ಜವಳಿ ಪಾರ್ಕ್ ಅಭಿನಂದನಾರ್ಹ: ಪ್ರತಾಪ್
ಮೈಸೂರು: ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ನಲ್ಲಿ ಮೈಸೂರಿಗೆ ಜವಾಳಿ ಪಾರ್ಕ್ ಮಂಜೂರು ಮಾಡಿರುವುದು ಅಭಿನಂದನಾರ್ಹ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ನಗರಕ್ಕೆ ಜವಳಿ ಪಾರ್ಕ್ ನೀಡಿರುವುದು ಸ್ವಾಗತಾರ್ಹ. ಇದರಿಂದ ಈ ಭಾಗದ ಜನತೆಗೆ ಅನುಕೂಲ ಆಗಲಿದೆ ಎಂದರು. ಈಗಾಗಲೆ ಮೈಸೂರು- ಕುಶಾಲನಗರ ರೈಲ್ವೆ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಮಡಿಕೇರಿವರೆಗೆ ಸರ್ವೇ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ. ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಶೀಘ್ರದಲ್ಲೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಹಿಳಾ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಲಿ
ಮೈಸೂರು: ಮಹಿಳಾ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪೊಲೀಸ್ ಪೇದೆ ಪರೀಕ್ಷಾ ತರಬೇತಿ ಉದ್ಘಾಟನೆ ಹಾಗೂ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದಲ್ಲಿ ಪ್ರತಿ ನಿಮಿಷಕ್ಕೆ 1 ಹೆಣ್ಣಿನ ಭ್ರೂಹಣ ಹತ್ಯೆ, 15 ನಿಮಿಷಕ್ಕೊಂದು ಅತ್ಯಾಚಾರ, 40 ನಿಮಿಷಕ್ಕೊಂದು ಲೈಂಗಿಕ ಕಿರುಕುಳ, 16 ನಿಮಿಷಕ್ಕೊಂದು ಕೊಲೆ, 9 ನಿಮಿಷಕ್ಕೊಂದು ಕ್ರೂರ ನಡವಳಿಕೆ, 10 ನಿಮಿಷಕ್ಕೊಂದು ವರದಕ್ಷಿಣೆ ಬಲಿ ಹಾಗೂ ಇದರ ಜತೆಗೆ ಸಾಮೂಹಿಕ ಅತ್ಯಾಚಾರವು ಸೇರಿಕೊಂಡಿದೆ. ಮಹಿಳೆಯರ ಮೇಲಿನ ಇಂತಹ ಶೋಷಣೆಯನ್ನು ತಪ್ಪಿಸುವಲ್ಲಿ ನಾಗರಿಕ ಸಮಾಜವು ಎಚ್ಚರ ವಹಿಸಬೇಕು ಎಂದರು.
ಅನಾದಿ ಕಾಲದಿಂದಲೂ ಮಹಿಳೆಯರನ್ನು ಮಾತೆ, ದೇವತೆ, ಪೃಥ್ವಿ ಈ ಮುಂತಾಗಿ ಗೌರವಿಸುವುದು ಕೇಳಿದ್ದೇವೆ. ಆದರೆ ಪುರಾಣದ ಕಾಲದಿಂದಲೂ ಇಂದಿನವರೆಗೂ ಆಕೆಯನ್ನು ಹಿಂಸಿಸುವ ಪರಿ ನಿಂತಿಲ್ಲ. ಈಗಲೂ ಬಾಲ್ಯ ವಿವಾಹಗಳು ಕೆಲವು ಗ್ರಾಮೀಣ ಭಾಗದಲ್ಲಿ ನಡೆದಿವೆ. ಸಮಾಜದ ಇಂಥ ಹಲವು ಅನಿಷ್ಠ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ದೇಶದಲ್ಲಿ ಕಾನೂನು ಸಂಘರ್ಷಕ್ಕೆ ಇಳಿದಿರುವ ಬಾಲಕರ ಸಂಖ್ಯೆಯು ಹೆಚ್ಚಾಗುತ್ತಿದ್ದು, ಅವರ ಮನಪರಿವರ್ತಿಸುವ ಕೆಲಸ ಹೆಚ್ಚಾಗಿ ನಡೆಯಬೇಕು. ರಾಜ್ಯದ ಕೋಲಾರದಲ್ಲಿ 42 ಮಂದಿ ಬಾಲಕರು ವಿವಿಧ ಅಪರಾಧಿ ಕೃತ್ಯಗಳಲ್ಲಿ ಭಾಗಿಗಳಾಗಿ ವಿಚಾರಣೆಗೆ ಒಳಪಟ್ಟಿದ್ದಾರೆ. ಅತಿಸಣ್ಣ ವಯಸ್ಸಿನಲ್ಲಿಯೇ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯಂಥ ಕೃತ್ಯಗಳಲ್ಲಿ ತೊಡಗಿರುವುದು ಆತಂಕದ ಸಂಗತಿ ಎಂದರು.
ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಕಾನೂನಿನ ತಿಳಿವಳಿಕೆ ನೀಡಿ ಅರಿವು ಮೂಡಿಸುವುದು ಆಯೋಗದ ಪ್ರಮುಖ ಧ್ಯೇಯವಾಗಿದೆ. ಸಮಾಜದಲ್ಲಿ ಹೆಚ್ಚಾಗುತ್ತಿರುವ ಕ್ರೌರ್ಯವನ್ನು ತಡೆಗಟ್ಬಬೇಕಾದರೆ ಕೇವಲ ಕಾನೂನಿಂದ, ಆಯೋಗದಿಂದ ಅಥವಾ ಸರ್ಕಾರಿಂದಲೇ ಸಾಧ್ಯವಿಲ್ಲ. ಸಾಮಾಜಿಕ ಸಮಸ್ಯೆಗಳಿಗೆ ಸಾರ್ವಜನಿಕರು ಸಹ ಕೈಜೋಡಿಸಿದಾಗ ಅದನ್ನು ತಡೆಗಟ್ಟಬಹುದು ಎಂದು ಹೇಳಿದರು.
ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

