ಚಾಮರಾಜನಗರ

ಫೆ.15 ರಿಂದ ಖಾತೆಗೆ ಸಬ್ಸಿಡಿ ಪಾವತಿ

Published On :

ಮೈಸೂರು: ಗೃಹ ಬಳಕೆ ಎಲ್‌ಪಿಜಿ ಗ್ರಾಹಕರಿಗೆ ನೇರ ಸಹಾಯ ಧನ ವಿತರಿಸುವ ಯೋಜನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ಫೆ.15 ರಿಂದ ಜಾರಿಗೆ ತರಲಾಗುವುದು ಎಂದು ಕೇಂದ್ರ ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಹೇಳಿದರು.
 ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಿಲಿಂಡರ್ ಮೇಲೆ ನೀಡುವ ಸಹಾಯಧನವನ್ನು ನೇರವಾಗಿ ಬಳಕೆದಾರರ ಖಾತೆಗೆ ವರ್ಗಾಯಿಸಲು ಮುಂದಾಗಿದೆ. ಗೃಹಬಳಕೆ ಎಲ್‌ಪಿಜಿ ಸಬ್ಸಿಡಿ ಹಣವನ್ನು ಆಧಾರ್ ಸಂಖ್ಯೆ ಮೂಲಕ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಮೈಸೂರು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಫೆ.15ರ ನಂತರ ಗೃಹ ಬಳಕೆ ಸಿಲಿಂಡರ್ ಖರೀದಿಸುವವರು 901 ಅನ್ನು ಕಡ್ಡಾಯವಾಗಿ ಪಾವತಿಸಬೇಕು. ನಂತರ ಸಬ್ಸಿಡಿ ಹಣವನ್ನು ನೇರವಾಗಿ ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ವರ್ಷಕ್ಕೆ 9 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲಿದ್ದು, ಅದಕ್ಕಿಂತ ಹೆಚ್ಚಾಗಿ ಕೊಳ್ಳುವವರು ಪೂರ್ಣ 901 ಪಾವತಿಸಬೇಕೆಂದರು. ಈ ಯೋಜನೆಯ ಪ್ರಾಯೋಗಿಕ ಜಾರಿಗೆ ದೇಶದ 51 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ರಾಜ್ಯದ ಮೈಸೂರು, ತುಮಕೂರು, ಧಾರವಾಡ ಜಿಲ್ಲೆಗಳು ಸೇರಿವೆ. ಈ ಸೌಲಭ್ಯ ಪಡೆಯಲು ಜಿಲ್ಲೆಯ ಒಟ್ಟು 40 ಸಾವಿರ ಮಂದಿ ಆಧಾರ್ ಮತ್ತು ಬ್ಯಾಂಕ್ ಖಾತೆ ಎರಡನ್ನೂ ನೋಂದಾಯಿಸಿಕೊಂಡಿದ್ದಾರೆ. ಎರಡನೇ ಹಂತದ ಆಧಾರ್ ನೋಂದಣಿಗೆ ಚಾಲನೆ ನೀಡಲಾಗಿದೆ. ಗ್ರಾಮಾಂತರದಲ್ಲಿ 12 ಹಾಗೂ ನಗರದಲ್ಲಿ 13 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ 6,82,422 ಮಂದಿ ಖಾತೆ ಹೊಂದಿದ್ದು, 1,38,901 ಮಂದಿ ಆಧಾರ್ ಕಾರ್ಡ್ ಪಡೆದಿದ್ದಾರೆ. 5.2 ಲಕ್ಷ ಎಲ್‌ಪಿಜಿ ಬಳಕೆದಾರರಿದ್ದಾರೆ. 34 ವಿತರಕ ಕಂಪನಿಗಳಿವೆ. ಈ ನೂತನ ಯೋಜನೆಯಿಂದ 50 ಲಕ್ಷ ನಕಲಿ ಸಂಪರ್ಕಗಳು ಪತ್ತೆಯಾದ ಪರಿಣಾಮ ಗೃಹ ಬಳಕೆದಾರರ ಸಂಖ್ಯೆ ಕಡಿಮೆಯಾಗಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದರು.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಕೆ. ಅರೋರಾ, ಯೂನಿಕ್ ಕಾರ್ಡ್ ಪ್ರಾಧಿಕಾರದ ಪ್ರಧಾನ ನಿರ್ದೇಶಕ ಸಿರಿಶ್ ಚೌಧರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಬಿ. ಚಿನ್ನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್ ಇದ್ದರು.

ಗ್ರಾಹಕರೇನು ಮಾಡಬೇಕು?
ಗೃಹಬಳಕೆ ಅಡುಗೆ ಅನಿಲ ಬಳಕೆದಾರರು ಆಧಾರ್ ಕಾರ್ಡ್ ಸಂಖ್ಯೆಯನ್ನು ಸಿಲಿಂಡರ್ ವಿತರಕರಿಗೆ ನೀಡಬೇಕು. ಹಾಗೆ ತಮ್ಮ ಖಾತೆ ಇರುವ ಬ್ಯಾಂಕ್‌ಗೆ ತೆರಳಿ ಆಧಾರ್ ಕಾರ್ಡ್ ಸಂಖ್ಯೆ ನೀಡಬೇಕು. ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಹೊಂದಿಲ್ಲದಿರುವ ಬಳಕೆದಾರರು ಕೂಡಲೇ ಆಧಾರ್‌ಗೆ ನೋಂದಾಯಿಸಿಕೊಂಡರೆ ಒಂದು ವಾರದೊಳಗೆ ಕಾರ್ಡ್ ದೊರಕಲಿದೆ. ಬ್ಯಾಂಕ್ ಖಾತೆಯನ್ನು ಶೂನ್ಯ ಠೇವಣಿಯಲ್ಲಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಮಿತ್ತಲ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.