ದಾಂಪತ್ಯ ಜೀವನಕ್ಕೆ 141 ಜೋಡಿಗಳು...
ಮೈಸೂರು: ಅಲ್ಲಿ ಆಡಂಬರ ಇರಲಿಲ್ಲ, ಬಡವ ಬಲ್ಲಿದ ಎಂಬ ತಾರತಮ್ಯ ಗೋಚರಿಸಲಿಲ್ಲ, ಜಾತಿ ಧರ್ಮಗಳ ಭೇದಭಾವವಂತೂ ಕಾಣಲೇ ಇಲ್ಲ. ಎಲ್ಲಾ ವಧು ವರರಿಗೂ ಒಂದೇ ತೆರನಾದ ವಸ್ತ್ರಗಳು, ಶಾಸ್ತ್ರಗಳು, ವಿವಾಹ ಕಾರ್ಯಗಳು, ಭೋಜನಗಳು..
ಇದುವೇ ನಂಜನಗೂಡು ತಾಲೂಕು ಸುತ್ತೂರು ಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರಿಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಗುರುವಾರ ಕಂಡು ಬಂದ ವಿಶೇಷ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಸಮ್ಮುಖ ವಹಿಸಿದ್ದ ತುಮಕೂರು ಯಾದಗಿರಿಯ ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದ ಡಾ. ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಗುಲ್ಬರ್ಗ ಸುಲಫಲ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಿದ್ಧಲಿಂಗೇಶ್ವರ ವಿರಕ್ತ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರು ನೂತನ ವಧುವರರಿಗೆ ಆಶೀರ್ವದಿಸಿದರು.
ಕಾರ್ಯ ಶ್ಲಾಘನೀಯ: ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವೆ ಲೀಲಾವತಿ ಆರ್. ಪ್ರಸಾದ್ ಮಾತನಾಡಿ, ದುಬಾರಿ ವೆಚ್ಚದಲ್ಲಿ ಆಡಂಬರವಾಗಿ ಮದುವೆ ಮಾಡುತ್ತಿರುವ ಈ ಕಾಲದಲ್ಲಿ ಯಾವುದೇ ಅದ್ಧೂರಿ ಇಲ್ಲದೆ ಸಂಪ್ರದಾಯವಾಗಿ ಸಾಮೂಹಿಕ ವಿವಾಹ ನಡೆಸುತ್ತಾ ಬಂದಿರುವ ಶ್ರೀಮಠದ ಕಾರ್ಯ ಶ್ಲಾಘನೀಯ. ಪೋಷಕರಿಗೆ ಹೊರೆ ತಪ್ಪಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವಲ್ಲಿ ಇಂತಹ ಕಾರ್ಯಕ್ರಮ ಮಾದರಿ. ಇದನ್ನು ಆಯೋಜಿಸುತ್ತಿರುವ ಶ್ರೀಗಳ ಸಾಮಾಜಿಕ ಕಳಕಳಿ ಅನನ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ದಾಂಪತ್ಯಕ್ಕೆ ಕಾಲಿರಿಸಿರುವ ನೂತನ ವಧುವರರು ಕಷ್ಟ ಹಾಗೂ ಸುಖಗಳನ್ನು ಸಮಾನವಾಗಿ ಹಂಚಿಕೊಳ್ಳುವ ಮೂಲಕ ಸಾರ್ಥಕ ಸುಖಿ ಜೀವನ ನಡೆಸಬೇಕು ಎಂದರು.
ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಎಸ್. ದಯಾಶಂಕರ್, ಉದ್ಯಮಿಗಳಾದ ಗೀತಾ ವಿಷ್ಣು, ಕೊಯಮತ್ತೂರಿನ ಸಿ. ತಿರುಮಲೈತಂಬು, ಮೈಸೂರು ಎಸ್ಪಿ ಆರ್. ದಿಲೀಪ್, ನಂಜನಗೂಡು ತಹಸೀಲ್ದಾರ್ ಪ್ರಿಯದರ್ಶಿನಿ, ಜಿಪಂ ಮಾಜಿ ಅಧ್ಯಕ್ಷ ಕೆ.ಎನ್ ಪುಟ್ಟಬುದ್ಧಿ ಮತ್ತಿತರರಿದ್ದರು. ಉಡಿಗಾಲ ಕುಮಾರಸ್ವಾಮಿ ಸ್ವಾಗತಿಸಿದರು. ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ ನಿರೂಪಿಸಿದರು. ಚಿಕ್ಕಕಾನ್ಯ ಶಿವಮೂರ್ತಿ ವಂದಿಸಿದರು.
ಸಾಮೂಹಿಕ ವಿವಾಹದಲ್ಲಿ ತಮಿಳುನಾಡಿನ 4 ಜೋಡಿ ಸೇರಿದಂತೆ ಮೈಸೂರು, ಚಾಮರಾಜನಗರ, ಕನಕಪುರ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಒಟ್ಟು 141 ಜೋಡಿ ಸತಿಪತಿಗಳಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

