ಚಾಮರಾಜನಗರ

ಜೆಡಿಎಸ್: ಸಂಘಟನೆ ಕೊರತೆ ತಂದ ದುರ್ಗತಿ

Published On :

- ದೇವರಾಜು ಕಪ್ಪಸೋಗೆ
ಚಾಮರಾಜನಗರ: ಕಳೆದ ಬಾರಿ ನಡೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಈ ಬಾರಿ ಸಂಘಟನೆಯ ಕೊರತೆಯಿಂದ ಅಧೋಗತಿಗಿಳಿದಿದೆ.
31 ಸದಸ್ಯ ಬಲದ ಚಾಮರಾಜನಗರ ನಗರಸಭೆಯಲ್ಲಿ ಕಳೆದ 2007ರ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಅಧ್ಯಕ್ಷ ಸುರೇಶ್ ನಾಯಕ್, ಸುದರ್ಶನ್ ಗೌಡ, ಮಹಮದ್ ಅಸ್ಗರ್ ಮನ್ನಾ, ಕೆ.ನಾಗರಾಜು, ವಿಜಯಕುಮಾರಿ, ರಘುನಾಥ್, ಜೋತಿ ಮಹೇಶ್ ಆಯ್ಕೆಯಾಗಿದ್ದರು.
ಅದೃಷ್ಟವೆಂಬಂತೆ ಪ್ರಥಮ ಬಾರಿಗೆ ಎಸ್ಟಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಎಸ್ಟಿ ಅಭ್ಯರ್ಥಿ ಇಲ್ಲದ ಕಾರಣ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ನಡೆದು ಜೆಡಿಎಸ್‌ನ ಸುರೇಶ್ ನಾಯಕ್ ಅವರು ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಶಿವನಂಜಯ್ಯ ಆಯ್ಕೆಯಾಗಿದ್ದರು.
ಒಂದು ವರ್ಷದ ಬಳಿಕ ಅಧ್ಯಕ್ಷ ಸುರೇಶ್ ನಾಯಕ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ನಂತರ  ಬಿಜೆಪಿಯ ಮಹದೇವನಾಯಕ ಅವರು ಅಧ್ಯಕ್ಷರಾಗಿದ್ದರು.
ಮತ್ತೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾದ ಪರಿಣಾಮ ಜೆಡಿಎಸ್, ಬಿಜೆಪಿ ಮತ್ತು ವಾಟಾಳ್ ಪಕ್ಷದ ಮೈತ್ರಿಯಿಂದಾಗಿ 30 ತಿಂಗಳ ಅಧಿಕಾರವಧಿಯನ್ನು 15- 15 ಒಪ್ಪಂದದಂತೆ ಜೆಡಿಎಸ್-ಬಿಜೆಪಿ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಿಕೊಂಡಿದ್ದು, ಉಪಾಧ್ಯಕ್ಷ ಸ್ಥಾನವನ್ನು ವಾಟಾಳ್ ಪಕ್ಷದ ಸೆಲ್ವಿಬಾಬು ಅವರಿಗೆ ನೀಡಲಾಗಿತ್ತು. ಆದರೆ, ಒಪ್ಪಂದದಂತೆ ಕೊನೆಯ 15 ತಿಂಗಳ ಅಧಿಕಾರವನ್ನು ಜೆಡಿಎಸ್ ಬಿಜೆಪಿಗೆ ಬಿಟ್ಟು ಕೊಡದ ಪರಿಣಾಮ ಭಾಗ್ಯಮ್ಮ ಅವರಿಗೆ 30 ತಿಂಗಳ ಕಾಲ ಅಧ್ಯಕ್ಷರಾಗುವ ಭಾಗ್ಯ ಒಲಿದಿತ್ತು. ಇದರಿಂದಾಗಿ ಜೆಡಿಎಸ್‌ಗೆ ಸುಮಾರು 40 ತಿಂಗಳಿಗೂ ಹೆಚ್ಚು ಕಾಲ ಅಧಿಕಾರ ಸಿಕ್ಕಿತ್ತು.
ಆದರೆ, ಇದೀಗ ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಜೆಡಿಎಸ್ ಸಂಘಟನೆ ಕೊರತೆಯಿಂದಾಗಿ ಹಿರಿಯ ಸದಸ್ಯ ಸುದರ್ಶನ ಗೌಡ, ಮಾಜಿ ಅಧ್ಯಕ್ಷ ಸುರೇಶ್ ನಾಯಕ್, ಕೆ. ನಾಗರಾಜು ಅವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ಉಳಿದಂತೆ ನಿಕಟಪೂರ್ವ ಅಧ್ಯಕ್ಷೆ ಭಾಗ್ಯಮ್ಮ ಮತ್ತು ಮಾಜಿ ಸದಸ್ಯೆ ಜ್ಯೋತಿ ಮಹೇಶ್ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ. ಉಳಿದ ಮಾಜಿ ಸದಸ್ಯರಾದ ಮಹಮದ್ ಅಸ್ಗರ್ ಮನ್ನಾ, ರಘುನಾಥ್ ತಟಸ್ಥರಾಗಿ ಉಳಿದಿದ್ದಾರೆ. ವಿಜಯ ಕುಮಾರ್ ಅವರು ಕೆಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ.
ಅವರ ಪುತ್ರ ಜೆಡಿಎಸ್ ವಕ್ತಾರ ವಿ. ಶ್ರೀನಿವಾಸ ಪ್ರಸಾದ್ ಸಹ ಇಂದು ಜೆಡಿಎಸ್‌ಗೆ ರಾಜಿನಾಮೆ ಸಲ್ಲಿಸಲಿದ್ದಾರೆ. ಹೀಗಾಗಿ ಕಳೆದ ಚುನಾವಣೆಯಲ್ಲಿ 8 ಸ್ಥಾನ ಪಡೆಯುವ ಮೂಲಕ 40 ತಿಂಗಳ ಕಾಲ ಅಧ್ಯಕ್ಷ ಸ್ಥಾನ ಪಡೆದಿದ್ದ ಜೆಡಿಎಸ್ ಮುಂಬರುವ ನಗರಸಭಾ ಚುನಾವಣ ೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹುಡುಕಾಟ ನಡೆಸಬೇಕಾದ ಸಂದರ್ಭ ಬರಬಹುದು.

ವಾಟಾಳ್ ಪಕ್ಷದ ಪಕ್ರಿಯೆಯೇ ಆರಂಭವಾಗಿಲ್ಲ
ಚುನಾವಣಾ ಪ್ರಕಿಯೆ ಆರಂಭವಾಗಿದ್ದರೂ ವಾಟಾಳ್ ನಾಗರಾಜ್ ಅವರು ಇದುವರೆಗೆ ಚಾಮರಾಜನಗರಕ್ಕೆ ಭೇಟಿ ನೀಡಿಲ್ಲ. ಕಳೆದ ಚುನಾವಣೆಯಲ್ಲಿ ವಾಟಾಳ್ ಅವರು ಶಾಸಕರಾಗಿದ್ದಾಗ 14 ವಾರ್ಡ್‌ಗಳಲ್ಲಿ ವಾಟಾಳ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು.
ಐವರು  ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅವರ ಪೈಕಿ ಸೋಮವಾರ ಪ್ರಭಾ ಮತ್ತು ನಿಂಗರಾಜು ಕಾಂಗ್ರೆಸ್ ಸೇರಿದ್ದಾರೆ. ಉಳಿದ ಮೂವರು ಸದಸ್ಯರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ 2 ಮತಗಳ ಅಂತರದಲ್ಲಿ 9ನೇ ವಾರ್ಡ್‌ನಲ್ಲಿ ಸೋತಿದ್ದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ರೇಣುಕಾ ಬಸಪ್ಪ ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೀಗ ಫೆ.21ರಂದು ವಾಟಾಳ್ ಅಭ್ಯರ್ಥಿಗಳ ಆಯ್ಕೆಯಾಗಿ ನಗರಕ್ಕೆ ಭೇಟಿ ನೀಡಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಫೆ.23 ಕಡೆ ದಿನವಾಗಿದೆ. ನಾಗರಾಜ್ ಅವರು ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಕನಿಷ್ಠ 10 ಮಂದಿ ಅಭ್ಯರ್ಥಿಗಳನ್ನಾದರೂ ಗೆಲ್ಲಿಸಿಕೊಳ್ಳಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ, ಇದುವರಗೆ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಯಾವುದೇ ಪಕ್ರಿಯೆ ನಡೆಯದಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಪಕ್ಷ ಸಂಘಟನೆ ಹೊಣೆ ಹೊತ್ತಿರುವ ಜೆಡಿಎಸ್ ಅಧ್ಯಕ್ಷ ಮಂಗಲ ಶಿವಕುಮಾರ್, ಉಸ್ತುವಾರಿ ವಹಿಸಿಕೊಂಡಿರುವ ಎಂ. ಮಹದೇವ್ ಅವರು ಸಂಘಟನೆ ಅಸಕ್ತಿ ವಹಿಸಿದ ಕಾರಣದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇವೆ.
- ಸುರೇಶ್ ನಾಯಕ,  ನಗರಸಭಾ ಮಾಜಿ ಅಧ್ಯಕ್ಷರು, ಚಾಮರಾಜನಗರ

ಎಂಟು ಮಂದಿ ಸದಸ್ಯರ ಪೈಕಿ ಮೂವರು ಪಕ್ಷ ತೊರೆದಿದ್ದಾರೆ. ಉಳಿದ ಸದಸ್ಯರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಚುನಾವಣೆಗೆ ಸ್ಪರ್ಧೆ ಬಯಸುವವರು ಅರ್ಜಿ ಪಡೆಯುತ್ತಿದ್ದಾರೆ.
- ಮಂಗಲ ಶಿವಕುಮಾರ್
ಜೆಡಿಎಸ್ ತಾಲೂಕು ಅಧ್ಯಕ್ಷ, ಚಾಮರಾಜನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.