ಮತದಾನ ಎಲ್ಲರ ಜವಾಬ್ದಾರಿ: ಸಾವರ್ಡಕರ್
ಚಾಮರಾಜನಗರ: ಅಧಿಕಾರ ದಾಹದಿಂದಾಗಿ ಹಣ ಕೊಳ್ಳೆ ಹೊಡೆಯುವ ಜನಪ್ರತಿನಿಧಿಗಳೇ ಇಂದು ನಡೆಯುವ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದು, ನಿರುತ್ಸಾಹ ಬಿಟ್ಟು ಮತದಾನ ಮಾಡುವುದು ಎಲ್ಲರ ಜವಾಬ್ದಾರಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಜಿ.ಸಾವರ್ಡಕರ್ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿ, ಹಿಂದೆ ರಾಜ ಮಹಾರಾಜರು, ಬೇರೆ ದೇಶಗಳಿಂದ ಬಂದವರು ಹಣ ಕೊಳ್ಳೆ ಹೊಡೆಯುತ್ತ ದೇಶವನ್ನು ಗುಲಾಮಗಿರಿಗೆ ತಳ್ಳಿದ್ದರು. ಅದು ಈಗಲೂ ನಡೆಯುತ್ತಿದ್ದು, ಹಣ ಖರ್ಚು ಮಾಡಿ ಅಧಿಕಾರಕ್ಕೆ ಬರುವವನು ಎಂದಿಗೂ ಜನಪರ ಕಾರ್ಯಕ್ಕೆ ಮನಸು ಕೊಡುವುದಿಲ್ಲ. ಬದಲಾಗಿ ಆತ ಹಣ ಸಂಪಾದನೆಗೆ ಮುಂದಾಗುತ್ತಾನೆ. ಈ ಅವ್ಯವಸ್ಥೆಗೆ ನಮ್ಮ ಜನರಲ್ಲಿ ಇನ್ನೂ ಮತದಾನ ಮಾಡುವುದರ ಬಗ್ಗೆ ಅರಿವಿಲ್ಲದಿರುವುದೇ ಕಾರಣ. ಹೀಗಾಗಿ ಮತದಾನದ ಬಗ್ಗೆ ಮನೆ ಮನೆಗೂ ತೆರಳಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ತಿದ್ದುಪಡಿ ಮಾಡಬೇಕು: ಯಾವುದೇ ಚುನಾವಣೆಯಲ್ಲಾಗಲೀ, ಶೇ.50, 60ರಷ್ಟು ಮತದಾನವಾಗುತ್ತದೆ. ಕಳೆದ 60 ವರ್ಷಗಳ ಅವಧಿಯಲ್ಲಿ ಶೇ.100 ಮತದಾನವಾದ ಬಗ್ಗೆ ಉಲ್ಲೇಖವಿಲ್ಲ. ಇದರಿಂದ ಅಧಿಕಾರ ಹಿಡಿಯಲು ಅತಂತ್ರ ಪರಿಸ್ಥಿತಿ ಎದುರಾಗುತ್ತದೆ. ಆ ಹಿನ್ನೆಲೆಯಲ್ಲಿ ಬಹುಮತ ಪಡೆಯುವ ಪಕ್ಷ ಮಾತ್ರ ಅಧಿಕಾರದ ಗದ್ದುಗೆಗೆ ಏರಬೇಕು ಎಂಬ ಕಾನೂನಿಗೆ ತಿದ್ದುಪಡಿ ಅಗತ್ಯವಿದೆ ಎಂದರು.
ನಾಡ ಕಟ್ಟುವವರನ್ನು ಆರಿಸಿ: ಮೈಸೂರು ಜೆಎಸ್ಎಸ್ ಕಾನೂನು ಕಾಲೇಜು ಪ್ರಾದ್ಯಾಪಕ ವೇಣುಗೋಪಾಲ್ ಮಾತನಾಡಿ, ಹಲವಾರು ಮಂದಿಯ ತ್ಯಾಗ ಬಲಿದಾನದಿಂದ ಮತದಾನದ ಹಕ್ಕು ನಮಗೆ ದೊರಕಿದೆ. ಕಟ್ಟುವೆವು ಹೊಸ ನಾಡೊಂದನ್ನು ಎಂಬ ಕವಿವಾಣಿಯ ಹಾಗೆ ಹೊಸ ಸಮಾಜವನ್ನು ನಿರ್ಮಿಸಿ, ಜನತೆಗೆ ನಾಯಕತ್ವದ ಉಡುಗೊರೆ ಕೊಡುವವನೇ ನಿಜವಾದ ನಾಯಕ. ಅಂಥ ನಾಯಕನ ಆಯ್ಕೆ ನಿಮ್ಮ ಮೇಲಿದ್ದು, ಮತದಾನ ಮಾಡುವವರು ಹೋರಾಟದ ಕುರುಹುಗಳನ್ನು ಅರಿಯುವ ಮೂಲಕ ಸಿಂಹಾಲೋಕನ ಮಾಡಬೇಕು ಎಂದರು.
ನಮ್ಮ ರಾಷ್ಟ್ರವು ಇಂದಿಗೂ ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆ ಹೊಂದಿದೆ. ಇಂಥ ಪುಣ್ಯದ ನಾಡಿನಲ್ಲಿ ಜನಿಸಿರುವ ಯೋಗ್ಯರನ್ನು ಆರಿಸುವತ್ತ ಹರಿತ ಆಯುಧವಾಗಿ ಮತದಾನವನ್ನು ಬಳಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನಲ್ಲಿ ಸೇರ್ಪಡೆಯಾದ ಯುವ ಮತದಾರರಿಗೆ ಜಿಲ್ಲಾಧಿಕಾರಿ ಎನ್.ಜಯರಾಂ ಗುರುತಿನ ಕಾರ್ಡ್ ವಿತರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಸ್ವಾಗತಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿಪಂ ಸಿಇಒ ಎಂ.ಆರ್. ಸೋಮಶೇಖರಪ್ಪ, ತಾಪಂ ಅಧ್ಯಕ್ಷ ಬಸವಣ್ಣ, ಪೌರಾಯುಕ್ತ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

