಇದಕ್ಕಾಗಿ ಸರ್ಕಾರದಿಂದ ಬಿಡುಗಡೆಯಾಗಿದ್ದ ತಲಾ ರು. 20 ಸಾವಿರ ಖರ್ಚು ಮಾಡಲಾಗಿದೆಯೇ ಹೊರತು ನಿಜವಾದ ವಿಕಲಚೇತನ ಮಕ್ಕಳನ್ನು ಗುರುತಿಸುವ ಕಾರ್ಯ ನಡೆದಿಲ್ಲ.
ಚಾಮರಾಜನಗರದಲ್ಲಿ ವಿಕಲಚೇತನ ಮಕ್ಕಳ ವೈದ್ಯ ತಪಾಸಣೆ ಶಿಬಿರದಲ್ಲಿ ಶಾಮಿಯಾನ ಹಾಕಿಸಿ ರಾಜಕಾರಣಿಗಳಿಂದ ಈಗಾಗಲೇ ನಾನಾ ನ್ಯೂನತೆ ಗಳಿಂದ ಬಳಲುತ್ತಿರುವ ಮಕ್ಕಳಿಗೆ ಭಾಷಣ ಮಾಡಿಸಲಾಗಿದೆಯೇ ಹೊರತು ವಿಕಲಚೇತನ ಮಕ್ಕಳಿಗೆ ವೈದ್ಯ ತಪಾಸಣೆಗೆ ಬೇಕಾದ ಯಾವುದೇ ವ್ಯವಸ್ಧೆ ಕಲ್ಪಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮಕ್ಕಳನ್ನು ತಪಾಸಣೆ ಮಾಡಲು ಬೇಕಾದ ಸೂಕ್ತ ಕೊಠಡಿ, ತಜ್ಞ ವೈದ್ಯರು, ತಂತ್ರಜ್ಞರು ಇಲ್ಲದೆ ಶಿಬಿರ ನಡೆಸಲಾಗಿದ್ದು, ನೆಪ ಮಾತ್ರಕ್ಕೆ ಕೆಲವು ವೈದ್ಯರನ್ನು ಕರೆಸಲಾಗಿತ್ತು.
ವಿಕಲಚೇತನ ಮಕ್ಕಳಿಗೆ ಆರೋಗ್ಯ ಶಿಬಿರ ಏರ್ಪಡಿಸಿದ ಮೇಲೆ ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಉಪಾಹಾರ, ಪ್ರಯಾಣ ಭತ್ಯ ಕೊಡಬೇಕು. ಆದರೆ, ಮಧ್ಯಾಹ್ನದ ಊಟದ ವೇಳೆಗೆ ಆರೋಗ್ಯ ತಪಾಸಣೆ ಶಿಬಿರವೇ ಮುಕ್ತಾಯವಾಗಿತ್ತು. ವಿಕಲಚೇತನರನ್ನು ಕರೆತಂದಿದ್ದ ಪೋಷಕರು ಊರಿನತ್ತ ಪ್ರಯಾಣ ಬೆಳೆಸಿದರು ಇನ್ನೂ ಪ್ರಯಾಣ ಭತ್ಯೆ ಕೊಡುವುದಾರೂ ಎಲ್ಲಿ?
ಸಾಧನ ಸಲಕರಣೆ ವಿತರಿಸಿಲ್ಲ
ಕಳೆದ ಬಾರಿ ತಪಾಸಣೆಗೊಳಗಾದ ಬಹುತೇಕ ಮಕ್ಕಳಿಗೆ ಇನ್ನೂ ಸಾಧನ ಸಲಕರಣೆ ವಿತರಿಸಿಲ್ಲ ಕಳೆದ ಬಾರಿ ಚಾಮರಾಜನಗರ ಜಿಲ್ಲೆಯಲ್ಲಿ ಗುರುತಿಸಲಾಗಿದ್ದ 1970 ಮಕ್ಕಳ ಪೈಕಿ ವೈದ್ಯ ತಪಾಸಣೆಗೆ 868 ಮಕ್ಕಳು ಹಾಜರಾಗಿದ್ದು, ಅವರ ಪೈಕಿ 113 ಮಕ್ಕಳಿಗೆ ಕನ್ನಡಕ, 15 ಮಕ್ಕಳಿಗೆ ವ್ಹೀಲ್ಚೇರ್, 38 ಮಕ್ಕಳಿಗೆ ಕ್ಯಾಲಿಫರ್, 3 ಮಕ್ಕಳಿಗೆ ಟ್ರೈಸಿಕಲ್, 91 ಮಕ್ಕಳಿಗೆ ಹಿಯರಿಂಗ್ ಏಡ್, 5 ಮಕ್ಕಳಿಗೆ ಕ್ರಚ್ಚಸ್, 3 ಮಕ್ಕಳಿಗೆ ರೋಲೇಟರ್, 11 ಮಕ್ಕಳಿಗೆ ಶೂ, 31 ಮಕ್ಕಳಿಗೆ ಎಂಆರ್ಕಿಟ್, 3 ಮಕ್ಕಳಿಗೆ ಸಿಪಿ ವ್ಹೀಲ್ಚೇರ್, 1 ಮಗುವಿಗೆ ವಾಕರ್, 15 ಮಕ್ಕಳಿಗೆ ಕರೆಕ್ಟೀವ್ ಸರ್ಜರಿ ಮತ್ತು 13 ಮಕ್ಕಳಿಗೆ ಬ್ರೈಲ್ ಕಿಟ್ ವಿತರಣೆ ಸೇರಿದಂತೆ ಜಿಲ್ಲೆಯಲ್ಲಿ 351 ಮಕ್ಕಳಿಗೆ 18.37 ಲಕ್ಷ ವೆಚ್ಚದಲ್ಲಿ ಸಾಧನ ಸಲಕರಣೆ ವಿತರಿಸಲಬೇಕಿತ್ತು. ಆದರೆ, ಸರ್ಕಾರ ಕೇವಲ 1.04 ಲಕ್ಷ ಅನುದಾನ ನೀಡಿದ್ದರಿಂದ 25 ರಿಂದ 30 ಮಕ್ಕಳಿಗೆ ಹಿಯರಿಂಗ್ ಏಡ್ ವಿತರಿಸಿದ್ದು, ಕೆಲ ಮಕ್ಕಳಿಗೆ ಸಂಘ ಸಂಸ್ಧೆಗಳಿಂದ ಕನ್ನಡಕ ಮತ್ತು ಹಿಯರಿ ಏಡ್ ಕೊಡಿಸಿದ್ದು ಬಿಟ್ಟರೆ ಬಹುತೇಕ ಮಕ್ಕಳಿಗೆ ಇದುವರಗೆ ಸಾಧನ ಸಲಕರಣೆ ಲಭ್ಯವಾಗಿಲ್ಲ. ಜಿಲ್ಲೆಯಲ್ಲಿ ಕೋಟಿಗಟ್ಟಲೇ ಅನುದಾನ ಸಂಗ್ರಹವಾಗುತ್ತದೆ. ಆದರೆ, ಅದನ್ನು ಅಂಗವಿಕಲ ಮಕ್ಕಳಿಗೆ ಸದ್ಭಳಿಕೆ ಮಾಡುವಲ್ಲಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಸಲಕರಣೆಗಳಿಲ್ಲ
ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳನ್ನು ಪರೀಕ್ಷಿಸಲು ಶಬ್ಧರಹಿತ ಸುಸಜ್ಜಿತ ಸಲಕರಣೆವುಳ್ಳ ಕೊಠಡಿ ಇರಬೇಕು. ಆದರೆ, ಯಾವುದೇ ಸೌಲಭ್ಯವಿಲ್ಲದ ತರಗತಿ ನಡೆಸುವ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಯಾವುದೇ ರೀತಿ ಪ್ರಯೋಜನವಾಗುವುದಿಲ್ಲ. ಹಿಂದಿನ ವರ್ಷ ಪರೀಕ್ಷಿಸಿದ ಮಕ್ಕಳಿಗೆ ಇನ್ನೂ ಸಾಧನ ಸಲಕರಣೆಗಳನ್ನು ನೀಡಲಾಗಿಲ್ಲ. ಮತ್ತೇ ಈ ಬಾರಿಯೂ ಪರೀಕ್ಷೆ ಮಾಡಿದರೆ ಪ್ರಯೋಜನವೇನು?
- ಡಾ. ಎಂ.ಯು. ವಿನಯ್, ವಾಕ್ ಮತ್ತು ಶ್ರವಣ ದೋಷ ತಜ್ಞರು.
ನೆಪ ಮಾತ್ರಕ್ಕೆ ಶಿಬಿರ
ಪ್ರತಿ ವರ್ಷ ನೆಪಮಾತ್ರಕ್ಕೆ ಸರ್ವ ಶಿಕ್ಷಣ ಅಭಿಯಾನದ ಮೂಲಕ ವಿಕಲಚೇತನ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತದೆ. ಆದರೆ, ತಪಾಸಣೆ ನಡೆಸಲು ಬೇಕಾದ ಸೂಕ್ತ ವ್ಯವಸ್ಧೆ, ತಜ್ಞ ವೈದ್ಯರು ಮತ್ತು ತಂತ್ರಜ್ಞರನ್ನೇ ಕರೆಸುವುದಿಲ್ಲ. ಕಳೆದ ಶಿಬಿರದಲ್ಲಿ ಸೂಚಿಸಿದ ಸಾಧನ ಸಲಕರಣೆಗಳನ್ನು ಇನ್ನೂ ನೀಡಿಲ್ಲ. ಮತ್ತೇ ಪೋಷಕರು ಮಕ್ಕಳನ್ನು ಈ ಬಾರಿಯೂ ಶಿಬಿರಕ್ಕೆ ಕರೆತಂದಿದ್ದಾರೆ.
- ಕೃಷ್ಣಮೂರ್ತಿ,
ಅಂಗವಿಕಲ ಸಂಘದ ಅಧ್ಯಕ್ಷ, ಚಾಮರಾಜನಗರ.
ಯಾವ ಸಾಧನವೂ ನೀಡಿಲ್ಲ
ನನ್ನ ಮಗ 3ನೇ ತರಗತಿ ಓದುತ್ತಿರುವ ವಿಷ್ಣುವಿಗೆ ಮೆದುಳಿನ ಪಕ್ಷಘಾತದ ಸಮಸ್ಯೆಯಿದ್ದು, ಕಳೆದ ವರ್ಷವೇ ಸರ್ವ ಶಿಕ್ಷಣ ಅಭಿಯಾನದ ಮೂಲಕ ಸಾಧನ ಸಲಕರಣೆ ನೀಡುವುದಾಗಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೇಳಲಾಗಿತ್ತು. ಆದರೆ, ಇದುವರೆಗೂ ನೀಡಿಲ್ಲ. ಈ ಬಾರಿ ತೀವ್ರ ಸಮಸ್ಯೆಯಿರುವ ನನ್ನ ಮಗುವನ್ನು ವೈದ್ಯರು ಮುಟ್ಟಿಯೂ ಸಹ ನೋಡಿಲ್ಲ.
- ಎಂ. ನಿಂಗಶೆಟ್ಟಿ, ಪೋಷಕ, ಇರಸವಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

