ಪೊಲೀಸರ ಮೇಲೆ ಹಲ್ಲೆ: ಎಬಿವಿಪಿ ಧರಣಿ
ಚಾಮರಾಜನಗರ: ರಾಜ್ಯದಲ್ಲಿ ಪೊಲೀಸರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿತು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸರ ಮೇಲಿನ ಹಲ್ಲೆಗಳ ಬಗ್ಗೆ ಕ್ರಮ ತೆಗೆದುಕೊಳ್ಳದ ಸರ್ಕಾರದ ವಿರುದ್ಧ ಘೋಷನೆ ಕೂಗಿ ಗೃಹ ಸಚಿವರ ರಾಜಿನಾಮೆಗೆ ಆಗ್ರಹಿಸಿದರು. ನಗರ ಘಟಕದ ಕಾರ್ಯದರ್ಶಿ ನಂದೀಶ್ ಮಾತನಾಡಿ, ರಾಜ್ಯದಲ್ಲಿ ಅನೇಕ ದಿನಗಳಿಂದ ಪೊಲೀಸರ ಮೇಲೆ ಹಲವಾರು ಹಲ್ಲೆಗಳು ನಡೆದಿವೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯವರ ಹತ್ಯೆಯಾಯಿತು ಎಂದು ಆರೋಪಿಸಿದರು. ಏ.19 ರಂದು ಶೃಂಗೇರಿಯ ಚೆಕ್ ಪೋಸ್ಟ್ನಲ್ಲಿ ನಡೆದ ಶೂಟೌಟ್ನಲ್ಲಿ ಸರ್ಕಾರವು ಕೈದಿಗೆ 10 ಲಕ್ಷ ನೀಡಿ ಪೊಲೀಸರನ್ನು ಅಮಾನತು ಮಾಡಿತು. ಶಾಸಕರಿಂದ ಪೊಲೀಸರ ಮೇಲೆ ಹಲ್ಲೆ, ಮಂಡ್ಯದಲ್ಲಿ ಗೋ ಕಳ್ಳರಿಂದ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಗೃಹ ಸಚಿವರು ಕೂಡಲೇ ರಾಜಿನಾಮೆ ನೀಡಬೇಕೆಂದು ಅಗ್ರಹಿಸಿದರು. ತಾಲೂಕು ಅಧ್ಯಕ್ಷ ನೂತನ್, ಶಿವು, ನಾಗೇಂದ್ರ, ಈಶ್ವರ್, ರಾಜೇಶ, ಆನಂದ ಚಂದ್ರು ಇತರರು ಭಾಗವಹಿಸಿದ್ದರು.
ನೀರಿನ ಸಮಸ್ಯೆಗೆ ಪರಿಹಾರ: ಸಚಿವರ ಭರವಸೆ
ಗುಂಡ್ಲುಪೇಟೆ: ಕುಡಿಯುವ ನೀರಿಗಾಗಿ ಖಾಲಿ ಬಿಂದಿಗೆಗಳನ್ನು ಇಟ್ಟುಕೊಂಡು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ದೃಶ್ಯ ನೋಡಿದ ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಸ್ಥಳಕ್ಕೆ ಬಂದು, ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದರು. ಅಣ್ಣೂರುಕೇರಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಸಚಿವರು ಕಾರಿನಲ್ಲಿ ತೆರಳುತ್ತಿದ್ದಾಗ, ಅಣ್ಣೂರು ಗ್ರಾಮದ ರಸ್ತೆಯ ಬದಿ ಸುಮಾರು 300ಕ್ಕು ಖಾಲಿ ಬಿಂದಿಗೆ ತೊಂಬೆಯ ಮುಂದೆ ಇರುವುದನ್ನು ಗಮನಿಸಿದರು.
ಅಣ್ಣೂರುಕೇರಿಯಲ್ಲಿ ಭಾಷಣ ಮುಗಿಸಿ ವಾಪಸ್ ಬರುತ್ತಿದ್ದಾಗ ಖಾಲಿ ಬಿಂದಿಗೆ ಇರುವ ತೊಂಬೆಯ ಜಾಗಕ್ಕೆ ಬಂದು ಮಹಿಳೆಯರ ಸಮಸ್ಯೆ ಆಲಿಸಿದರು. ಮಹಿಳೆಯರು ನೀರಿನ ಸಮಸ್ಯೆಯ ಬಗ್ಗೆ ವಿವರಿಸಿದರು. ಸಾವಧಾನದಿಂದಲೇ ಸಮಸ್ಯೆ ಆಲಿಸಿದ ಸಚಿವ ಮಹದೇವಪ್ರಸಾದ್, ಸ್ಥಳದಲ್ಲೇ ಹಾಜರಿದ್ದ ಜಿಪಂ ಎಇಇ ವಿಜಯಸಾರಥಿ ಅವರಿಗೆ ನಾಳೆಯೇ ಈ ಗ್ರಾಮದಲ್ಲಿ 2 ಬೋರ್ವೆಲ್ ಕೊರೆಯಿಸಿ, ಕುಡಿಯಲು ನೀರು ಕೊಡಿ ಎಂದು ಸೂಚನೆ ನೀಡಿದರು.
ಸಂಚಾರಿ ಕಾನೂನು ಉಲ್ಲಂಘನೆ: ಪೊಲೀಸರ ನಿರ್ಲಕ್ಷ್ಯ
ಗುಂಡ್ಲುಪೇಟೆ: ತಾಲೂಕಿನ ಬೇಗೂರು ಪೊಲೀಸ್ ಠಾಣೆಯ ಮುಂದೆ ಸರಕು ಸಾಕಾಣಿಗೆ ಪರವಾನಗಿಯಿರುವ ಲಾರಿಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಹೋದರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ. ಮೂರು ದಿನಗಳ ಹಿಂದೆ ದೇವಸ್ಥಾನಕ್ಕೆ ತೆರಳಿ ಟ್ರ್ಯಾಕ್ಟರ್ನಲ್ಲಿ ವಾಪಸ್ ಬರುತ್ತಿದ್ದಾಗ ಆಯತಪ್ಪಿ ಉರುಳಿ ಬಿದ್ದು ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ನಲ್ಲಿದ್ದ 20 ಕ್ಕೂ ಹೆಚ್ಚು ಜನರಿಗೆ ತೀವ್ರವಾದ ಗಾಯಗಳಾಗಿವೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಪೊಲೀಸ್ ಠಾಣೆಯ ಮುಂದೆಯೇ ರಾಜಾರೋಷವಾಗಿ ಹೋದರೂ ಪೊಲೀಸರು ತಡೆಯುವ ಕೆಲಸ ಮಾಡಿಲ್ಲ. ಲಾರಿಯಲ್ಲಿ ಜನರನ್ನು ತುಂಬಿಕೊಂಡು ಈ ರಸ್ತೆಯಲ್ಲಿ ಹೋಗುವುದಲ್ಲದೇ, ಗೂಡ್ಸ್ ಆಟೋಗಳಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ. ಇದೀಗ ನಿಯಮ ಉಲ್ಲಂಘಿಸಿ ತ್ರಿಬಲ್ ರೈಡ್ ಸವಾರರು ಸಹ ಈಗ ಯಾವುದೇ ಅಂಜಿಕೆಯಿಲ್ಲದೆ ಪೊಲೀಸ್ ಠಾಣೆಯ ಮುಂದೆಯೇ ಒಡಾಟ ಶುರುಮಾಡಿದ್ದಾರೆ. ತ್ರಿಬಲ್ ರೈಡ್ಸ್, ಗೂಡ್ಸ್, ಲಾರಿಗಳಲ್ಲಿ ಜನರನ್ನು ತುಂಬಿಕೊಂಡು ಹೋಗುವುದಕ್ಕೆ ಇನ್ನಾದರೂ ಪೊಲೀಸರು ಕಡಿವಾಣ ಹಾಕಬೇಕಿದೆ.
ಕೇಂದ್ರ ಬಜೆಟ್ ವಿರೋಧಿಸಿ ಎಸ್ಯುಸಿಐ ಧರಣಿ
ಮೈಸೂರು: ಕೇಂದ್ರ ಸರ್ಕಾರವು ಮಂಡಿಸಿದ ಬಜೆಟ್ ಜನವಿರೋಧಿಯಾಗಿದೆ ಎಂದು ಖಂಡಿಸಿ ಎಸ್ಯುಸಿಐ (ಸಿ) ಮೈಸೂರು ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಚಾಮರಾಜೇಂದ್ರ ವೃತ್ತದ ಬಳಿ ಶನಿವಾರ ಪ್ರತಿಭಟಿಸಿದರು. ಬೆಲೆ ಏರಿಕೆ, ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಕ್ರಮ ವಹಿಸಿಲ್ಲ. ಒಳ್ಳೆಯ ದಿನಗಳು ಬರಲು ಎಷ್ಟು ವರ್ಷ ಕಾಯಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉತ್ತರಿಸಬೇಕು. ಯುಪಿಎ ಸರ್ಕಾರದ ದುರಾಡಳಿತ, ಭ್ರಷ್ಟಾಚಾರಗಳಿಂದ ಬೇಸತ್ತ ಜನ ಬಿಜೆಪಿಗೆ ಮತ ನೀಡಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಮೊದಲ ಬಜೆಟ್ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಯಾವುದೇ ಅಂಶಗಳನ್ನು ಹೊಂದಿಲ್ಲ ಎಂದು ಆರೋಪಿಸಿದರು.
ಮೇಟಗಳ್ಳಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸಿ
ಮೈಸೂರು: ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೇಟಗಳ್ಳಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವಂತೆ ಕೋರಿ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ವಾಸು ಭಾನುವಾರ ಮನವಿ ಸಲ್ಲಿಸಿದರು. ಮೇಟಗಳ್ಳಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವುದರಿಂದ ಈ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ವರ್ತುಲ ರಸ್ತೆಗಾಗಿ ಬನ್ನಿಮಂಟಪದ ಬಳಿ 18 ಮೀಟರ್ ರೈಲ್ವೆ ಅಂಡರ್ ಬ್ರಿಡ್ಜ್ ವಿಸ್ತರಿಸಲು ಅವಕಾಶ ಕಲ್ಪಿಸಬೇಕು. ಹೈವೇ ವೃತ್ತದಿಂದ ಯಾದವಗಿರಿ ಸಂಪರ್ಕ ಕಲ್ಪಿಸುವ ಅಂಡರ್ ಬ್ರಿಡ್ಜ್ ವಿಸ್ತರಿಸಬೇಕು. ಮೈಸೂರು ವಿವಿ ಕ್ರಾಫರ್ಡ್ ಭವನ ಪಕ್ಕದ (ಕುಕ್ಕರಹಳ್ಳಿಕೆರೆ ಬಳಿ) ರೈಲ್ವೆ ಗೇಟ್ ಬಳಿ ಹಾಗೂ ಚಾಮರಾಜಪುರಂ ರೈಲು ನಿಲ್ದಾಣ ಅಂಡರ್ಪಾಸ್ ನಿರ್ಮಿಸಬೇಕು ಎಂದು ವಾಸು ಕೋರಿದರು.
ಎಂಸಿಸಿಐ ಮನವಿ: ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಂಸಿಸಿಐ) ಪದಾಧಿಕಾರಿಗಳು ರೈಲ್ವೆ ಸಚಿವರನ್ನು ಭೇಟಿಯಾಗಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.ಮೈಸೂರು- ಮಡಿಕೇರಿ ಹೊಸ ರೈಲು ಮಾರ್ಗ ನಿರ್ಮಿಸಬೇಕು. ಮೈಸೂರಿನಿಂದ ಕೇರಳದ ನೀಲಂಬೂರಿಗೆ ಸುಲ್ತಾನ್ ಬತ್ತೇರಿ ಮೂಲಕ ರೈಲು ಮಾರ್ಗ ನಿರ್ಮಿಸಬೇಕು. ಮೈಸೂರು- ಮಂಗಳೂರು ರೈಲು ವೇಳಾಪಟ್ಟಿ ಬದಲಿಸಬೇಕು. ಮೈಸೂರು- ಮೆಟ್ಟುಪಾಳ್ಯಂ ರೈಲು ಮಾರ್ಗ ಆಗಬೇಕು. ಉದ್ಯಾನ್ ಎಕ್ಸ್ಪ್ರೆಸ್, ಕರ್ನಾಟಕ ಎಕ್ಸ್ಪ್ರೆಸ್, ಅಜ್ಮೀರ್ ಮತ್ತು ಜೈಪುರ್ ಎಕ್ಸ್ಪ್ರೆಸ್ ರೈಲು ಮೈಸೂರಿಗೆ ಪ್ರತಿದಿನ ಬರುವಂತೆ ವಿಸ್ತರಿಸಬೇಕು ಎಂದು ಕೋರಿದರು. ಎಂಸಿಸಿಐ ಅಧ್ಯಕ್ಷ ಎ.ಎಸ್.ಸತೀಶ್, ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಪದಾಧಿಕಾರಿಗಳಾದ ಎನ್.ಎಚ್.ಜಯರಾಮ್, ಶ್ರೀಶೈಲ ರಾಮಣ್ಣನವರ್, ಎಂ.ಸಿ. ಬನ್ಸಾಲಿ ಇದ್ದರು.
ತಾಲೂಕಲ್ಲಿ ಕನ್ನಡ ಅಭಿಮಾನ ಕ್ಷೀಣ: ದೇವರಾಜ್ ವಿಷಾದ
ಗುಂಡ್ಲುಪೇಟೆ: ತಾಲೂಕಿನಲ್ಲಿ ಕನ್ನಡದ ಬಗ್ಗೆ ಗೌರವ ಮತ್ತು ಅಭಿಮಾನ ಕಡಿಮೆಯಾಗಿದೆ. ಪರಭಾಷೆ ವ್ಯಾಮೋಹವೇ ಇದಕ್ಕೆ ಕಾರಣವಾಗಿದೆ ಎಂದು ಕಸಾಪದ ಹೋಬಳಿ ಘಟಕದ ಅಧ್ಯಕ್ಷ ಗುಂಪು ದೇವರಾಜ್ ಹೇಳಿದರು.
ಪಟ್ಟಣದ ಶಂಕರ ನಾರಾಯಣ ಜೋಯಿಷ್ರ ಮನೆ ಆವರಣದಲ್ಲಿ ಕಸಬಾ ಹೋಬಳಿ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜನಸೇವಾ ಯುವಕರ ಸಂಘ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಮನೆ ಕವಿಗೋಷ್ಠಿ ನಡೆಸುವ ಮೂಲಕ ಕನ್ನಡ ಉಳಿಸುವ ಹಂಬಲ ನಮ್ಮದಾಗಿದೆ. ತಮಿಳು, ಮಲೆಯಾಳಂ ಭಾಷಿಕರ ವ್ಯಾಪಾರ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಕನ್ನಡ ಭಾಷೆ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಮಾತನಾಡಿ, ಕನ್ನಡ ರಾಷ್ಟ್ರಭಾಷೆಯಾಗುವಂತಹ ವಾತಾವರಣ ನಿರ್ಮಿಸಬೇಕು. ನಮ್ಮಲ್ಲಿರುವ ಸಂಘಟನಾ ಕೊರತೆಯಿಂದ ಭಾಷೆ ಕುಂಠಿತವಾಗಿದೆ. ಅಧಿಕಾರಿಗಳು ಹಾಗೂ ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಕನ್ನಡ ಉಳಿಸಬೇಕು ಎಂದರು.
ಕಬಿನಿ ಒಳಹರಿವು ಹೆಚ್ಚಳ
ಮೈಸೂರು: ಕೇರಳದ ವಯನಾಡು ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಭಾನುವಾರ ಜಲಾಶಯಕ್ಕೆ 8,000 ಕ್ಯುಸೆಕ್ ನೀರು ಬರುತ್ತಿದ್ದು, 1000 ಕ್ಯುಸೆಕ್ ಹೊರಬಿಡಲಾಗುತ್ತಿದೆ. ಜಲಾಶಯದ ಈಗಿನ ಮಟ್ಟ 2272.70 ಅಡಿ. ಗರಿಷ್ಠ ಮಟ್ಟ 2284 ಅಡಿ. ಜಲಾಶಯದಲ್ಲಿ 13 ಟಿಎಂಸಿ ನೀರು ಸಂಗ್ರಹವಾಗಿದೆ.
ತಂಪೆರೆದ ಮಳೆ: ಮೈಸೂರಿನಲ್ಲಿ ಭಾನುವಾರ ಬೆಳಗಿನ ಜಾವ ಮಳೆಯಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ತಂಪಾದ ವಾತಾವರಣ. ಆಗಾಗ ಸೋನೆ ಮಳೆ. ಸೂರ್ಯದ ದರ್ಶನ ಕಡಿಮೆ ಇತ್ತು. ಶೀತಗಾಳಿ ಹೆಚ್ಚಾಗಿತ್ತು.
ಅನ್ನಭಾಗ್ಯದ 4 ಟನ್ ಅಕ್ಕಿ ವಶ
ಬನ್ನೂರು: ಪಟ್ಟಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಅನ್ನಭಾಗ್ಯದ 4 ಟನ್ ಅಕ್ಕಿಯನ್ನು ನಂಜನಗೂಡು ಉಪವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ತಾಜ್ ರೈಸ್ಮಿಲ್ನಲ್ಲಿ ಅಕ್ಕಿಯನ್ನು ಅಕ್ರಮವಾಗಿ ಶೇಖರಿಸಿಡಲಾಗಿತ್ತು. ಖಚಿತ ಮಾಹಿತಿಯೊಂದಿಗೆ ನಂಜನಗೂಡು ಉಪವಿಭಾಗದ ಎಎಸ್ಪಿ. ಪಿ.ರಾಜ ನೇತೃತ್ವದಲ್ಲಿ ಆಗಮಿಸಿದ್ದ ಪೊಲೀಸರು ಬನ್ನೂರು ಸಂತೆಮಾಳದಲ್ಲಿ ಕಾಯುತ್ತಿದ್ದಾಗ ಟಾಟಾ ಏಸ್ ವಾಹನವೊಂದು ತಾಜ್ ರೈಸ್ಮಿಲ್ನಲ್ಲಿ ನಿಂತುಕೊಂಡಿತು. ಆಗ ವಾಹನ ಚಾಲಕನ್ನು ವಿಚಾರಿಸಿದಾಗ ಚಾಮರಾಜನಗರದಿಂದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ತಾಜ್ ರೈಸ್ಮಿಲ್ಗೆ ಹಾಕುವಂತೆ ತಿಳಿಸಿದ್ದಾರೆ ಎಂಬ ಉತ್ತರ ಬಂದ ಕೂಡಲೇ ದಾಳಿ ನಡೆಸಲಾಯಿತು. ರೈಸ್ಮಿಲ್ನಲ್ಲಿ 360 ವಿವಿಧ ಬ್ರಾಂಡ್ ಚೀಲಗಳಲ್ಲಿ ಅಕ್ಕಿ ತುಂಬಿದ್ದು ಇದರ ಬಗ್ಗೆ ಮಿಲ್ ಮಾಲೀಕನನ್ನು ದಾಖಲಾತಿಗಳನ್ನು ಕೇಳಿದಾಗ ಯಾವುದೇ ದಾಖಲಾತಿಗಳನ್ನು ಹಾಜರು ಪಡಿಸಲಿಲ್ಲ. ನಂತರ ನರಸೀಪುರ ವೃತ್ತ ನಿರೀಕ್ಷರು, ಬನ್ನೂರು ಠಾಣೆಯ ಉಪ ನಿರೀಕ್ಷರು ಸ್ಥಳಕ್ಕೆ ಬಂದು ತಪಾಸಣೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

