ಚಾಮರಾಜನಗರ

ಪಾಲಿಶ್ ಅಕ್ಕಿ ಅನ್ನವೇ ಅಲ್ಲ...

Published On :

-ಮಾ. ವೆಂಕಟೇಶ್
ಮೈಸೂರು:
ದೇವರಿಗೆ ನೈವೇದ್ಯವಾಗಿ, ಮಗುವಿನ ಮೊದಲ ತುತ್ತಾಗಿ, ಮಂಗಳಕರ ಕಾರ್ಯಗಳಿಗೆ ಅಕ್ಷತೆಯಾಗಿ, ಅಷ್ಟೆ ಯಾಕೆ ಸತ್ತ ಮನುಷ್ಯನ ಅಂತಿಮ ಯಾತ್ರೆಗೆ ಪಿಂಡವಾಗಿಯೂ ಅಕ್ಕಿ ಬಳಕೆ ಕಂಡುಬರುತ್ತದೆ. ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಅಕ್ಕಿಗೆ ಮಹತ್ವ. ಅಲ್ಲದೆ ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ ಎನ್ನುವ ಮಾತುಗಳಿವೆ.
ಭಾರತೀಯರ ಜನಜೀವನದಲ್ಲಿ ಅಕ್ಕಿ ಅರ್ಥಾತ್ ಅನ್ನಕ್ಕೆ ಬಹುಮುಖ್ಯ. ಅನ್ನ ಕೇವಲ ಹೊಟ್ಟೆ ತುಂಬಿಸಿದರೆ ಸಾಕೇ. ಶರೀರಕ್ಕೆ ಪುಷ್ಟಿಯು ದೊರಕಬೇಕಲ್ಲವೇ. ಆದ್ದರಿಂದ ಇಂದು ನಾವು ಸೇವಿಸುತ್ತಿರುವ ಅನ್ನದ ಮಹತ್ವವೇನು, ಅಕ್ಕಿಯ ಸತ್ವ ಎಂತಹದ್ದು ಹಾಗೂ ಅದರಿಂದ ಸಿಗುವ ಪೌಷ್ಟಿಕತೆ ಎಷ್ಟು ಎಂಬ ಬಗ್ಗೆ ಚಿಂತಿಸುತ್ತಿಲ್ಲ.
ಅನ್ನ ಬರೀ ಆಹಾರ ಅಲ್ಲ. ಅದೊಂದು ವಿಶಿಷ್ಟ ಸಂಸ್ಕೃತಿ. ಅದರಲ್ಲೂ ಕೆಂಪಕ್ಕಿ ಅತ್ಯಂತ ಶ್ರೇಷ್ಠ ಮತ್ತು ಪೋಷಕಾಂಶಗಳಿಂದ ಕೂಡಿದೆ. ಆದರೆ ಪಾಲಿಶ್ ಮಾಡಿದ ಅಕ್ಕಿಯ ಅನ್ನ ನಿಜವಾಗಲೂ ಅನ್ನವೇ ಅಲ್ಲ. ಸಕ್ಕರೆ ಕಾಯಿಲೆ, ಮಲಬದ್ಧತೆ, ಬೊಜ್ಜು, ಕ್ಯಾನ್ಸರ್ ಇತರೆ ಕಾಯಿಲೆ ಆಹ್ವಾನಿಸುವ ಬಿಳಿ ವಿಷ ಎನ್ನುತ್ತಾರೆ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಪ್ರಸಾದ್ ಹುಡೇದ.
ಅಕ್ಕಿಯ ಮೇಲ್ಪದರದಲ್ಲಿರುವ ತೌಡಿನಲ್ಲಿಯೇ ನಿಜವಾದ ಪೋಶಕಾಂಶ ಅಡಗಿದೆ ಎಂಬ ಮಾತು ವೈಜ್ಞಾನಿಕ. ಹೀಗಿದ್ದರೂ ಪಾಲಿಶ್ ಮಾಡಿದ ಅಕ್ಕಿಯನ್ನೇ ಜನರಿಗೆ ಮಾರುಕಟ್ಟೆಯಲ್ಲಿ ಹಾಗೂ ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು ಎಷ್ಟು ಸರಿ. ಇಂತಹ ಅಕ್ಕಿಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸರ್ಕಾರ ಸಾರ್ವಜನಿಕರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದೆ.
ಕ್ರಮ ಏಕೆ ಇಲ್ಲ?: ಪಾಲಿಶ್ ಮಾಡಿದ ಅಕ್ಕಿ ಬಳಕೆಯಿಂದ ರೋಗ ಬರುವುದಾದರೆ ಅಂತಹ ವಸ್ತುಗಳ ಮೇಲೆ ಅಗತ್ಯ ಕ್ರಮ ಜರುಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಅಕ್ಕಿ ಬೆಳೆಯಬೇಡಿ, ವ್ಯಾಪಾರ ಮಾಡಬೇಡಿ ಅಥವಾ ಗ್ರಾಹಕರು ಬಳಸಬೇಡಿ ಎಂದು ನಿಷೇಧಿಸಬೇಕು ಅಂತಲ್ಲ. ಪಾಲಿಶ್ ಮಾಡದ ಅಕ್ಕಿಯನ್ನೇ ಮಾರುಕಟ್ಟೆಯಲ್ಲಿ ಕಡ್ಡಾಯವಾಗಿ ಮಾರಾಟ ಮಾಡಬೇಕು ಎಂಬ ನಿಯಮ ತರಬೇಕು ಎಂಬುದು ಆಶಯ.
ಸಾರಜನಕ, ಕೊಬ್ಬು, ನಾರು, ಅನ್ನಾಂಶ ಮತ್ತು ಖನಿಜಾಂಶಗಳೆಲ್ಲ ಅಕ್ಕಿಯ ತೌಡಿನಲ್ಲಿರುತ್ತದೆ. ಪಾಲಿಶ್ ನೆಪದಲ್ಲಿ ತಾಜಾ ಬಿಳಿ ಅಕ್ಕಿ ಸರಬರಾಜುಗುತ್ತಿದೆ. ಅದನ್ನು ತಿಂದು ರೋಗ ಆಹ್ವಾನಿಸಿಕೊಂಡ ಬಳಿಕ ತೌಡಣ್ಣೆ ತುಂಬಾ ಆರೋಗ್ಯಕರ ಎಂದು ಪುನಃ ದುಬಾರಿ ಬೆಲೆ ತೆತ್ತು ಅದನ್ನು ಖರೀದಿಸುವಲ್ಲಿ ಮುಂದಾಗಿರುವುದು ಸಹ ದುರಂತದ ಸಂಗತಿ. ಪಾಲಿಶ್ ಇಲ್ಲದ ಹಾಗೂ ಔಷಧಯುಕ್ತ ಅಕ್ಕಿಗೆ ಸಾರ್ವಜನಿಕರಿಂದ ಸಾಕಷ್ಟು ಬೇಡಿಕೆಯಿದೆ. ಆದರೆ ಅದರ ಸರಬರಾಜು ಕಡಿಮೆ. ಬೆಲೆ ಸಹ ದುಬಾರಿ ಎಂಬುದು ನಾಗರಿಕರ ಅಸಮಾಧಾನ. ಇತ್ತೀಚೆಗೆ ಸಹಜ ಸಮೃದ್ಧ ಸಂಸ್ಥೆಯು ಮೈಸೂರಿನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕೆಂಪಕ್ಕಿ ಸಂತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಿದ್ದು ಇದಕ್ಕೊಂದು ನಿದರ್ಶನ.

ಔಷಧಯುಕ್ತ ಅಕ್ಕಿ
ಕನ್ನಡನಾಡು ದೇಸಿ ಬತ್ತದ ತವರು. ಅದರಲ್ಲೂ ಕೆಂಪಕ್ಕಿಗೆ ಪ್ರಮುಖ ಸ್ಥಾನ. ವಾತ, ಪಿತ್ತ, ಕಫ ತ್ರಿದೋಷ ನಿವಾರಕ. ಶರೀರ ಕಾಂತಿವರ್ಧಕ. ಹೃದಯಕ್ಕೆ ಬಲಕಾರಿ, ಕಣ್ಣಿಗೆ ಆರೋಗ್ಯದಾಯಿ, ವೀರ್ಯವರ್ಧಕ, ಕಾಮ ಉತ್ತೇಜಕ, ಹಳೆಯ ಗಾಯ, ಜ್ವರ, ಎದೆನೋವು, ಕೆಮ್ಮು, ದಮ್ಮು ರೋಗಗಳಿಗೆ ಪಥ್ಯವಾಗುವ ಸರ್ವರೋಗ ಪರಿಹಾರಿ. ಹಾಗಾಗಿ ಕೆಂಪಕ್ಕಿಯನ್ನು ಔಷಧಕ್ಕಿ ಎಂದು ಕರೆಯುತ್ತಾರೆ. ಇದು ಬೆಂಗಳೂರು ಸುತ್ತಮುತ್ತ ಬೆಳೆಯುತ್ತಾರೆ.  ನವರ ಎಂಬ ಅಕ್ಕಿ ಏಷ್ಯಾ ಖಂಡದಲ್ಲಿಯೇ ಹೆಚ್ಚಾಗಿ ಔಷಧಿಗೆ ಬಳಸುವ ಅಕ್ಕಿ. ಇದು ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕ್ಯಾನ್ಸರ್ ಹಾಗೂ ಕೀಲು ನೋವಿಗೆ ರಾಮಬಾಣ. ಕರಿಜಡ್ಡು ಅಕ್ಕಿ ಸಕ್ಕರೆ ಕಾಯಿಲೆ ತಡೆಗೆ ಸಹಾಯಕ. ಇದು ವರದಾ ನದಿಯ ಸುತ್ತಮುತ್ತ ಬೆಳೆಯುತ್ತಾರೆ. ಕರಿಗಜವಿಲಿ ಇದು ಬಾಣಂತಿಯರಿಗೆ ಅನ್ನಕ್ಕೆ ಬಳಸುವ ಅಕ್ಕಿ. ಬೈರನಲ್ಲು, ಮುಂಡುಗ, ಪುಟ್ಟುಬತ್ತ ಮುಂತಾದ ಔಷಧಿಯ ಗುಣವಿರುವ ಬತ್ತಗಳಿವೆ.

ಅನ್ನ, ಮಧುಮೇಹ
ಇಡೀ ವಿಶ್ವದಲ್ಲಿಯೇ ಮಧುಮೇಹದಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಗ್ರಾಮೀಣ ಭಾಗದಲ್ಲಿ ಶೇ. 8, ನಗರ ಭಾಗದಲ್ಲಿ ಶೇ. 14. ಅದರಲ್ಲೂ ಇಂದಿನ ಯುವಕರಲ್ಲಿ ಶೇ.14 - 15 ಮಂದಿಗೆ ಈ ಕಾಯಿಲೆ ಕಂಡು ಬಂದಿದೆ. ಸಾಮಾನ್ಯ ಅಕ್ಕಿ ಬಳಕೆಯಿಂದ ಶೇ.10 ರಷ್ಟು ಸಕ್ಕರೆ ಕಾಯಿಲೆ ಬರಲು ಕಾರಣ. ಅದರಲ್ಲೂ ಪಾಲಿಶ್ ಇಲ್ಲದ ಅಕ್ಕಿ ಬಳಸಿದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
- ಡಾ. ಲಕ್ಷ್ಮೀನಾರಾಯಣ, ಹೆಸರಾಂತ ಮಧುಮೇಹ ತಜ್ಞ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.