ಚಾಮರಾಜನಗರ

ಕಣ್ಮನ ಸೆಳೆದ ಚಾಮರಾಜೇಶ್ವರ ರಥ

Published On :

ಚಾಮರಾಜನಗರ: ಇತಿಹಾಸ ಪ್ರಸಿದ್ಧ ನಗರದ ಚಾಮರಾಜೇಶ್ವರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಭಕ್ತಿ ಭಾವದ ನಡುವೆ ಅತ್ಯಂತ ವೈಭವಯುತವಾಗಿ ಶನಿವಾರ ನಡೆಯಿತು.
ರಾಜ್ಯದಲ್ಲೇ ವಿಶಿಷ್ಟವಾಗಿ ಜರುಗುವ ಚಾಮರಾಜೇಶ್ವರ ಮಹಾರಥೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಸಹಸ್ರಾರು ನವದಂಪತಿಗಳು ಸೇರಿದಂತೆ ಭಕ್ತರು ಚಾಮರಾಜೇಶ್ವರನಿಗೆ ಹಣ್ಣು ದವನಗಳನ್ನು ಎಸೆಯುವ ಮೂಲಕ ಭಕ್ತಿ ಮೆರೆದರು.  ಆಷಾಢ ಮಾಸದ ಪೂರ್ವಷಾಢ ನಕ್ಷತ್ರದ ಬುಧವಾರ  ಬೆಳಗ್ಗೆ 10.55 ರಿಂದ 11.55 ರ ಕನ್ಯಾ ಲಗ್ನದಲ್ಲಿ ವೇದ ಮಂತ್ರ, ಜೈಕಾರಗಳ ಘೋಷಣೆಗಳೊಂದಿಗೆ ರಥಕ್ಕೆ ದೇವರನ್ನು ಬಿಜಂಗೈದು ವಿಶೇಷ ಹೂವಿನ ಅಲಂಕಾರಗಳನ್ನು ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಪ್ರಥಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಶಾಸಕ ಸಿ. ಪುಟ್ಟರಂಗಶೆಟ್ಟಿ, ನಗರಸಭಾ ಅಧ್ಯಕ್ಷ ಎಸ್. ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಉಪವಿಭಾಗಾಧಿಕಾರಿ ಸತೀಶ್ ಬಾಬು, ತಹಸೀಲ್ದಾರ್ ಮಹದೇವು, ಎಎಸ್ಪಿ ವೆಂಕಟನಾಯಕ್, ಡಿವೈಎಸ್ಪಿ ಮುಪ್ಪಿನಮಠ ಅವರು ರಥದ ಬಳಿ ಬಂದು ಚಕ್ರಗಳು ಚಲಿಸುವಾಗ ಕೊಡುವ ಗೊದಮೆಗಳಿಗೆ ಪೂಜೆ ಸಲ್ಲಿಸಿದರು. ಅನಂತರ ರಥಕ್ಕೆ ಅಭಿಮುಖವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ 11.38 ಗಂಟೆಗೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಪಂಚರಥೋತ್ಸವ: ರಥಗಳನ್ನು ಮೊದಲೇ ಸಿಂಗರಿಸಿದ್ದು, ಉತ್ಸವ ಮೂರ್ತಿಗಳನ್ನು ದೇವಸ್ಥಾನದಿಂದ ಹೊರಗಡೆ ತಂದು ಮಂಗಳ ವಾದ್ಯ ಸಮೇತ ದೇವಸ್ಥಾನದ ಪ್ರದಕ್ಷಿಣೆ ಹಾಕಿ, ನಂತರ ರಥಗಳಿಗೆ ಬಿಜಂಗೈಯ್ಯಲಾಯಿತು. ದೊಡ್ಡರಥಕ್ಕೆ ಚಾಲನೆ ನೀಡಿದ ನಂತರ ಉದ್ಘೋಷಗಳನ್ನು ಕೂಗುತ್ತಾ ಮಹಾರಾಜ, ಗಣೇಶ ಚಂಡಿಕೇಶ್ವರ, ಸುಬ್ರಮ್ಹಣ್ಯೇಶ್ವರ, ಚಾಮರಾಜೇಶ್ವರ, ಕೆಂಪನಂಜಾಂಬ ರಥಗಳು ಸಾಗಿದವು.
ನವ ವಧುವರರ ಸಮಾಗಮ: ನಗರದ ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಮದುವೆಯಾದ ಹೊಸ ಜೋಡಿಗಳಿಗೆ ಸಮಾಗಮವಾಗುವ ವಾತಾವರಣ ನಿರ್ಮಿಸಿಕೊಡುತ್ತದೆ. ಆಷಾಢ ಮಾಸದಲ್ಲಿ ನವ ವಧುವರರಿಗೆ ಸಂಧಿಸುವ ಅವಕಾಶವಿರುವುದಿಲ್ಲ ಹಾಗಾಗಿ ವರ ತಮ್ಮ ಸಂಗಾತಿ ಅವರ ಸಂಬಂಧಿಕರ ಮನೆಯಲ್ಲಿರಿಸುವ ಮೂಲಕ ಜಾತ್ರೆಗೆ ಕರೆದುಕೊಂಡು ಬಂದು ರಥಕ್ಕೆ ಹಣ್ಣು ದವನ ಎಸೆದು ಪುನೀತರಾಗುತ್ತಾರೆ. ಈ ವರ್ಷವೂ ಸಹ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿ ಪರಸ್ವರ ಕೈ ಹಿಡಿದುಕೊಂಡು ಭಕ್ತಿಯಿಂದ ನಮಸ್ಕರಿಸಿದರು.
ಓಕುಳಿಯ ರಂಗಿನಾಟ: ಆಷಾಢದ ಜಾತ್ರೆಗೆ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಪ್ರಮುಖ ಆಕರ್ಷಣೆಯಾದರೆ ಮತ್ತೊಂದಡೆ ಯುವಕರು ರಥೋತ್ಸವ ಸಂದರ್ಭದಲ್ಲಿ ಪರಸ್ಪರ ಬಣ್ಣ ಎರಚಿಕೊಳ್ಳುತ್ತಾ ಸಂಭ್ರಮಿಸಿವುದು ಗಮನ ಸೆಳೆಯಿತು. ರಥದ ಮುಂಭಾಗದಲ್ಲಿ ಯುವಕರು ಕೇಕೆ ಹಾಕುತ್ತಾ ಮೆರವಣಿಗೆಯಲ್ಲಿ ಸಂಭ್ರಮಿಸಿದರು. ರಥೋತ್ಸವದಲ್ಲಿ ಸ್ಥಳೀಯ ಕಲಾ ಪ್ರಕಾರಗಳಾದ ಗೊರವರ ಕುಣಿತ, ನಂದಿಧ್ವಜ, ಕೊಂಬು ಕಹಳೆ ಮಂತಾದ ಜನಪದ ಶೈಲಿಯ ನೃತ್ಯಗಳ ಗಮನ ಸೆಳೆದವು. ರಥದ ಬೀದಿಯಿಂದ ಹೊರಟು ರಥದ  ಬೀದಿ ಮೂಲಕ ವೀರಭದ್ರೇಶ್ವರ ದೇವಸ್ಥಾನ, ಹಳೇ ಖಾಸಗಿ ಬಸ್ನಿಲ್ದಾಣ ರಸ್ತೆ ಮೂಲಕ ರಥ ಸ್ವಸ್ಥಾನಕ್ಕೆ  ಮಧ್ಯಾಹ್ನ 2.35ಕ್ಕೆ  ಬಂದು ತಲುಪಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.