ಮೌಢ್ಯದ ವಿರುದ್ಧ ಮಾರ್ದನಿ
-ಜೆ. ಮಹದೇವ
ವ್ಯಾಸರಾಜ ವೇದಿಕೆ (ಬನ್ನೂರು): ಸುದ್ದಿ ಮಾಧ್ಯಮಗಳು ವಿಚಾರಗಳನ್ನು ಬಿತ್ತುವ ಬದಲು ಮನಸ್ಸನ್ನು ಅನೈರ್ಮಲ್ಯಗೊಳಿಸುತ್ತಿವೆ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿಷಾದಿಸಿದರು.
ಬನ್ನೂರಿನಲ್ಲಿ ಏರ್ಪಡಿಸಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಸೋಮವಾರದಂದು ನಡೆದ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಪಿಡುಗುಗಳು ಮತ್ತು ವೈಚಾರಿಕ ಚಿಂತನೆ ಎಂಬ ವಿಷಯ ಕುರಿತು ಮಾತನಾಡಿದ ಅವರು, ಟಿವಿಗಳು ಮೇಟಿರಿಯಲ್ ಸ್ಲಂ ನೀಡುವ ಬದಲು ಮೆಂಟಲ್ ಸ್ಲಂ ನೀಡುತ್ತಿವೆ. ಈ ಕೊಳಚೆ ನಿವಾರಿಸೋದು ಹೇಗೆ ಎಂಬುದೇ ತಿಳಿಯುತ್ತಿಲ್ಲ ಎಂದರು.
ಬೆಳಗ್ಗೆ ಆಯಿತೆಂದರೆ ಟಿವಿಗಳ ಮೂಲಕ ಜ್ಯೋತಿಷಿಗಳು ಜನರ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ. ಮೌಢ್ಯ ಬಿತ್ತಿದರೂ ಅದನ್ನೇ ಆಚರಿಸುವ ಜನರೇ ಹೆಚ್ಚಿದ್ದಾರೆ. ಜನರೇ ನೀವು ಟಿವಿ ನೋಡಿ, ಜ್ಯೋತಿಷಿಗಳ ಮಾತು ಕೇಳಿ ನರಕದಲ್ಲಿದ್ದೀರಿ ಎಂದರೆ ಈ ಜನ ಕೇಳುವುದೇ ಇಲ್ಲ. ಜನರನ್ನು ವ್ಯಾಪಾರ ಮಾಡುವ ಗ್ರಾಹಕರನ್ನಾಗಿ ಮಾಡಿಕೊಂಡ ಟಿವಿಗಳು ಮೌಢ್ಯತೆಯ ಕ್ರೌರ್ಯ ಪ್ರದರ್ಶಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವಸ್ಥಾನಗಳ ಹೈಜಾಕ್: ಕೆಳವರ್ಗದವರಿಗೆ ಸೇರಿದ ದೇವಸ್ಥಾನಗಳನ್ನು ಬ್ರಾಹ್ಮಣರು ಹೈಜಾಕ್ ಮಾಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಅಲ್ಲಿನ ಮಲೆಕುಡಿ ಜನಾಂಗದವರದ್ದು. ಆ ಜನರು ಕುಕ್ಕೆ ಎಣಿದು ಜೀವನ ಸಾಗಿಸುತ್ತಿದ್ದರು. ಅದೇ ಕುಕ್ಕೆಯಲ್ಲಿ ಸುಬ್ರಹ್ಮಣ್ಯನಿಟ್ಟು ಪೂಜಿಸುತ್ತಾರೆ. ಕಾಡಿನಲ್ಲಿ ವಾಸವಿದ್ದ ಮಲೆಕುಡಿಯರನ್ನು ಓಡಿಸಿ ಆ ದೇವರನ್ನು ಬ್ರಾಹ್ಮಣರು ವಶಪಡಿಸಿಕೊಂಡರು. ಯಾವಾಗ ದೇವಸ್ಥಾನ ಧಾರ್ಮಿಕ ಕೇಂದ್ರವಾಗಿ ಆದಾಯ ತರಲು ಆರಂಭಿಸಿತೋ ಈಡೀ ದೇವಸ್ಥಾನವನ್ನು ತಮ್ಮ ಸುಪರ್ದಿಗೆ ತಂದುಕೊಂಡರು. ಈಗ ಅಲ್ಲಿ ಮಡೆಸ್ನಾನದಂತ ಕೆಟ್ಟ ಪದ್ಧತಿ ಆಚರಣೆಯಲ್ಲಿದೆ. ಇದರಂತೆ ತಿರುಪತಿ ತಿಮ್ಮಪ್ಪ, ಓರಿಸ್ಸಾದ ಪೂರಿ ಜಗನ್ನಾಥ ದೇವಾಲಯಗಳು ಈ ಪಟ್ಟಿಗೆ ಸೇರುತ್ತವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅವರು ವರ್ತಮಾನದಲ್ಲಿ ಮಹಿಳಾ ಸಂವೇದನೆ ವಿಚಾರ ಕುರಿತು ಮಾತನಾಡಿ, ಮಹಿಳೆಗೆ ಶಿಕ್ಷಣ ನೀಡಲಿಲ್ಲ. ಸಮಾಜದಲ್ಲಿ ಓಡಾಡಲು ಬಿಡುತ್ತಿಲ್ಲ. ಎಲ್ಲೆಲ್ಲೂ ಅಭದ್ರತೆ ಕಾಡುತ್ತಿದೆ. ಸಂವೇದನೆಗೆ ಕೊಡಲಿ ಪೆಟ್ಟು ನೀಡಲಾಗಿದೆ. ಅದರಲ್ಲೂ ಮೌಢ್ಯ ಆಚರಣೆಯಲ್ಲಿ ಮಹಿಳೆಯರನ್ನೇ ಹೆಚ್ಚಾಗಿ ದೂಡಲಾಗುತ್ತಿದೆ. ಇನ್ನು ಹೆಣ್ಣು ಭ್ರೂಣಾವಸ್ಥೆಯಲ್ಲಿರುವಾಗಲೇ ಕಿವುಚಿ ಹಾಕುವಂತ ತಣ್ಣನೆಯ ಕ್ರೌರ್ಯ ಸದ್ದಿಲ್ಲದೆ ನಡೆಯುತ್ತಿದೆ ಎಂದು ವಿಷಾದಿಸಿದರು.
ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕು. ಈಗ ನೀಡುತ್ತಿರುವ ಶಿಕ್ಷಣ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಸೋತಿದೆ. ಆದ್ದರಿಂದ ರಾಜ್ಯದಲ್ಲಿ ಆದಷ್ಟು ಬೇಗ ಮೌಢ್ಯ ಆಚರಣೆ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ಇನ್ನು 10 ವರ್ಷಗಳಲ್ಲಿ ಮತ್ತಷ್ಟು ದೇವಸ್ಥಾನಗಳು, ಜ್ಯೋತಿಷಿಗಳು ಹೆಚ್ಚಾಗುತ್ತಾರೆ. ಆತ್ಮವಿಶ್ವಾಸ ಕಳೆಗುಂದುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜನಪದ ವಿದ್ವಾಂಸ ಪ್ರೊ.ಹಿ.ಶಿ. ರಾಮಚಂದ್ರಗೌಡ ಮಾತನಾಡಿ, ನಾವೆಲ್ಲ ಉಪದೇಶ ಮಾಡುವ ಬದಲು ಹಾಗೆ ನಡೆದುಕೊಳ್ಳುತ್ತಿದ್ದೀವಾ ಎಂಬುದನ್ನು ಮನನ ಮಾಡಿಕೊಳ್ಳಬೇಕು. ವ್ಯಕ್ತಿತ್ವ ಉಳಿಸಿಕೊಂಡಿದ್ದರೆ ನಾವು ಹೇಳಬೇಕು. ವ್ಯಕ್ತಿತ್ವವಿದ್ದವನು ಹೇಳಬೇಕಾದ್ದನ್ನು ಸ್ಪಷ್ಟವಾಗಿ, ನಿಖರವಾಗಿ ಹೇಳುತ್ತಾನೆ. ಗ್ರಾಮಗಳಲ್ಲಿ ಹಿರಿಯರೇ ಉಳಿದುಕೊಂಡಿದ್ದು ದೇಶ ಕಟ್ಟಬೇಕಾದವರು ಹಳ್ಳಿ ಬಿಟ್ಟು ನಗರಕ್ಕೆ ಬರುತ್ತಿದ್ದಾರೆ ಎಂದರು.
ಸಮ್ಮೇಳನಾಧ್ಯಕ್ಷ ಬಿ.ಎಸ್. ಸಣ್ಣಯ್ಯ, ಬನ್ನೂರು ಪುರಸಭೆ ಅಧ್ಯಕ್ಷ ಅಜೀಜುಲ್ಲಾ, ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಭ ಇದ್ದರು. ಕೆ.ಎಸ್. ಶಿವರಾಮು ಆಶಯ ಭಾಷಣ ಮಾಡಿದರು.
ಕನ್ನಡ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ
ಬನ್ನೂರು: ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 52 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಸಾಧಕರಾದ ಕೆ.ಆರ್.ಷಣ್ಮುಖಸ್ವಾಮಿ, ಅಂಶಿ ಪ್ರಸನ್ನಕುಮಾರ್, ಮ.ವಿ.ರಾಮಪ್ರಸಾದ, ಎಂ. ಮೋಹನ್ಕುಮಾರ್ಗೌಡ, ಡಾ.ಸಿ.ಎಂ.ನಂಜಯ್ಯ, ಬನ್ನೂರು ಪುಟ್ಟಸ್ವಾಮಿ, ಅತ್ತಹಳ್ಳಿ ದೇವರಾಜ್, ಎಂ.ಡಿ. ಶಿವರುದ್ರಸ್ವಾಮಿ, ಎಚ್.ವಿ.ಗಣೇಶ್, ಜಯಪ್ಪ ಹೊನ್ನಾಳಿ, ಖನ್ನೂರು ಕೃಷ್ಣಪ್ಪ, ಎನ್.ಪ್ರಸನ್ನ, ಬಿ. ಶಾಮಸುಂದರ್, ಎನ್. ಪ್ರಸನ್ನ, ಬ.ಸು. ರಾಜಶೇಖರಾಚಾರ್, ಪ್ರೊ.ಕೆ.ಎನ್.ಪುಟ್ಟರಾಜು, ಬಿ.ಶ್ಯಾಮಲಾಮೂರ್ತಿ, ಮುನಾವರ್ ಪಾಷಾ, ಬಿ.ಎಸ್.ಗಂಗಾಧರ್, ಕೆಂಪಾಚಾರ್ ಕುಪ್ಯ, ಸೀಹಳ್ಳಿ ಗುರುಮೂರ್ತಿ.
ಹೊನ್ನನಾಯ್ಕ, ಡಾ.ನಂಜಪ್ಪ, ಎಸ್.ಜವರಯ್ಯ, ಡಾ.ಜನಾರ್ದನ್, ರಾಧಾ ಮಲ್ಲಪ್ಪ, ಬಾಲಕೃಷ್ಣ, ಅದೀಬ್ ಅಖ್ತರ್, ಎಚ್.ಎಸ್. ಸಚ್ಚಿತ್, ಡಾ.ಎಂ.ಪಿ. ವರ್ಷಾ, ಬನ್ನೂರು ಕೆಂಪಯ್ಯ, ವಿದ್ಯಾ ರಂಗರಾಜನ್, ಜಯದೇವಿತಾಯಿ, ವೈ.ಕೆ. ಸಿದ್ದರಾಮೇಗೌಡ, ಬಿ.ಎಸ್. ಕಾಶಿ ವಿಶ್ವನಾಥ ಶೆಟ್ಟಿ, ಸಿ.ಎಸ್. ಕುಮಾರಸ್ವಾಮಿ, ಬಿ.ಪಿ. ನಂಜುಂಡಸ್ವಾಮಿ, ನಟೇಶ್, ಹನುಮಂತು, ನಾಗಶೆಟ್ಟಿ, ಹಾರ್ಮೋನಿಯಂ ಬೀರಪ್ಪ, ಭುವನೇಶ್ವರಿ, ಲೀಲಾವತಿ, ಕೆ. ಸುಜಾತ, ಎಂ.ಡಿ. ಪಾರ್ಥಸಾರಥಿ, ನಟ ಬನ್ನೂರು ಶ್ರೀನಿವಾಸಮೂರ್ತಿ, ನಳಿನಿ ತಮ್ಮಯ್ಯ, ಎಂ.ಎನ್. ನಂದಕುಮಾರ್, ಗಣೇಶ್ ದೀಕ್ಷಿತ್, ದಯಾನಂದಮೂರ್ತಿ, ಸಾ.ಸಿ. ದೊರೆಸ್ವಾಮಿ, ಹನುಮಂತು, ರಾಜು ಬಿ. ಕನ್ನಲಿ ಅವರು ಸನ್ಮಾನಕ್ಕೆ ಭಾಜನರಾದರು.
ಮೇಲುಕೋಟೆಯ ವೆಂಗಿಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪವಿಭಾಗಾಧಿಕಾರಿ ಬಸವರಾಜು, ಗುಬ್ಬಿಗೂಡು ಸಾಂಸ್ಕೃತಿಕ ಸಿರಿ ಸಂಸ್ಥೆಯ ಅಧ್ಯಕ್ಷ ಗುಬ್ಬಿಗೂಡು ರಮೇಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಮೂಗೂರು ನಂಜುಂಡಸ್ವಾಮಿ ಸ್ವಾಗತಿಸಿದರು. ವಿಜಯಲಕ್ಷ್ಮೀ, ಕೌಶಲ್ಯ ನಿರೂಪಿಸಿದರು. ನೂರ್ ಅಹಮ್ಮದ್ ಮರ್ಚೆಂಟ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

