ಚಾಮರಾಜನಗರ

ಅರ್ಹರಿಗೆ ಯೋಜನೆಗಳು ತಲುಪಲಿ

Published On :

ಕ.ಪ್ರ.ವಾರ್ತೆ, ಗುಂಡ್ಲುಪೇಟೆ, ಜು. 18
ಸರ್ಕಾರ ಜನಪ್ರಿಯ ಯೋಜನೆಗಳನ್ನು ರೂಪಿಸಿದ್ದರೂ, ಜನಸಾಮಾನ್ಯರಿಗೆ ತಲುಪದಿದ್ದರೆ ಪ್ರಯೋಜವಾಗುವುದಿಲ್ಲ. ಅದ್ದರಿಂದ ಅಧಿಕಾರಿಗಳು ಜನರ ಬಳಿಗೆ ಸವಲತ್ತನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ತಾಪಂ ನೂತನ ಅಧ್ಯಕ್ಷ ಕನ್ನೇಗಾಲಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ನೂತನ ಅಧ್ಯಕ್ಷರಾದ ನಂತರ ಶುಕ್ರವಾರ ನಡೆದ ಮೊದಲ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದ್ದು ಹಲವು ಯೋಜನೆಗಳ ಸವಲತ್ತುಗಳು ಸರಿಯಾಗಿ ತಲುಪುತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಆರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಮೂಲಕ ಸರ್ಕಾರದ ಯೋಜನೆಗಳು ಸದ್ಬಳಕೆಯಾಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿಗಳು ಜನಸಾಮಾನ್ಯರನ್ನು ಅಲೆಸುವ ಹಳೇ ಚಾಳಿ ಬಿಟ್ಟು ಸರ್ಕಾರದ ಯೋಜನೆಗಳನ್ನು ಅವರು ಇರುವ ಸ್ಧಳಕ್ಕೆ ತಲುಪಿಸುವ ಕೆಲಸ ಮಾಡಬೇಕು. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದನ್ನು ತಾಲೂಕಿನಾದ್ಯಂತ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಇಲ್ಲ ಎಂದು ಮೆಡಿಕಲ್ ಶಾಪ್‌ಗೆ ಚೀಟಿ ಬರೆಯುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಹಾಗಾಗ ಬಾರದು ಎಂದು ಆರೋಗ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು. ವಾರದೊಳಗೆ ಖಾಸಗಿ ಕ್ಲಿನಿಕ್‌ಗಳ ಬಗ್ಗೆ ಮಾಹಿತಿ ಒದಗಿಕಲು ಆರೋಗ್ಯಾಧಿಕಾರಿಗೆ ತಿಳಿಸಿದರು.
ಕಂಪನಿಗಳೊಂದಿಗೆ ಸಂಪರ್ಕ: ಕೃಷಿ ಇಲಾಖೆಯ ಇಲ್ಲಿನ ಅಧಿಕಾರಿಗಳು ರೈತರೊಂದಿಗೆ ಸಂಪರ್ಕ ಹೊಂದಿಲ್ಲ. ಅವರೇನಿದ್ದರೂ ಖಾಸಗಿ ಕಂಪನಿ ಹಾಗು ಮಧ್ಯವರ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕಿಡಿಕಾರಿದ ಅಧ್ಯಕ್ಷರು,  ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಇಂದಿನ ಸಭೆಗೆ ಬಂದಿಲ್ಲ. ಕೃಷಿ ಇಲಾಖೆಯಲ್ಲಿ ರೈತರಿಗೆ ತಲುಪುವ ಯೋಜನೆ ನೇರವಾಗಿ ತಲುಪದ ಕಾರಣ ಪ್ರತ್ಯೇಕವಾಗಿ ಕೃಷಿ ಇಲಾಖೆಗೆ ಪ್ರಗತಿ ಪರಿಶೀಲನೆ ನಡೆಸುವುವಂತೆ ತಾಪಂ ಇಒಗೆ ಸೂಚನೆ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ, ಸಭೆಗೆ ಬರುವ ಅಧಿಕಾರಿಗಳು ಕೇಂದ್ರ, ರಾಜ್ಯ ಹಾಗೂ ಜಿಪಂಗೆ ಸೇರಿದ ಯೋಜನೆಗಳ ಬಗ್ಗೆಯೂ ಮಾಹಿತಿ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಣಣದಲ್ಲಿರುವ ಸ್ತ್ರೀ ಶಕ್ತಿ ಭವನದ ಮಳಿಗೆಗೆ ಹರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಶಾಸಕರ ಗಮನಕ್ಕೂ ತರಲಾಗಿದೆ. ಮುಂದಿನ ವಾರದೊಳಗೆ ಸ್ತ್ರೀ ಶಕ್ತಿ ಭವನದ ಉಳಿದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೇಳಿಕೊಂಡರು. ಇಲಾಖೆವಾರು ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅಧ್ಯಕ್ಷರು ಮುಂದಿನ ಸಾಮಾನ್ಯ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಮಗ್ರ ವರದಿಯೊಂದಿಗೆ ಬರಬೇಕು ಎಂದು ತಾಕೀತು ಮಾಡಿದರು.
ತಾಪಂ ಉಪಾಧ್ಯಕ್ಷ ಬಂಗಾರನಾಯಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿನುತಾ, ಸೆಸ್ಕಾಂ ಎಇಇ ಸಿದ್ದಲಿಂಗಪ್ಪ, ಭೂಸೇನಾ ನಿಗಮ ಎಇಇ ರವಿಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಸೇರಿದಂತೆ ಇಲಾಖೆವಾರು ಅಧಿಕಾರಿಗಳಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.