ಕೊಳವೆ ಬಾವಿ ಮುಚ್ಚಲು ಕ್ರಮ
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ, ಆ.5
ತಾಲೂಕಿನಲ್ಲಿರುವ ನಿರುಪಯುಕ್ತ ಕೊಳವೆ ಬಾವಿಗಳನ್ನು ಪತ್ತೆ ಹಚ್ಚಿ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಜಿಪಂ ಅಧಿಕಾರಿಗಳು, ತಾಪಂ ಅಧ್ಯಕ್ಷರು, ಪಂಚಾಯ್ತಿ ಸದಸ್ಯರು, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಸಹಕರಿಸಬೇಕು ಅವಘಡ ಸಂಭವಿಸುವ ಮುನ್ನ ಎಚ್ಚರವಹಿಸಬೇಕು ಎಂದು ತಾಪಂ ಅಧ್ಯಕ್ಷ ಮುರುಡೇಶ್ವರಸ್ವಾಮಿ ಮನವಿ ಮಾಡಿದರು.
ಇಲ್ಲಿನ ತಾಲೂಕು ಪಂಚಾಯ್ತಿ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ತಾಪಂ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧಿಕಾರಿಗಳು ತಕ್ಷಣ ಜಾಗೃತರಾಗಿ ನಿರುಪಯುಕ್ತ ಕೊಳವೆ ಬಾವಿಗಳ ಪಟ್ಟಿ ಮಾಡಿ ಮುಚ್ಚಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಸೂಚಿಸಿದರು.
9 ಕೊಳವೆ ಬಾವಿ ಮುಚ್ಚಿಸಲಾಗಿದೆ: ಸಭೆಗೆ ಮಾಹಿತಿ ನೀಡಿದ ಕೆಲವು ಗ್ರಾಪಂ ಪಿಡಿಒಗಳು ಈಗಾಗಲೇ ತಾಲೂಕಿನ ಹಲವೆಡೆ ಒಟ್ಟು 9 ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಗೆ ಮಾಹಿತಿ ನೀಡಿದ ಜಿಪಂ ಕಾರ್ಯಪಾಲಕ ಅಭಿಯಂತರ ನಿಂಗಶೆಟ್ಟಿ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ವತಿಯಿಂದ ತೆಗೆಸಲಾಗಿರುವ ಕೊಳವೆ ಬಾವಿಗಳ ಬಗ್ಗೆ ಈಗಾಗಲೇ ಸಂಬಂಧಪಟ್ಟ ಬೋರ್ವೆಲ್ ಕಂಪನಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದ್ದು, ಮಾಹಿತಿ ಬಂದ ತಕ್ಷಣ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು: ತಾಲೂಕಿನಾದ್ಯಂತ ನಿರುಪಯುಕ್ತ ಓವರ್ಹೆಡ್ ಟ್ಯಾಂಕ್, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ನೆಲಸಮ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಅವಶ್ಯಕತೆ ಇರುವೆಡೆ ಸಾಮೂಹಿಕ ಶೌಚಾಲಯ ನಿರ್ಮಾಣ ಹಾಗೂ ಉದ್ಯೋಗ ಖಾತ್ರಿಯಲ್ಲಿ ದೂರು ಬರದಂತೆ ಜಾಗೃತರಾಗಿ ಕರ್ತವ್ಯ ನಿರ್ವಹಿಸಲು ಸಭೆಯಲ್ಲಿ ಸೂಚಿಸಲಾಯಿತು.
ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಅಧಿಕಾರಿಗಳು ಆದ್ಯತೆ ಹಾಗೂ ಬೇಡಿಕೆ ಮೇರೆಗೆ ಕ್ರಮ ಕೈಗೊಳ್ಳುವಂತೆಯೂ ಹಾಗೂ ತಾಲೂಕಿನಾದ್ಯಂತ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಪ್ರತಿ ಪಂಚಾಯ್ತಿಯಲ್ಲಿ ಆ.11ರಿಂದ ಜಾಥಾ ನಡೆಸಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ತಾಪಂ ಉಪಾಧ್ಯಕ್ಷೆ ಉಮಾ ಲಿಂಗರಾಜು ತಾಪಂ ಸದಸ್ಯರಾದ ಲೊಕ್ಕನಹಳ್ಳಿ ರವಿಕುಮಾರ್, ಕೌದಳ್ಳಿ ಅನಿಲಕುಮಾರ್, ಬಸವರಾಜು, ನಂಜೇಗೌಡ, ಗ್ರಾಪಂ ಅಧ್ಯಕ್ಷ ಮಹದೇವಪ್ರಸಾದ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

