ಗ್ರಾಪಂ ಅಮಾನತಿಗೆ ಖಂಡನೆ
ಚಾಮರಾಜನಗರ: ತಾಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪಂಚಾಯತ್ ರಾಜ್ ಕಾಯ್ದೆಗೆ ವಿರುದ್ಧವಾಗಿ ಅಮಾನತುಪಡಿಸಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ, ಮಾಜಿ ಶಾಸಕ ಸಿ. ಗುರುಸ್ವಾಮಿ ಖಂಡಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ವಿರೋಧಿಸಿ ಬಿಜೆಪಿಯಿಂದ ಕಾನೂನಾತ್ಮಕ ಹೋರಾಟ ಮಾಡುವ ಜೊತೆಗೆ ರಾಜ್ಯ ಚುನಾವಣಾ ಆಯೋಗ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.
ಪುಣಜೂರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿಗ ಎಚ್. ಮೂರ್ತಿ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂಬ ಏಕೈಕ ಉದ್ದೇಶದಿಂದ ಸ್ಥಳೀಯ ಶಾಸಕರು ಹಾಗೂ ಸಂಸದರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಲ್ಲಿನ 9 ಮಂದಿ ಗ್ರಾಪಂ ಸದಸ್ಯರಿಂದ ರಾಜಿನಾಮೆ ಕೊಡಿಸಿ, ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಮಾಡಿದ್ದಾರೆ ಎಂದು ದೂರಿದರು.
ಗ್ರಾ.ಪಂ. ಅಧ್ಯಕ್ಷನ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಸೋತ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡದೆ, ಅಲ್ಲಿನ ಜನರಿಂದ ಆಯ್ಕೆಯಾಗಿರುವ ಸದಸ್ಯರಿಂದ ಬಲವಂತವಾಗಿ ರಾಜಿನಾಮೆ ಕೊಡಿಸಿ, ಅದು ಅಂಗೀಕರವಾಗುವ ಮುನ್ನವೇ ತಾ.ಪಂ. ಇಒ, ಜಿ.ಪಂ. ಸಿಇಒ ಮುಖಾಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಒಂದೇ ದಿನದಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಿಫಾರಸ್ಸು ಮಾಡಿರುವ ಅಧಿಕಾರಿಯನ್ನೇ ಆಡಳಿತಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ಸಂವಿಧಾನ ಹಾಗೂ ಪಂಚಾಯತ್ ರಾಜ್ ನಿಯಮಗಳನ್ನು ಜಿಲ್ಲಾಧಿಕಾರಿ ಗಾಳಿಗೆ ತೂರಿದ್ದಾರೆ ಎಂದು ದೂರಿದರು. ಇಡೀ ಪ್ರಕರಣ ರಾಜಕೀಯ ಒತ್ತಡದಿಂದ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಜಿಲ್ಲಾಧಿಕಾರಿಗಳು ತಮಗೆ ಇಲ್ಲದ ಅಧಿಕಾರವನ್ನು ಚಲಾಯಿಸಿ ಪಂಚಾಯಿತಿಯನ್ನು ಅಮಾನತು ಪಡಿಸಿದ್ದಾರೆ. ಅಲ್ಲದೇ ಗ್ರಾ.ಪಂ.ನ 9 ಮಂದಿ ಸದಸ್ಯರು ಒಂದೇ ಕಾರಣವನ್ನು ನೀಡಿ, ರಾಜಿನಾಮೆ ನೀಡಿದ್ದಾರೆ. ಕೈಬರಹದಲ್ಲಿ ರಾಜಿನಾಮೆ ನೀಡಬೇಕು ಎಂಬ ನಿಯಮವಿದ್ದರೂ ಕಂಪ್ಯೂಟರ್ ಪ್ರಿಂಟ್ಗೆ ಸಹಿ ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ 15 ದಿನಗಳೊಳಗೆ ಸಭೆ ಕರೆದು ಈ ವಿಷಯ ಚರ್ಚೆಯಾಗಿ ರಾಜಿನಾಮೆ ಆಂಗೀಕರವಾಗಬೇಕಾಗಿದೆ. ಅದರೆ ಕೋರಂ ಅಭಾವದಿಂದ ಅಧ್ಯಕ್ಷರು ಸಭೆ ನಡೆಸಲು ಸಾಧ್ಯವಾಗದೇ ಮುಂದೂಡಿದ್ದಾರೆ. ಈ ಪ್ರಕ್ರಿಯೆಯನ್ನು ಗಮನಿಸದೇ ಅಲ್ಲಿನ ಪಿಡಿಓ ತಾ.ಪಂ. ಇಓಗೆ ನೀಡಿರುವ ವರದಿ ಹಾಗೂ ಇಓ ಮಾಡಿರುವ ಶಿಫಾರಸಿಗೆ ಜಿಲ್ಲಾಧಿಕಾರಿಗಳು ಸಹಿ ಮಾಡಿರುವುದು ದೊಡ್ಡ ದುರಂತವೇ ಸರಿ ಎಂದು ಗುರುಸ್ವಾಮಿ ತಿಳಿಸಿದರು.
ಇದನ್ನು ಮನಗಂಡ ಸೂಕ್ತ ನಿರ್ದೇಶನ ನೀಡಬೇಕಾದ ಜಿಲ್ಲಾಧಿಕಾರಿಗಳು ಇಂತಹ ತಪ್ಪು ನಿರ್ಧಾರಗಳನ್ನು ಪ್ರಕಟಿಸಿ, ಅಲ್ಲಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ. ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಎಸ್ಟಿ ಮೋರ್ಚಾ ಸಾಂಸ್ಕೃತಿಕ ಕಾರ್ಯದರ್ಶಿ ಎಸ್. ಸೋಮನಾಯಕ, ನಗರ ಘಟಕದ ಅಧ್ಯಕ್ಷ ಎಂ. ಶಿವಣ್ಣ, ಗ್ರಾ.ಪಂ. ಅಧ್ಯಕ್ಷ ಎಚ್. ಮೂರ್ತಿ, ಸದಸ್ಯರಾದ ಪುಟ್ಟಸ್ವಾಮಿಗೌಡ, ಸಾಮಿಲ್ ಪಾಷಾ, ಕುಮಾರನಾಯಕ, ರಮೇಶ್ ನಾಯಕ ಇದ್ಜರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

