23ರಿಂದ 9ನೇ ಮಹಾ ಕುಂಭಮೇಳ
ಮೈಸೂರು: ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮವಾದ ತಿರುಮಕೂಡಲು ನರಸೀಪುರ ಕ್ಷೇತ್ರದಲ್ಲಿ 9ನೇ ಮಹಾಕುಂಭಮೇಳವನ್ನು ಫೆ. 23 ರಿಂದ 25 ರವರೆಗೆ ನಡೆಸಲು ಸಕಲ ಸಿದ್ಧತೆ ಮಾಡಲಾಗುತ್ತಿದೆ.
ಭಕ್ತಾದಿಗಳು ಕ್ಷೇತ್ರದ ಗುಂಜಾನರಸಿಂಹಸ್ವಾಮಿ ದೇವಾಲಯ, ಅಗಸ್ತ್ಯೇಶ್ವರಸ್ವಾಮಿ ದೇವಾಲಯ, ಭಾರದ್ವಾಜ ಋಷ್ಯಾಶ್ರಮ, ಚೌಡೇಶ್ವರಿ ದೇವಸ್ಥಾನ ಮತ್ತು ಬಸವರುದ್ರಪಾದಗಳ ದರ್ಶನ ಪಡೆದು ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಮೂರು ದಿನಗಳು ಸಂಕಲ್ಪ ಹೋಮ, ಅಗಸ್ತ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪೂಜೆ, 23 ರಂದು ಸಂಜೆ 5ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, 24 ರಂದು ಸಂಜೆ 4ಕ್ಕೆ ಮಹಾತ್ಮರ, ಸುತ್ತೂರು ಮಠದ ನೇತೃತ್ವದಲ್ಲಿ ಸಂತರ ಪುರಪ್ರವೇಶ, ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ, ಪೂರ್ಣಾಹುತಿ, 25 ರಂದು ಬೆಳಗ್ಗೆ 10ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಅಂದು ಬೆಳಗಿನ ಜಾವ 5.53 ಗಂಟೆಯಿಂದ 7.39 ಕುಂಭ ಲಗ್ನದಲ್ಲಿ ಹಾಗೂ ಮಧ್ಯಾಹ್ನ 12.17 ರಿಂದ 1.05 ರವರೆಗೆ ವೃಷಭ ಲಗ್ನದಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ. ಸಂತರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಬೇಕಿರುವುದರಿಂದ ಬೆಳಗ್ಗೆಯೇ ಪುಣ್ಯಸ್ನಾನ ಮಾಡುವರು ಎಂದು ಅವರು ವಿವರಿಸಿದರು.
ಕೈಲಾಸಾಶ್ರಮ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠ, ಮೈಸೂರಿನ ಅವಧೂತ ದತ್ತಪೀಠ, ಓಂಕಾರಾಶ್ರಮ ಹಾಗೂ ಇತರ ಸಂಸ್ಥೆಗಳು ಕುಂಭಮೇಳದ ವ್ಯವಸ್ಥೆಗೆ ಸರ್ಕಾರದ ಸಹಯೋಗದಿಂದ ಸೂಕ್ತ ಅನುಕೂಲಗಳನ್ನು ಕಲ್ಪಿಸಿವೆ.
ಮೂರು ದಿವಸಗಳೂ ವಿಶ್ವಶಾಂತಿಗಾಗಿ ಹೋಮ, ಹವನ, ಜಪ, ಅಭಿಷೇಕ, ಯಜ್ಞಾದಿ ಮುಂತಾದ ಧಾರ್ಮಿಕಾಚರಣೆಗಳನ್ನು ಕೈಲಾಸಾಶ್ರಮ ಮತ್ತು ಓಂಕಾರಾಶ್ರಮಗಳ ಸ್ವಾಮೀಜಿಯವರ ನೇತೃತ್ವದಲ್ಲಿ ಏರ್ಪಡಿಸಿದೆ.
ಪ್ರವಚನ: ಪ್ರತಿದಿನ ನಡೆಯುವ ಧಾರ್ಮಿಕ ಸಭೆಯಲ್ಲಿ ಅನೇಕ ಧರ್ಮಾಚಾರ್ಯರು ಹಾಗೂ ವಿದ್ವಾಂಸರುಗಳಿಂದ ಪ್ರವಚನ ಏರ್ಪಡಿಸಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಧಾರ್ಮಿಕ ಸಭೆಯ ಜವಾಬ್ದಾರಿ ಹೊತ್ತಿದೆ. ಕುಂಭಮೇಳದಲ್ಲಿ ಭಾಗವಹಿಸಲಿರುವ ಅತಿಥಿಗಳು ಮತ್ತು ಭಕ್ತಾದಿಗಳೆಲ್ಲರಿಗೂ ಈ ಮೂರು ದಿನಗಳ ಕಾಲ ಆದಿಚುಂಚನಗಿರಿ ಹಾಗೂ ಸುತ್ತೂರು ಶ್ರೀಮಠಗಳಿಂದ ಅನ್ನದಾಸೋಹ ವ್ಯವಸ್ಥೆ ಮಾಡಿದೆ.
ಫೆ. 25 ಬ್ರಾಹ್ಮೀ ಮುಹೂರ್ತದಿಂದ ಮಹೋದಯ ಪುಣ್ಯಸ್ನಾನಕ್ಕೆ ಬೇಕಾದ ವ್ಯವಸ್ಥೆ ಮಾಡಿದೆ. ತ್ರಿವೇಣಿ ಸಂಗಮದಲ್ಲಿ ನದಿಯ ಸ್ವಚ್ಛತಾ ಕಾರ್ಯವನ್ನು ಬೈರಾಪುರ, ಗರ್ಗೇಶ್ವರಿ, ಬೆನಕನಹಳ್ಳಿ, ಆಲಗೂಡು ಪಂಚಾಯಿತಿಯವರೂ, ಟಿ. ನರಸೀಪುರದ ಟೌನ್ ಪಂಚಾಯಿತಿಯವರೂ ನಿರ್ವಹಿಸುತ್ತಿದ್ದಾರೆ.
3 ಕೋಟಿ ಬಿಡುಗಡೆ: ಜಿಲ್ಲಾಡಳಿತ, ಜಿಪಂ, ತಾಪಂ, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತಿತರ ಸರ್ಕಾರದ ವಿವಿಧ ಇಲಾಖೆಯವರು ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ತಂಗುದಾಣ, ಸ್ನಾನಘಟ್ಟ ನಿರ್ಮಾಣ, ತಾತ್ಕಾಲಿಕ ಸೇತುವೆ, ವಿದ್ಯುಚ್ಛಕ್ತಿ, ದೀಪಾಲಂಕಾರ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಜನಸಂದಣಿಯ ಬಂದೋಬಸ್ತ್ ಮತ್ತು ಸಾರ್ವಜನಿಕ ಕ್ಷೇಮ ಕಾರ್ಯಗಳ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ನಿರ್ವಹಿಸಿ, ಬರುವ ಭಕ್ತಾದಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ವತಿಯಿಂದ ಏರ್ಪಡಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎಸ್. ರಾಮೇಗೌಡ ವಿವರಿಸಿದರು.
ಕುಂಭಮೇಳಕ್ಕೆ ರಾಜ್ಯ ಸರ್ಕಾರ 3 ಕೋಟಿ ಬಿಡುಗಡೆ ಮಾಡಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವೈದ್ಯರು, ಜೀವರಕ್ಷಕರನ್ನು ನಿಯೋಜಿಸಲಾಗುತ್ತಿದೆ. ಎಲ್ಲೆಡೆಯಿಂದ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ಮರಳುಗಾರಿಕೆಯಿಂದ ಕುಂಭಮೇಳ ನಡೆಯುವ ಸ್ಥಳ ಹಾಳಾಗದಂತೆ ತಡೆಯಲು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವಿವಿಧ ಧರ್ಮಗುರುಗಳ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ಸಭೆ ಮತ್ತು ಸಮಾರಂಭಗಳಲ್ಲಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು, ಸಚಿವರು, ಸಂಸದರು, ಶಾಸಕರು, ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಮೂರು ವರ್ಷಕ್ಕೊಮ್ಮೆ ಈ ಕ್ಷೇತ್ರದಲ್ಲಿ ನಡೆಯುವ ಕುಂಭಮೇಳ ವ್ಯವಸ್ಥೆ ಮಾಡಲು ಸರ್ಕಾರವು ಸಂಪೂರ್ಣ ಸಹಾಯ, ಸಹಕಾರ, ನೆರವು ನೀಡುತ್ತಾ ಬಂದಿದೆ.
ಭಕ್ತಾದಿಗಳು ಈ ಎಲ್ಲ ಸೌಲಭ್ಯಗಳ ಪ್ರಯೋಜನ ಪಡೆದು, ಪೂಜಾಕಾರ್ಯದಲ್ಲಿ ಭಾಗವಹಿಸಿ, ಪುಣ್ಯಸ್ನಾನ ಮಾಡಿ ಕೃತಾರ್ಥರಾಗಬೇಕಾಗಿ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಮನವಿ ಮಾಡಿದರು.
500 ಪೊಲೀಸರಿಂದ ಸರ್ಪಗಾವಲು
ಕುಂಭಮೇಳ ಬಂದೋಬಸ್ತ್ ಕಾರ್ಯಕ್ಕೆ 500 ಪೊಲೀಸರನ್ನು ನಿಯೋಜಿಸಲಾಗುವುದು. ತಿರುಮಕೂಡಲು ಪ್ರವೇಶಿಸುವ ನಾಲ್ಕು ದಿಕ್ಕುಗಳಲ್ಲಿಯೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ವೀಕ್ಷಣಾ ಗೋಪುರ, ಸಿಸಿಟಿವಿ, ಧ್ವನಿವರ್ಧಕ ಯಂತ್ರದ ವ್ಯವಸ್ಥೆ ಮಾಡಲಾಗುವುದು. ಭಕ್ತಾದಿಗಳಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿ ಪ್ರಸಾರ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್. ದಿಲೀಪ್ ತಿಳಿಸಿದರು. ಉಪ ವಿಭಾಗಾಧಿಕಾರಿ ಬಸವರಾಜು, ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿ ಕೆ.ಎಂ. ನಾಗಣ್ಣಾಚಾರ್, ಮಾಜಿ ಶಾಸಕ ಎಚ್. ಗಂಗಾಧರನ್ ಇದ್ದರು.
ಕುಂಭಮೇಳಕ್ಕೆ ರಾಜ್ಯ ಸರ್ಕಾರ 3 ಕೋಟಿ ಬಿಡುಗಡೆ ಮಾಡಿದೆ. ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ವೈದ್ಯರು, ಜೀವರಕ್ಷಕರನ್ನು ನಿಯೋಜಿಸಲಾಗುತ್ತಿದೆ. ಎಲ್ಲೆಡೆಯಿಂದ ಬಸ್ ಸೌಕರ್ಯ ಕಲ್ಪಿಸಲಾಗುತ್ತಿದೆ. ಮರಳುಗಾರಿಕೆಯಿಂದ ಕುಂಭಮೇಳ ನಡೆಯುವ ಸ್ಥಳ ಹಾಳಾಗದಂತೆ ತಡೆಯಲು ಮುಂದೆ ಕ್ರಮ ಕೈಗೊಳ್ಳಲಾಗುವುದು.
- ಡಾ.ಕೆ.ಎಸ್. ರಾಮೇಗೌಡ, ಜಿಲ್ಲಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

