ನಾಳೆ ಮಾದೇಶ್ವರ ಸಾಂಸ್ಕೃತಿಕ ಉತ್ಸವ
ಚಾಮರಾಜನಗರ: ಕರ್ನಾಟಕ ಜಾನಪದ ಪರಿಷತ್, ಮಲೆಮಹದೇಶ್ವರ ಬೆಟ್ಟದ ದೇವಸ್ಥಾನದ ಆಡಳಿತದ ಸಹಯೋಗದೊಂದಿಗೆ ಜ.25ರಂದು ಮಲೆಮಾದೇಶ್ವರ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುಂಡ್ಲುಪೇಟೆ ಶಾಸಕ ಮಹದೇವಪ್ರಸಾದ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸುವರು. ಅಂದು ಬೆಳಗ್ಗೆ 9 ಗಂಟೆಗೆ ಉತ್ಸವ ಆರಂಭವಾಗಲಿದೆ. ಯುವಜನರಿಗಾಗಿ ರಾಜ್ಯ ಮಟ್ಟದ ಮಲೆಮಹದೇಶ್ವರ ಬಿಡಿ ಹಾಡುಗಳು ಹಾಗೂ ಬೀಸು ಕಂಸಾಳೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 7ಕ್ಕೆ ನಡೆಯುವ ಮಲೆಮಾದೇಶ್ವರ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಸಾಲೂರು ಬೃಹನ್ಮಠ ಅಧ್ಯಕ್ಷ ಪಟ್ಟದ ಗುರುಸ್ವಾಮೀಜಿ ಹಾಗೂ ಪಟ್ಟದ ಇಮ್ಮಡಿ ಮಹದೇವಸ್ವಾಮೀಜಿ ವಹಿಸುವರು.
ಇಂದು ಬಂದ್
ಚಾಮರಾಜನಗರ: ಗಡಿ ತಮಿಳುನಾಡಿನ ತಾಳವಾಡಿ ಫಿರ್ಕಾದ ಕನ್ನಡಿಗರ ರಕ್ಷಣೆ ಹಾಗೂ ಭಾಷಾ ತಾರತಮ್ಯ ನೀತಿ ಸರಿಪಡಿಸಲು ಒತ್ತಾಯಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಚಾಮರಾಜನಗರ ಬಂದ್‌ಗೆ ಕರೆ ನೀಡಲಾಗಿದೆ. ಜ.24ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದ್ದು, ವರ್ತಕರು, ಉದ್ದಿಮೆಗಳು, ಹೊಟೇಲ್ ಮತ್ತು ಚಿತ್ರಮಂದಿರದ ಮಾಲೀಕರು ನಗರ ಬಂದ್‌ಗೆ ಸಹಕಾರ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಬಿಜೆಪಿ ಪ್ರತಿಭಟನೆ
ಚಾಮರಾಜನಗರ: ಹಿಂದೂಗಳು ಉಗ್ರಗಾಮಿಗಳು ಎಂದು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿ ಜ.25ರಂದು ಬೆಳಗ್ಗೆ 10.30ಕ್ಕೆ ಬಿಜೆಪಿ ನಗರ ಹಾಗೂ ತಾಲೂಕು ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ನಗರ ಬಿಜೆಪಿ ಕಚೇರಿಯ ಬಳಿ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಬೇಕೆಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸುಂದರ್‌ರಾಜ್ ಹಾಗೂ ತಾಲೂಕು ಘಟಕದ ನಲ್ಲೂರು ಸೋಮೇಶ್ವರ್ ಕೋರಿದ್ದಾರೆ.
ಅಪಘಾತ: ವ್ಯಕ್ತಿ ಸಾವು
ಗುಂಡ್ಲುಪೇಟೆ: ಬಂಡಿಪುರ ಅರಣ್ಯ ವ್ಯಾಪ್ತಿಯ ಮದ್ದೂರು ಚೆಕ್‌ಪೋಸ್ಟ್ ಸಮೀಪದಲ್ಲಿ ಕಾರು ಉರುಳಿ ಬಿದ್ದು ಒಬ್ಬ ಸಾವಿಗೀಡಾಗಿ ನಾಲ್ವರಿಗೆ ಗಾಯಗಳಾಗಿರುವ ಘಟನೆ ಜರುಗಿದೆ. ಕೇರಳ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕೇರಳಕ್ಕೆ ಸೇರಿದ ಸ್ವಿಫ್ಟ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿತೆನ್ನಲಾಗಿದೆ. ಇದರಿಂದ ಕಾರಿನ ಚಾಲಕ ರವೀಂದ್ರನ್(45) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿ ಕೇರಳದ ಸುಲ್ತಾನ್ ಬತ್ತೇರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕ ನಾಪತ್ತೆ
ಚಾಮರಾಜನಗರ: ಜಿಲ್ಲೆಯ ಬಸಪ್ಪನ ಒಡ್ಡು ಗ್ರಾಮದಿಂದ ನವೀನ್ ಎಂಬ ಯುವಕ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿದೆ. ಯುವಕನ ಚಹರೆ: 20 ವರ್ಷ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ತಮಿಳು ಮಾತನಾಡುತ್ತಾನೆ. ಕಾಣೆಯಾದಾಗ ಕೆಂಪು ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮಾಹಿತಿ ದೊರೆತಲ್ಲಿ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.
ಇಂದು ನೂತನ ಪದಾಧಿಕಾರಿಗಳಿಗೆ ಸನ್ಮಾನ
ಚಾಮರಾಜನಗರ: ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಗ್ರಾಪಂ, ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಏರ್ಪಡಿಸಲಾಗಿದೆ. ಜಿಪಂ ಅಧ್ಯಕ್ಷೆ ನಾಗಶ್ರೀ, ಶಾಸಕ ಸಿ.ಪುಟ್ಟರಂಗಶೆಟ್ಟಿ, ತಾಪಂ ಅಧ್ಯಕ್ಷ ಎನ್.ಬಸವಣ್ಣ, ಜಿಪಂ, ತಾಪಂ ಸದಸ್ಯರು, ಪದಾಧಿಕಾರಿಗಳು ಭಾಗವಹಿಸುವರು ಎಂದು ಅಧ್ಯಕ್ಷರಾದ ಸೈಯ್ಯದ್ ರಫಿ, ಬಿ.ಕೆ.ರವಿಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

