ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿ ಅಗತ್ಯ
ಯಳಂದೂರು: ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಸೊಳ್ಳೆಗಳೇ ಪ್ರಮುಖ ಕಾರಣವಾಗಿದೆ. ಇದರಿಂದ ದೂರವಿರಬೇಕಾದರೆ ಇದರ ಹತೋಟಿಗೆ ಕ್ರಮ ಕೈಗೊಳ್ಳುವುದೇ ಪ್ರಮುಖ ಅಸ್ತ್ರವಾಗಿದ್ದು, ಈ ಬಗ್ಗೆ ಜಾಗೃತರಾಗುವ ಅನಿವಾರ್ಯತೆ ಇದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ್ಕುಮಾರ್ ತಿಳಿಸಿದರು.
ಗುಂಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಕರಣಗಳು ದಾಖಲಾಗಿಲ್ಲ. ಈ ರೋಗಗಳಿಗೆ ಕಾರಣವಾಗುವ ಅನಾಪಿಲಿಸ್, ಈಡಿಸ್, ಇಜಿಪ್ಟ್ ಸೊಳ್ಳೆಗಳು ಶುಚಿ ನೀರಲ್ಲೇ ಹೆಚ್ಚಾಗಿ ಬೆಳೆಯುತ್ತದೆ. ಹಾಗಾಗಿ ಮನೆಗಳ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಶೇಖರಣೆ ಮಾಡಿದ ನಂತರ ಭದ್ರವಾಗಿ ಮುಚ್ಚಳ ಮುಚ್ಚಬೇಕು. ಮಾರಕ್ಕೊಮ್ಮೆ ನೀರು ಬದಲಿಸಬೇಕು ಎಂದರು. ಯಾವುದೇ ಜ್ವರ ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷಿಸದೆ, ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಔಷಧಗಳು ಪಡೆಯಬೇಕು. ಆರೋಗ್ಯ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಿವೇಕಾನಂದ ಗಿರಿಜನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುಂಬಳ್ಳಿ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು. ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ. ನಾಗರಾಜ್, ಹಿರಿಯ ಪುರುಷ ಆರೋಗ್ಯ ಸಹಾಯಕ ರಾಜಣ್ಣ, ತಾಲೂಕು ಹಿರಿಯ ಆರೋಗ್ಯ ಸಹಾಯಕ ವಿ. ಮಂಚಯ್ಯ, ಡಾ. ಭಾ.ನಾಗರಾಜ್, ಪ್ರಾಂಶುಪಾಲ ದೊಡ್ಡಸುಬ್ಬಯ್ಯ, ಪಿ. ನಾಗೇಂದ್ರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.
ಸರ್ಕಾರಿ ಶಾಲೆಗೆ
ಪೀಠೋಪಕರಣಗಳ ಕೊಡುಗೆ
ಗುಂಡ್ಲುಪೇಟೆ: ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ತಂದೆ ಎಚ್.ಎನ್. ಶ್ರೀಕಂಠಶೆಟ್ಟರ ಸ್ಮರಣಾರ್ಥ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣಗಳನ್ನು ಎಚ್.ಎಸ್. ನಂಜುಂಡಪ್ರಸಾದ್ ಕೊಡುಗೆಯಾಗಿ ನೀಡಿದರು. ತಂದೆ ಶ್ರೀಕಂಠಶೆಟ್ಟರ ನೆನಪಿಗಾಗಿ ತಾಲೂಕಿನಾದ್ಯಂತ ಕೆಲ ಗ್ರಾಮದ ಶಾಲೆಗಳಿಗೆ ಉತ್ತಮ ದರ್ಜೆಯ ಪೀಠೋಪಕರಣ, ಪುಸ್ತಕಗಳನ್ನು ನೀಡಲಾಗುವುದು. ಈಗಾಗಲೇ ಹಾಲಹಳ್ಳಿ, ಚಿಕ್ಕಾಟಿ, ನಿಟ್ರೆ ಗ್ರಾಪಂ ವ್ಯಾಪ್ತಿಯ ಕೆಲ ಶಾಲೆಗಳಿಗೆ ನೀಡಲಾಗಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಬಾಬು, ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಮುಖಂಡರಾದ ಕೂಸಶೆಟ್ಟಿ, ಮೂರ್ತಿ, ಮಂಜುನಾಥಶೆಟ್ಟಿ, ವೆಂಕಟೇಶ ಸೇರಿದಂತೆ ಗ್ರಾಪಂ ಸದಸ್ಯರು ಹಾಜರಿದ್ದರು.
ಕಸಾಪ ಅಧ್ಯಕ್ಷರಾಗಿ ರಾಜಶೇಖರ್ ನೇಮಕ
ಗುಂಡ್ಲುಪೇಟೆ: ಕನ್ನಡ ಸಾಹಿತ್ಯ ಪರಿಷತ್ನ ತೆರಕಣಾಂಬಿ ಹೋಬಳಿಯಲ್ಲಿ ಘಟಛಕದ ಅಧ್ಯಕ್ಷರಾಗಿ ತೆರಕಣಾಂಬಿ ಗ್ರಾಮದ ಟಿ.ಎಸ್.ರಾಜಶೇಖರ್ ನೇಮಕಗೊಂಡಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಸಾಹಿತ್ಯ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಲು ಅನುಕೂಲವಾಗುವಂತೆ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಡಿಪಿ ಮಾಸಿಕ ಸಭೆ ನಾಳೆ
ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ಮಾಸಿಕ ಕೆಡಿಪಿ ಸಭೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾವೇರಿ ಅಧ್ಯಕ್ಷತೆಯಲ್ಲಿ ಜುಲೈ 9ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

