ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ
ಚಾಮರಾಜನಗರ: ನಗರಸಭಾ ವ್ಯಾಪ್ತಿಯ ಕರಿನಂಜನಪುರ ಹೊಸ ಬಡಾವಣೆ 10ನೇ ವಾರ್ಡಿನಲ್ಲಿ ಅಂಬೇಡ್ಕರ್ ಸಮುದಾಯ ಭವನ ಮುಂದುವರೆದ ಕಾಮಗಾರಿಗೆ ನಗರಸಭೆ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಹಾಗೂ ನಗರಸಭೆ ಸದಸ್ಯ ಕೇಶವಮೂರ್ತಿ ಚಾಲನೆ ನೀಡಿದರು. ಬಳಿಕ ನಂಜುಂಡಸ್ವಾಮಿ ಮಾತನಾಡಿ, ನಗರಸಭೆ ಶೇ.22.75ರ ಅನುದಾನದಲ್ಲಿ ಅಂಬೇಡ್ಕರ್ ಸಮುದಾಯ ಭವನ ಮುಂದುವರೆದ ಕಾಮಗಾರಿಗೆ 2 ಲಕ್ಷ ರು. ಮಂಜೂರು ಮಾಡಲಾಗಿದೆ. ಅನುಕೂಲಕರ ಸಮುದಾಯ ಭವನವನ್ನು ಸುಂದರವಾಗಿ ಕಟ್ಟಿಸಿಕೊಳ್ಳಬೇಕು ಎಂದರು.ಪೌರಾಯುಕ್ತ ವಿಜಯ್, ನಗರಸಭಾ ಸದಸ್ಯರಾದ ಕೇಶವಮೂರ್ತಿ, ಮಹೇಶ್, ಮಹದೇವಯ್ಯ, ಎಇಇ ಜಯಣ್ಣ, ಜೆಇ ನಾಗೇಂದ್ರ, ಮುಖಂಡರಾದ ಸಿದ್ದಪ್ಪ, ಸಿದ್ದಯ್ಯ, ಶಿವಮೂರ್ತಿ, ಗುರುಸಿದ್ದಯ್ಯ, ಶಿವಕುಮಾರ್, ಗುತ್ತಿಗೆದಾರ ಚೆನ್ನಪ್ಪ ಇತರರು ಇದ್ದರು.
ಉದ್ಯೋಗ ಖಾತ್ರಿ ಅಕ್ರಮ ಅಜ್ಜಿಪುರ ಗ್ರಾಪಂ ಮುತ್ತಿಗೆ
ಕೊಳ್ಳೇಗಾಲ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಲೂಟಿ ಮಾಡಿ ವ್ಯಾಪಕ ಭ್ರಷ್ಟಾಚಾರ ಮಾಡಿರುವ ಖದೀಮರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಅಜ್ಜಿಪುರ ಗ್ರಾಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಜರುಗಿದೆ.ಬೆಳಗ್ಗೆ 9ಗಂಟೆಗೆ ಪಂಚಾಯ್ತಿ ಎದುರು ಆಗಮಿಸಿದ ಅಜ್ಜಿಪುರ ಪಂಚಾಯ್ತಿ ವ್ಯಾಪ್ತಿ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆ ಬಡವರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿದೆ, ಆದರೆ ಇಲ್ಲಿನ ಕೆಲವು ಪಂಚಾಯ್ತಿ ಸದಸ್ಯರೇ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಲ್ಲಿನ ಪಿಡಿಒ ರಾಮು ಭ್ರಷ್ಟಾಚಾರ ನಡೆಸಿದ್ದಾರೆ. ಆಗಿದ್ದರೂ ಜಿಪಂ ಅಧಿಕಾರಿಗಳು ತೆಪ್ಪಗಿದ್ದಾರೆ, ಅವ್ಯವಹಾರದಲ್ಲಿ ಭಾಗಿಯಾಗಿರುವ ಗ್ರಾಪಂ ಸದಸ್ಯರನ್ನು ಸ್ಥಳಕ್ಕೆ ಕರೆಸಿ ಎಂದು ಆಗ್ರಹಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಈಗಾಗಲೇ ಇಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವಿಚಾರ ತಿಳಿದಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ರಾಜಕೀಯ ಮಾಡಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ, ಜಿಪಂ ಸಿಇಒ ವಿಚಾರ ತಿಳಿದಿದ್ದರೂ ಸುಮ್ಮನಿದ್ದಾರೆ. ತಕ್ಷಣ ಪೊಲೀಸ್ ಇಲಾಖೆ ಅವರನ್ನು ಸ್ಥಳಕ್ಕೆ ಕರೆಸಬೇಕು, ಅವರು ಸ್ಥಳಕ್ಕೆ ಬರುವವರೆವಿಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮಾಪುರ ವೃತ್ತ ನಿರೀಕ್ಷಕ ರಾಜಣ್ಣ ಪ್ರತಿಭಟನಾಕಾರರನ್ನು ಮನವೊಲಿಸಿ ನಾಳೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರೂ ಪ್ರತಿಭಟನಾಕಾರರು ಸ್ಥಳ ಬಿಟ್ಟು ಕದಲಲಿಲ್ಲ.
ತಪ್ಪೊಪ್ಪಿಕೊಂಡ ತಾಪಂ ಅಧ್ಯಕ್ಷ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಅಧ್ಯಕ್ಷ ಮುರಳಿ ಪಂಚಾಯ್ತಿಯಲ್ಲಿ 2008ರಿಂದಲೂ ಅಕ್ರಮವಾಗಿದೆ. ಅಧಿಕಾರಿಗಳಿಂದಲೂ ಕೆಲವು ತಪ್ಪುಗಳಾಗಿವೆ ಎಂದು ಒಪ್ಪಿಕೊಂಡರು.ಪ್ರತಿಭಟನಾಕಾರರು ದಯವಿಟ್ಟು ಪ್ರತಿಭಟನೆ ಹಿಂಪಡೆಯಬೇಕು. ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ ಎಂಬ ಭರವಸೆ ನೀಡಿದರು. ಅಲ್ಲದೆ, ಕೆಲಕಾಲ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ. ಸ್ಥಳಕ್ಕೆ ತಾಪಂ ಇಒ ರಂಗಸ್ವಾಮಿ ಭೇಟಿ ನೀಡಿ, 10 ದಿನಗಳ ಕಾಲಾವಕಾಶ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಾಗಿ ಭರವಸೆ ನೀಡಿದರಲ್ಲದೆ, ಕೆಲವು ದಾಖಲಾತಿ ವಶಕ್ಕೆ ಪಡೆದು ಕೊಂಡ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಈರಸೇಗೌಡ,ರಾಜಪ್ಪ,ಕೃಷ್ಣಪ್ಪ, ಮುತ್ತಪ್ಪ, ಕೃಷ್ಣೇಗೌಡ,ಕಲಂದರ ಪಾಷ,ಅಸ್ಲಾಂ, ಅನ್ವರ್, ಸಲೀಂ, ಶಾಕೀರ್, ಕಲೀಂಪಾಷ, ಅಮ್ಜದ್, ಅಲ್ಲಾಭಕ್ಷು, ಜಮೀರ್, ಅಸ್ರುಲ್ಲಾಖಾನ್, ಅಯೂಬ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಎಂಇಎಸ್ ಪುಂಡಾಟಕ್ಕೆ ಖಂಡನೆ
ಯಳಂದೂರು: ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡ ಬಾವುಟ ಸುಟ್ಟಿರುವುದನ್ನು ಖಂಡಿಸಿ ಯಳಂದೂರಿನಲ್ಲಿ ಕನ್ನಡ ಪ್ರಗತಿ ಪರ ಸಂಘಟನೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಪಟ್ಟಣದ ನಾಡಮೇಗಲಮ್ಮ ದೇವಾಲಯದ ಅವರಣದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಸಮಾವೇಶಗೊಂಡು, ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆ ತೆರಳಿ ಎಂಇಎಸ್ಕಾರ್ಯಕರ್ತರ ದಾಂಧಲೆ ಖಂಡಿಸಿ, ಧಿಕ್ಕಾರ ಘೋಷಣೆ ಕೂಗಿ ಗಾಂಧಿ ಸರ್ಕಲಲ್ಬಳಿ ಸಮಾವೇಶಗೂಂಡು ಎಂಇಎಸ್ ಶಾಸಕರು ಮತ್ತು ಕಾರ್ಯಕರ್ತರ ಪ್ರತಿಕೃತಿ ದಹನ ಮಾಡಿ ಅಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಚಂದ್ರಮೌಳ್ಳಿ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿ, ಕನ್ನಡಾಂಬೆ ಬಾವುಟ ಸುಟ್ಟು ಮೆರವಣಿಗೆ ಮಾಡಿರುವುದು ರಾಜ್ಯಕ್ಕೆ ಅಪಮಾನವಾಗಿದೆ. ಇಂತಹ ನೀಚ ಕೃತ್ಯಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ತಕ್ಷಣ ರಾಜ್ಯ ಸರ್ಕಾರ ಇಂತಹ ಕೃತ್ಯವನ್ನು ನಿಯಂತ್ರಿಸಲು ಸೂಕ್ತ ಕಾನೂನು ಕ್ರಮ ಕೈಗೂಳ್ಳಬೇಕೆಂದು ಒತ್ತಾಯಿಸಿದರು. ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.ದಿನಗೂಲಿ ನೌಕರ ಸಂಘದ ಅಧ್ಯಕ್ಷ ಪ್ರಕಾಶ್, ಬಿ.ರಂ. ಬೆಟ್ಟದ ಮಾಜಿ ಧರ್ಮದರ್ಶಿ ದೂರೆಸ್ವಾಮಿ, ವೈ.ಕೆ.ಮೋಳೆ ಶಿವಣ್ಣ, ಭಗಿರಥ ಯುವಕ ಸಂಘದ ಅಧ್ಯಕ್ಷ ವೈ.ಕೆ.ರಾಜು, ಯರಿಯೂರು ದೊಡ್ಡರಾಜು, ಮಹೇಶ್, ಕರವೇ ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮಿ ಚಂದ್ರಮೌಳ್ಳಿ, ಗಣೇಶ್
ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಡಾ.ಪಿ.ಕೆ.ರಾಜಶೇಖರ್ಗೆ ಜನಪದರತ್ನ ಪ್ರಶಸ್ತಿ
ಮೈಸೂರು: ಹೆಸರಾಂತ ವಿದ್ವಾಂಸ ಡಾ. ಪಿ.ಕೆ. ರಾಜಶೇಖರ್ ಅವರಿಗೆ ಜನಪದ ರತ್ನ ಪ್ರಶಸ್ತಿ ನೀಡ ಶನಿವಾರ ಗೌರವಿಸಲಾಯಿತು. ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿಯು ಗೋಕುಲಂನ ಆಳ್ವಾರ್ ಕಲಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎನ್. ಹೇಮಲತಾ ಸ್ಮಾರಕ ಪುರಸ್ಕಾರವನ್ನು ಶಾಸಕ ವಾಸು ಪ್ರದಾನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಜನಪದ ವಿದ್ವಾಂಸ ಡಾ.ರಾಜಶೇಖರ್ ಅವರ ಅನೇಕ ಕೃತಿಗಳು ಜನಪ್ರಿಯವಾಗಿದ್ದು, ನಾನು ಸಹ ಅವರ ಕೃತಿಗಳನ್ನು ಓದಿದ್ದೇನೆ ಎಂದು ಹೇಳಿ, ಅವರ ಕೃತಿಯೊಂದರ ಕೆಲವು ಕವಿತೆಗಳ ಸಾಲನ್ನು ವಾಚಿಸಿದರು. ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರವು ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಈ ಸಂಬಂಧ ಮಹಿಳೆಯರಿಗೆ ಸಾಂತ್ವನ ನೀಡಿ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು. ಹಿರಿಯ ಸಾಹಿತಿ ಪ್ರೊ.ದೇಜಗೌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಸಿಪಿಕೆ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಎಸ್.ಶ್ರೀಧರರಾಜೇ ಅರಸ್, ಮೈಸೂರು ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಕೆ.ಉಮಾಶಂಕರ್ ಹಾಗೂ ಕೃಷಿ ವಿಜ್ಞಾನಿ ಡಾ.ವಸಂತ ಕುಮಾರ್ ತಿಮಕಾಪುರ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ವಿಜೇತರನ್ನು ಕುರಿತು ದಾಸ್ತಿಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳಾಡಿದರು. ಅಕಾಡೆಮಿ ಅಧ್ಯಕ್ಷ ವಿಜಯ್ ವೆಂಕಟೇಶ್ ಇದ್ದರು. ಪ್ರೊ.ಕೆರೋಡಿ ಎಂ.ಲೋಲಾಕ್ಷಿ ಸ್ವಾಗತಿಸಿದರು. ಸುಮ ರಾಜಕುಮಾರ್ ನಿರೂಪಿಸಿದರು. ಶ್ರೀರಂಗಪಟ್ಟಣದ ಮಹಾದೇವು ತಂಡದವರು ಜನಪದಗೀತೆ ಗಾಯನ ನಡೆಸಿಕೊಟ್ಟರು.
ಕ್ರೀಡಾಕೂಟದಲ್ಲಿ ಕುಸಿದು ಬಿದ್ದ ತಾಪಂ ಅಧ್ಯಕ್ಷ
ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಮಹದೇಶ್ವರ ಕಾಲೇಜಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಪಂ ಅಧ್ಯಕ್ಷ ಮುರಳಿ ಅವರು ದಿಢೀರ್ ಕುಸಿದು ಬಿದ್ದ ಘಟನೆ ಜರುಗಿತು. ತಾಪಂ ಅಧ್ಯಕ್ಷರು ಕುಸಿದು ಬೀಳುತ್ತಿದ್ದಂತೆ ಅಂಬೇಡ್ಕರ್ ಸಂಘದ ಅಧ್ಯಕ್ಷ ನಟರಾಜು ಹಾಗೂ ಹೈಹಿಕ ಶಿಕ್ಷಕರು ಅವರನ್ನು ಬಿಗಿಯಾಗಿ ಅಪ್ಪಿಕೊಂಡು ಸಂತೈಸಿದರು. ತಕ್ಷಣ ಪಕ್ಕದಲ್ಲೆ ಇದ್ದ ಬಿಇಒ ಮಹದೇವಮ್ಮ, ದೈಹಿಕ ಪರಿವೀಕ್ಷಕ ಜಾರ್ಜ್ ಪಿಲೀಪ್ ಮತ್ತಿತರರು ಆಗಮಿಸಿ ತಾಪಂ ಅಧ್ಯಕ್ಷರನ್ನು ಸಂತೈಸಿ ಅವರು ಸಾವರಿಸಿಕೊಂಡ ಬಳಿಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅನಾರೋಗ್ಯವಿದ್ದ ಕಾರಣ ನಿತ್ರಾಣಗೊಂಡಿದ್ದೆ ಈ ಹಿನ್ನೆಲೆಯಲ್ಲಿ ಕುಸಿದು ಬೀಳಬೇಕಾಯಿತು ಎಂದು ಮುರಳಿ ತಿಳಿಸಿದರು.
ನಾಳೆ ಚದುರಂಗ ಟೂರ್ನಿ
ಮೈಸೂರು: ಮೈಸೂರು ಜಿಲ್ಲಾ ಚದುರಂಗ ಸಂಸ್ಥೆಯು ಆ.4ರ ಸಂಜೆ 6ಕ್ಕೆ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪಿಯು ಕಾಲೇಜಿನಲ್ಲಿ ಮುಕ್ತ ಚದುರಂಗ ಟೂರ್ನಿ ಏರ್ಪಡಿಸಿದ್ದು, ಆಸಕ್ತರು ಮೊ. 98805 47121 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

