ಅಕ್ರಮ ಗ್ಯಾಸ್ರೀಫಿಲ್ಲಿಂಗ್: ಬಂಧನ
ಹಾಸನ: ನಗರದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಗ್ಯಾಲ್ ರೀಫಿಲ್ಲಿಂಗ್ ಮಾಡುತ್ತಿದ್ದ ರೆಹಮಾನ್ಖಾನ್ (35) ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ರೀಫಿಲ್ಲಿಂಗ್ ಮಾಡುತ್ತಿದ್ದ 1200 ರು. ಸೇರಿ 11340 ರು. ಮೌಲ್ಯದ 14.2 ಕೆ.ಜಿ ತೂಕದ ಭಾರತ್ ಕಂಪನಿಯ ತುಂಬಿದ ಎರಡು ಸಿಲೆಂಡರ್ಗಳು, ತಲಾ 12 ಕೆಜಿ ತೂಕದ ಕಾವೇರಿ ಮತ್ತು ಜ್ಯೋತಿ ಕಂಪನಿಗೆ ಸೇರಿದ ಅನಿಲ ತುಂಬಿದ 2 ಸಿಲಿಂಡರ್ಗಳು, ತಲಾ 5 ಕೆಜಿ ತೂಕ ಕಾವೇರಿ ಕಂಪನಿಯ ಆಟೋ ರಿಕ್ಷಾಗೆ ಬಳಸುವ 2 ಸಿಲೆಂಡರ್ಗಳು ಒಂದು ತುಂಬಿದ್ದು ಇನ್ನೊಂದು ಖಾಲಿ ಇದ್ದುದನ್ನು ಹಾಗೂ ತಲಾ 4 ಕೆ.ಜಿ ತೂಕದ ಹಾಗೂ ಖಾಲಿ ಇರುವ 5 ಸ್ಟೌವ್ ಸಿಲಿಂಡರಗಳನ್ನು, ತಲಾ 2 ಕೆ.ಜಿ ತೂಕದ ಪವರ್ರಿಂಗ್ ಹಾಗೂ ಪರ್ಫೆಕ್ ಕಂಪನಿಯ 3 ಖಾಲಿ ಗ್ಯಾಸ್ ಸಿಲಿಂಡರ್ಗಳು, ಕಬ್ಬಿಣದ 2 ರೀಫಿಲ್ಲಿಂಗ್ ಪೈಪುಗಳು ಮತ್ತು ಒಂದು ತೂಕದ ಸ್ಕೇಲ್ಗಳನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.
ಅಂದರ್ ಬಾಹರ್: 6 ಬಂಧನ
ಅರಸೀಕೆರೆ: ತಾಲೂಕಿನ ಜಾವಗಲ್ ಹೋಬಳಿ ಬಂದೂರು ಗ್ರಾಮದ ಗ್ರಾಮ ಪಂಚಾಯ್ತಿ ಹಿಂಭಾಗದಲ್ಲಿ ಅಂದರ್ ಬಾಹರ್ ಜೂಜಾಟಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ. ಬಂದೂರು ಗ್ರಾಮದ ಲೋಕೇಶ (45), ಸದಾಶಿವ (50), ಶೇಖರಪ್ಪ (50), ರಾಮಣ್ಣ (54), ಹರೀಶ (28) ಕಾಳನಕೊಪ್ಪಲು ಗ್ರಾಮದ ಪಾಲಾಕ್ಷ ( 40) ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣವಾಗಿಟ್ಟಿದ್ದ 3850 ರು. ನಗದು ವಶಪಡಿಸಿಕೊಂಡಿರುವ ಜಾವಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಮದ್ಯ : ಮೂವರ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಚನ್ನರಾಯಪಟ್ಟಣ ಹೊಸ ಬಸ್ ನಿಲ್ದಾಣದ ಬಳಿ ಇರುವ ಅಮೃತ ಬಾರ್ ಹೊರಗಡೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೋವಿನಕೆರೆ ಗ್ರಾಮದರಂಗನಾಥ (18) ಹಾಗೂ ರಂಗಸ್ವಾಮಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರಾಟಕ್ಕಿಟ್ಟಿದ್ದ 13615 ರು. ಮೌಲ್ಯದ
ಬ್ರಾಂದಿ 750 ಎಂಎಲ್ನ 9 ಬಾಟಲಿಗಳು, ಎಂಹೆಚ್ವಿಎಸ್ಒಪಿ ಬ್ರಾಂದಿ 180 ಎಂಎಲ್ನ 43 ಬಾಟಲಿಗಳು, ಒಟಿ 750 ಎಂಎಲ್ನ 10 ಬಾಟಲಿಗಳು, ನಾಕೌಟ್ ಬೀರು ಬಾಟಲ್ 330 ಎಂಎಲ್ನ 20 ಬಾಟಲಿಗಳು, ರಾಯಲ್ ಚಾಲೆಂಜ್ ವಿಸ್ಕಿ 180 ಎಂಎಲ್ನ 40 ಬಾಟಲಿಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ಸುಬ್ರಹ್ಮಣ್ಯ ನಗರದಿಂದ ಮುದ್ದನಹಳ್ಳಿ ಕಡೆ ಹೋಗುವ ಜಂಕ್ಷನ್ದಾಪುರ ರಸ್ತೆಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮುದ್ದಲಿಂಗನಕೊಪ್ಪಲು ಗ್ರಾಮದ ಸಿದ್ದೇಗೌಡ (48) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರಾಟಕ್ಕಿಟ್ಟಿದ್ದ 5640 ರು. ಬೆಲೆಯ ಮದ್ಯದ ಬಾಟಲ್, ಪ್ಯಾಕೇಟ್ ಹಾಗೂ ಸಾಗಾಣಿಕೆ ಮಾಡಲು ಉಪಯೋಗಿಸಿದ ಟಿವಿಎಸ್ ದ್ವಿಚಕ್ರ ವಾಹನ ವಶಪಡಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೈಕ್ ಕಳವು
ಹಾಸನ: ಇಲ್ಲಿನ ವಿದ್ಯುತ್ನಗರದ ಈರೇಗೌಡ ಎಂಬವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ 24 ಸಾವಿರ ರು. ಮೌಲ್ಯದ ಬೈಕನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ. ಈ ಬಗ್ಗೆ ಈರೇಗೌಡರು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವ್ಯಕ್ತಿ ಕೊಲೆ: ನಾಲ್ವರ ಬಂಧನ
ಮೈಸೂರು: ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹುಣಸೂರು ತಾಲೂಕಿನ ಅಂಬೇಡ್ಕರ್ ಹೊಸೂರು ನಿವಾಸಿ ಚೆಲುವಯ್ಯ ಎಂಬವರ ಪುತ್ರ ವೈರಮುಡಿ (38), ಗೋಪಾಲಯ್ಯ ಎಂಬವರ ಪುತ್ರ ಕೃಷ್ಣಮೂರ್ತಿ (28), ನಲ್ಲೂರುಪಾಲ ನಿವಾಸಿ ಲೇ.ತಿಮ್ಮಯ್ಯ ಎಂಬವರ ಪುತ್ರ ಶೇಷಯ್ಯ (35), ಗುರುಪುರ ನಿವಾಸಿ ಜಂಫೆಲ್ ಎಂಬವರ ಪುತ್ರ ಕಿಕ್ಯಾ (82) ಬಂಧಿತ ಆರೋಪಿಗಳು.ಇವರು ಮತ್ತು ಇತರರು ಜ.19ರಂದು ರಾತ್ರಿ ವೇಳೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಎಚ್.ಡಿ. ಕೋಟೆ ತಾಲೂಕು ರಾಜೇಗೌಡನಹುಂಡಿ ನಿವಾಸಿ ಅಪ್ಪುಗೌಡ ಎಂಬವರ ಪುತ್ರ ಶೇಖರ್ (35) ಎಂಬವರನ್ನು ಹುಣಸೂರಿನ ಗುರುಪುರದ ಐ-ವಿಲೇಜನಲ್ಲಿ ಕೊಲೆ ಮಾಡಿದ್ದರು. ಈ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎಸ್ಪಿ ಆರ್.ದಿಲೀಪ್, ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್ ರೆಡ್ಡಿ, ಹುಣಸೂರು ಉಪ ವಿಭಾಗದ ಡಿವೈಎಸ್ಪಿ ಮುದ್ದುಮಹದೇವಯ್ಯ ಮಾರ್ಗದರ್ಶನದಲ್ಲಿ ಹುಣಸೂರು ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ರಸಾದ್, ಎಸ್ಐ ಅರುಣ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವ್ಯಕ್ತಿ ಬಂಧನ: ಆಭರಣ ವಶ
ಮೈಸೂರು: ಕಳ್ಳತನ ಮಾಡಿದ್ದ ಆರೋಪಿಯನ್ನು ಬನ್ನೂರು ಠಾಣೆ ಪೊಲೀಸರು ಬಂಧಿಸಿ, 20000 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಟಿ.ನರಸೀಪುರ ತಾಲೂಕು ಬನ್ನೂರು ಹೋಬಳಿ ಉಕ್ಕಲಗೆರೆ ನಿವಾಸಿ ಜವರಯ್ಯ ಎಂಬವರ ಪುತ್ರ ಲಕ್ಷ್ಮಣ (29) ಬಂಧಿತ ಆರೋಪಿ. ಈತನು ಬನ್ನೂರು ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾಗ, ಒಂದೂವರೆ ವರ್ಷಗಳ ಹಿಂದೆ ಉಕ್ಕಲಗೇರಿಯ ಈರಮ್ಮ ಎಂಬವರ ಕಿವಿಯಿಂದ ಒಂದು ಜೊತೆ ಓಲೆಗಳನ್ನು ಕಿತ್ತುಕೊಂಡಿದ್ದ.
22 ದಿನಗಳ ಹಿಂದಿ ಉಕ್ಕಲಗೆರೆಯ ನಂಜಮ್ಮಣಿ ಎಂಬವರ ಮಾಂಗಲ್ಯ ಸಹಿತ ಕರಿಮಣಿ ಕಿತ್ತುಕೊಂಡು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬೈಕ್ ಕಳವು: ಇಬ್ಬರ ಬಂಧನ
ಮೈಸೂರು: ಬೈಕ್ ಕಳ್ಳತನ ಮಾಡಿರುವ ಇಬ್ಬರು ಆರೋಪಿಗಳನ್ನು ಬನ್ನೂರು ಠಾಣೆ ಪೊಲೀಸರು ಬಂಧಿಸಿ, 2 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬನ್ನೂರು ಪಟ್ಟಣದ ಶೌಕತ್ ಆಲಿ (22) ಮತ್ತು ಮೈಸೂರಿನ ಗೋಕುಲಂ ನಿವಾಸಿ ನವೀನ್ (21) ಬಂಧಿತ ಆರೋಪಿಗಳು. ಬನ್ನೂರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೈಕ್ ಕಳವು ಮಾಡಿರುವುದು ಒಪ್ಪಿಕೊಂಡಿದ್ದಾರೆ.
ಎಸ್ಪಿ ಆರ್.ದಿಲೀಪ್, ನಂಜನಗೂಡು ಉಪ ವಿಭಾಗ ಡಿವೈಎಸ್ಪಿ ಎಸ್.ಜಿ. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಟಿ.ನರಸೀಪುರ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಸ್. ಸುಂದರ್ರಾಜ್, ಬನ್ನೂರು ಠಾಣೆ ಎಸ್ಐ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಮೊಪೆಡ್ ಕಳ್ಳನ ಬಂಧನ
ಮೈಸೂರು: ಟಿವಿಎಸ್ ಎಕ್ಸ್ಎಲ್ ಮೊಪೆಡ್ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಮಂಗಳವಾರ ಬೆಳಗಿನ ಜಾವ ಬಂಧಿಸಿದ್ದಾರೆ.
ನಂಜನಗೂಡು ತಾಲೂಕು ಹದಿನಾರು ಗ್ರಾಮದ ಸಿದ್ದನಾಯಕ ಎಂಬವರ ಪುತ್ರ ಕುಮಾರ (31) ಬಂಧಿತ ಆರೋಪಿ. ಈತನು ಬೆಳಗಿನ ಜಾವ ಮೈಸೂರು ತಾಲೂಕಪ ಹೊಸಹುಂಡಿ ಗೇಟ್ ಬಳಿ ಟಿವಿಎಸ್ ಮೊಪೆಡ್ ವಾಹನದಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸರು ಈತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ, ಮೊಪೆಡ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಈತನಿಂದ ಮೈಸೂರು ಗ್ರಾಮಾಂತರ, ನಂಜನಗೂಡು ಪಟ್ಟಣ ಮತ್ತು ಗ್ರಾಮಾಂತರ ಹಾಗೂ ಮೈಸೂರಿನ ದೇವರಾಜ, ಜಯಲಕ್ಷ್ಮಿಪುರಂ, ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 7 ಟಿವಿಎಸ್ ಎಕ್ಸ್ಎಲ್ ಮೊಪೆಡ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಆರ್. ದಿಲೀಪ್, ಮೈಸೂರು ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಸಿದ್ದಪ್ಪ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನೇಮಿರಾಜು, ದಕ್ಷಿಣ ಠಾಣೆಯ ಎಸ್ಐ ಎಚ್.ಬಿ. ವೆಂಕಟೇಶಯ್ಯ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

