ಮಹಿಳೆಯರ ಮೌನ ಪ್ರತಿಭಟನೆ
ಕೊಳ್ಳೇಗಾಲ: ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಮಾನಸಿಕ ಕಿರುಕುಳವನ್ನು ಸರ್ಕಾರ ತಡೆಯಬೇಕು. ಇಂತಹ ಕೃತ್ಯದಲ್ಲಿ ತೊಡಗುವವರ ವಿರುದ್ದ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮೈಸೂರಿನ ಓಡಿಪಿ ಮಹಿಳಾ ಸಂಘಟನೆಗಳ ಆಶ್ರಯದಲ್ಲಿ ಸಾವಿರಾರು ಮಹಿಳೆಯರು ಗುರುವಾರ ಮೌನ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಸರ್ಕಾರಿ ಎಂಜಿಎಸ್ವಿ ಕಾಲೇಜಿನಿಂದ ಮಹಿಳೋದಯ ಒಕ್ಕೂಟ, ಮೈಸೂರು ಒಡಿಪಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ತೆರಳಿದ ಸಾವಿರಾರು ಮಹಿಳಾ ಕಾರ್ಯಕರ್ತೆಯರು ಮಹಿಳೆಯರು ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ, ನಾರಿ ಮುನಿದರೆ ಮಾರಿ ಇದ ತಿಳಿಯೋ ಅತ್ಯಾಚಾರಿ, ಶಿಕ್ಷಕರೆ ಹೆಣ್ಣು ಮಕ್ಕಳ ಭಕ್ಷಕರಾದರೆ ರಕ್ಷಣೆ ಎಲ್ಲಿದೆ, ಹೋರಾಟ. ಹೋರಾಟ ಹೆಣ್ಣು ಮಕ್ಕಳ ಉಳಿವಿಗಾಗಿ ಹೋರಾಟ ಎಂಬಿತ್ಯಾಧಿ ಫಲಕಗಳನ್ನು ಹಿಡಿದು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿಯಲ್ಲಿ ಸಮಾವೇಶಗೊಂಡರು.
ಬಳಿಕ ಪ್ರತಿಭಟನೆ ನೇತೃತ್ವ ವಹಿಸಿದ್ದ ಮೈಸರು ಒಡಿಪಿ ಸಂಸ್ಥೆಯ ಸಂಯೋಜಕರಾದ ಸುನೀತಾ ಮಾತನಾಡಿ, ಮಹಿಳೆಯರಿಗೆ ರಕ್ಷಣೆ ನೀಡಲು ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರ, ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಿಂತಿಲ್ಲ ಎಂದು ವಿಷಾದಿಸಿದರಲ್ಲದೆ, ಸರ್ಕಾರ ಇಂತಹ ಕೃತ್ಯದಲ್ಲಿ ತೊಡಗಿಸಿಕೊಳ್ಳುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
10ಕ್ಕೂ ಹೆಚ್ಚು ಹಕ್ಕೊತ್ತಾಯಗಳನ್ನು ಮಹಿಳೆಯರು ಮಂಡಿಸಿ ಉಪತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಶಿಕಲಾ, ಕಸ್ತೂರಿ, ರಮೇಶ, ಕೊಳಂದೈಸ್ವಾಮಿ, ಚೇತನ, ನಾಗಸುಂದರ್, ಸದಾಶಿವ, ಮಣಿ, ಭಾಗ್ಯ, ಸೌಮ್ಯ, ರಾಜಮ್ಮ, ರತ್ನಮ್ಮ, ಗೌರಮ್ಮ, ಚಿನ್ನಮ್ಮ, ಸಣ್ಣಮ್ಮ, ನಾಗರತ್ನ, ರಾಣಿ, ಕೆಂಪಮ್ಮ, ಸಿದ್ದಮ್ಮ, ಚೌಡಮ್ಮ, ಪುಟ್ಟಗೌರಮ್ಮ, ಮಹಾದೇವಮ್ಮ, ಸಾಕಮ್ಮ, ಕಾವ್ಯ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ತಲೆತಗ್ಗಿಸುವ ಕೆಲಸ
ಚಾಮರಾಜನಗರ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಖಂಡಿಸಿ, ಒಡಿಪಿ ಸಂಸ್ಥೆಯ ಗ್ರಾಮೀಣ ಮಹಿಳೆಯರು ಗುರುವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಮಹಿಳೆಯರು, ಕಪ್ಪುಪಟ್ಟಿ ಧರಿಸಿ, ಹೆಣ್ಣನ್ನು ರಕ್ಷಿಸಿ, ಅತ್ಯಾಚಾರ ಮಾಡುವವರು ಭಯೋತ್ಪಾದಕರು ಎಂಬಿತ್ಯಾದಿ ಫಲಕಗಳನ್ನು ಹಿಡಿದು, ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ಆವರಣ ತಲುಪಿ, ಕೆಲ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಮಹಿಳೆ, ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ಕಿರುಕುಳ, ಅತ್ಯಾಚಾರ, ಹಲ್ಲೆ, ಕೊಲೆಯಂತಹ ಘೋರಕೃತ್ಯ ಖಂಡನೀಯ, ಇದೊಂದು ನಾಗರಿಕ ಸಮಾಜ ತಲೆತಗ್ಗಿಸುವಂತ ಕೆಲಸ, ಪಾಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು. ಪ್ರತಿ ಗ್ರಾಮಪಂಚಾಯಿತಿ ಹಾಗೂ ವಾರ್ಡ್ ವ್ಯಾಪ್ತಿಗಳಲ್ಲಿ ಕಾವಲು ಪಡೆ ಸಮಿತಿ ರಚಿಸಬೇಕು, ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡುವವರನ್ನು ಬಂಧಿಸಬೇಕು, ಗ್ರಾಪಂಗಳಲ್ಲಿ ನಡೆಯುವ ಮಹಿಳಾ ಗ್ರಾಮ ಸಭೆಗಳಲ್ಲಿ ಮಹಿಳಾ ದೌರ್ಜನ್ಯಗಳ ದೂರುಗಳ ಬಗ್ಗೆ ಪ್ರಸ್ತಾಪಿಸಬೇಕು, ಲೈಂಗಿಕ ಕಿರುಕುಳ ತಡೆಗಾಗಿ ಪ್ರೌಢಶಾಲಾ ಮತ್ತು ಕಾಲೇಜುಗಳಲ್ಲಿ ಮೂರು ತಿಂಗಳಿಗೊಮ್ಮೆ ಸಮಾಲೋಚನಾ ಸಭೆ ನಡೆಸಿ, ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದರು. ಅರಳಪ್ಪ, ಮಣಿ, ಶಾಂತರಾಜು, ಪುಷ್ಪಲತಾ, ರೇಖಾ, ಚಿನ್ನಮ್ಮ, ರವಿಕುಮಾರ್, ನಾಗರಾಜು, ಜೋಸೆಫ್, ಜೇಸುರಾಜ್, ಸ್ಟೆಲ್ಲಾ ಮೇರಿ, ಮೇರಿಗ್ರೇಸ್, ರಾಜಮ್ಮ, ಬಸಮ್ಮ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

