ವೃದ್ಧ ದಂಪತಿ ಕೊಲೆ: 13 ಮಂದಿ ಸೆರೆ
ಮೈಸೂರು: ವೃದ್ಧ ದಂಪತಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳನ್ನು ಇಲವಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ವಿಜಯನಗರದ ವೃದ್ಧ ದಂಪತಿ ಡಿ.ವೆಂಕಟೇಶ್ ಮತ್ತು ಅವರ ಪತ್ನಿ ಕಾಮಾಕ್ಷ್ಮಮ್ಮ ಕೊಲೆಯಾದವರು. ಇವರು ಮೈಸೂರು ತಾಲೂಕು ಇಲವಾಲ ಹೋಬಳಿ ಕಲ್ಲೂರು ನಾಗನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಗೆ ಹೋಗಿದ್ದು, ಜ.4ರ ರಾತ್ರಿ ಇವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು.
ಮಂಜುನಾಥ (25), ಇಂದ್ರ (20), ಕಾದಲ್ ರಾಮ (19), ಬಂಡೂಸ್ (24), ಮನ್ನಾ (25), ದೀಪಕ್ (25), ರೀಟಾ (35), ಕಾವ್ಯ (25), ಮೀನಾ (20), ಜಯಶ್ರೀ (21), ಗೌರಿ (25), ಮಾನಿ (60), ರವಿ ಅ. ಲಾಲ್ ಮಾಸಾಬ್ (70) ಬಂಧಿತರು. ಎಸಗುಂಡ ರಾಜೇಶ್ ಮತ್ತು ವೆಂಕಟೇಶ್ ಎಂಬವರು ತಲೆಮರೆಸಿಕೊಂಡಿದ್ದಾರೆ. ಬಂಧಿತರು ಹುಣಸೂರು ತಾಲೂಕಿನ ಪಕ್ಷಿರಾಜಪುರ, ಶಂಕಪುರಹಾಡಿ ನಿವಾಸಿಗಳಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಅವರ ಸಂಬಂಧಿಕರು ಆಗಿದ್ದಾರೆ.
ಇಲವಾಲ- ಹುಣಸೂರು ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ 7 ಜನರು ಡಕಾಯಿತಿಗೆ ಸಂಚು ಹಾಕುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 6 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದರು. ಆಗ 9 ಮಂದಿ ಸೇರಿಕೊಂಡು ವೃದ್ಧ ದಂಪತಿ ಕೊಲೆ ಮಾಡಿ, 130 ಗ್ರಾಂ. ಚಿನ್ನಾಭರಣ ಮತ್ತು 5 ಸಾವಿರ ದೋಚಿರುವುದು ಪತ್ತೆಯಾಗಿದೆ.
ಇದೇ ತಂಡದಲ್ಲಿ ಪ್ಲಾಸ್ಟಿಕ್ ಹೂ ತೋರಣ ಮಾರುವ ಸೋಗು ಹಾಕಿಕೊಂಡು ತೋಟದ ಮನೆಯ ಬಗ್ಗೆ ಮಾಹಿತಿ ನೀಡಿ ಕೃತ್ಯ ನಡೆಸಲು ಪ್ರೇರೆಪಿಸಿದ 4 ಜನ ಮಹಿಳೆಯರು ಹಾಗೂ ಕಳವು ಮಾಲು ಸ್ವೀಕರಿಸಿದ್ದ ಇಬ್ಬರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಡಕಾಯಿತರು....: ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕುಖ್ಯಾತ ಡಕಾಯಿತರಾಗಿದ್ದು, ಕೊಲೆ, ಸುಲಿಗೆ, ಲೂಟಿ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಆರೋಪಿತರ ಪೈಕಿ ಹಲವರು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಕೊಲೆ ಮಾಡಿರುವ ಬಗ್ಗೆ ಹಾಗೂ ರಾಜ್ಯದ ಚಿತ್ರದುರ್ಗ ಜಿಲ್ಲೆ ಭರಮಸಾಗರ, ಐಮಂಗಳ, ಬೆಳಗಾವಿ ಜಿಲ್ಲೆಯ ಕಿತ್ತೂರು, ಹಾಸನ ಜಿಲ್ಲೆಯ ರಾಮನಾಥಪುರ, ತುಮಕೂರು ಜಿಲ್ಲೆಯ ಶಿರಾ ಪೊಲೀಸ್ ಠಾಣೆ, ಆಂಧ್ರಪ್ರದೇಶದ ಕಡಪ ಜಿಲ್ಲೆ, ನಲ್ಲೂರು, ಯರಗುಂಡ್ಲ, ಅನಂತಪುರ ಜಿಲ್ಲೆಯ ತಾಡಪತ್ರಿ, ಚಿತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಹಲವಾರು ಹೆದ್ದಾರಿ ರಾಬರಿ, ಪೆಟ್ರೋಲ್ ಬಂಕ್ ಡಕಾಯಿತಿ, ಒಂಟಿ ಮನೆ ಡಕಾಯಿತಿಗಳಲ್ಲಿ ಭಾಗಿಯಾಗಿ, ಹಲವರಿಗೆ ಶಿಕ್ಷೆಯಾಗಿ ಹಲವರು ತಲೆಮರಿಸಿಕೊಂಡಿರುವುದು ಸೇರಿದಂತೆ ಇನ್ನೂ ಹಲವು ಪ್ರಕರಣಗಳು ವಿಚಾರಣಾ ಹಂತದಲ್ಲಿದೆ ಎಂದು ಎಸ್ಪಿ ಆರ್. ದಿಲೀಪ್ ವಿವರಿಸಿದ್ದಾರೆ. ಬಂಧಿತ 13 ಜನ ಆರೋಪಿಗಳನ್ನು ಮೈಸೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, 11 ಆರೋಪಿಗಳು ನ್ಯಾಯಾಂಗ ಬಂಧನಕ್ಕೆ, ಉಳಿದ ಇಬ್ಬರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

