ಅರಮನೆಗೆ ಗಜಪಡೆ 16ಕ್ಕೆ ಆಗಮನ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆ ಅಂಗವಾಗಿ ಗಜಪಯಣಕ್ಕೆ ಆ.14 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗುವುದು ಎಂದು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆ.16ರ ಬೆಳಗ್ಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ಗಜಪಯಣಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸಹಕಾರ ನೀಡುತ್ತಿದೆ ಎಂದರು.
ಆ.14 ರಂದು ಪ್ರಯಾಣ ಬೆಳೆಸುವ ಗಜಪಡೆಯ ಮೊದಲ ತಂಡದಲ್ಲಿ ಸತತ ಎರಡನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಕ್ಯಾಪ್ಟನ್ ಅರ್ಜುನ, ಹಿಂದಿನ ಕ್ಯಾಪ್ಟನ್ ಬಲರಾಮ, ಅಭಿಮನ್ಯು, ಸರಳ, ಮೇರಿ, ಗಜೇಂದ್ರ ಆನೆಗಳಿರಲಿವೆ. ಎರಡನೇ ತಂಡದಲ್ಲಿ ವಿಕ್ರಮ, ಹರ್ಷ, ವರಲಕ್ಷ್ಮೀ, ಗೋಪಾಲಸ್ವಾಮಿ, ಶ್ರೀರಾಮ ಆನೆಗಳ ಜತೆಗೆ ಈ ಬಾರಿ ಮತ್ತೆರಡು ಹೊಸ ಆನೆಗಳಾದ ಗೋಪಿ, ಪ್ರಶಾಂತ ಆಗಮಿಸಲಿವೆ ಎಂದು ತಿಳಿಸಿದರು.
ಸಾಂಪ್ರದಾಯಿಕವಾಗಿ ಆಹ್ವಾನ: ದಸರಾ ಮಹೋತ್ಸವವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರಿಂದ ಉದ್ಘಾಟಿಸಲು ಸರ್ಕಾರ ತೀರ್ಮಾನಿಸಿದೆ. ಸದ್ಯದಲ್ಲಿಯೇ ಕಾರ್ನಾಡ್, ರಾಜ್ಯಪಾಲರಾದ ಕೆ.ರೋಸಯ್ಯ, ರಾಜಮನೆತನದ ಪ್ರಮೋದಾದೇವಿ ಒಡೆಯರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು. ಈ ಬಾರಿ ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನು ಬಹುತೇಕ ಮೈಸೂರು ದಸರಾದ ಭಾಗವನ್ನಾಗಿ ಮಾಡಿಕೊಂಡು ಅದ್ಧೂರಿಯಾಗಿ ಆಚರಿಸಲಾಗುವುದು.
ಗಿರೀಶ್ ಕಾರ್ನಾಡರು ನಾಸ್ತಿಕರು ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿರೋಧಿಸುವುದು ಅವರ ಹಕ್ಕು. ಆದರೆ, ತಾವು ನಾಸ್ತಿಕರು ಎಂಬುದನ್ನು ಹೇಳಬೇಕಾದದ್ದು ಕಾರ್ನಾಡರು. ನಾಸ್ತಿಕರಾಗಿದ್ದರೆ ಅವರ್ಯಾಕೆ ಒಪ್ಪಿಕೊಳ್ಳುತ್ತಿದ್ದರು. ಈ ಹಿಂದೆ ಎಚ್. ನರಸಿಂಹಯ್ಯ, ಬರಗೂರು ರಾಮಚಂದ್ರಪ್ಪ ಅವರಿಂದ ದಸರಾ ಉದ್ಘಾಟಿಸಲಿಲ್ಲವೆ? ಕೆಲವರು ಗಿರೀಶ್ ಕಾರ್ನಾಡರನ್ನು ಕಾಂಗ್ರೆಸ್ ಪರ ಎನ್ನುತ್ತಿದ್ದಾರೆ. ಹಾಗಾದರೆ ಭೈರಪ್ಪ ಅವರು ಓಪನ್ ಆಗಿ ಬಿಜೆಪಿ ಪರ ಮಾತಾಡಲಿಲ್ವ. ಹಾಗಂತ ಅವರನ್ನು ಬಿಜೆಪಿಯವರು ಎನ್ನಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ, ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್, ಶಾಸಕರಾದ ಎಂ.ಕೆ. ಸೋಮಶೇಖರ್, ತನ್ವೀರ್ ಸೇಠ್, ವಾಸು, ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಇದ್ದರು.
ದಸರಾ ಕಾಮಗಾರಿ ಶೀಘ್ರ ಆರಂಭ
ದಸರಾ ಮಹೋತ್ಸವವನ್ನು ಕಳೆದ ವರ್ಷಕ್ಕಿಂತ ಮತ್ತಷ್ಟು ವೈಭಯುತವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ನಗರಪಾಲಿಕೆ ಹಾಗೂ ದಸರಾ ಮಹೋತ್ಸವ ಆಚರಣೆಗೆ ಬಿಡುಗಡೆಯಾಗುವ ಹಣದಿಂದ ಶೀಘ್ರದಲ್ಲಿಯೇ ದಸರಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ 12 ಕೋಟಿ ನೀಡುವುದಾಗಿ ಘೋಷಿಸಿದ್ದು, ಈಗ 6.75 ಕೋಟಿ ಬಿಡುಗಡೆಯಾಗಿದೆ ಎಂದರು.
ಪ್ರತಿ ವರ್ಷ ಕರ್ಜನ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ಈ ಬಾರಿ ಕುಪ್ಪಣ್ಣ ಪಾರ್ಕ್ನಲ್ಲಿ ನಡೆಸಲಾಗುವುದು. ಆಹಾರ ಮೇಳ ಉತ್ತಮವಾಗಿ ನಡೆಯುತ್ತಿದ್ದು, ಅಗತ್ಯಬಿದ್ದರೆ ಅದರ ಸ್ಥಳವೂ ಬದಲಾಗಲಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯವು ಧ್ವನಿ ಮತ್ತು ಬೆಳಕು ನಡೆಸುವಂತೆ ಪ್ರಸ್ತಾವನೆ ಕಳುಹಿಸಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಏರ್ ಶೋ ನಡೆಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

