ಅಸಮರ್ಪಕ ವಿದ್ಯುತ್ ಪೂರೈಕೆ: ಪ್ರತಿಭಟನೆ
ಕೊಳ್ಳೇಗಾಲ: ಅಸಮರ್ಪಕ ವಿದ್ಯುತ್ ಪೂರೈಕೆ ನೀತಿ ಖಂಡಿಸಿ ಮಂಗಳವಾರ ನೂರಾರು ರೈತರು ಸೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಮುಖಂಡ ನರಸಿಂಹನ್ ಮಾತನಾಡಿ, ಪ್ರತಿ ದಿನ ಗ್ರಾಮಾಂತರ ಪ್ರದೇಶಗಳಿಗೆ ಬೆಳಗ್ಗೆ 3 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್, ಸಂಜೆ 2 ಗಂಟೆಗಳ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಸೆಸ್ಕಾಂ ಇಲಾಖಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ ಆದೇಶದಂತೆ ಗ್ರಾಮಾಂತರ ಪ್ರದೇಶಕ್ಕೆ ವಿದ್ಯುತ್ ಸರಬರಾಜಾಗುತ್ತಿಲ್ಲ. ಅಧಿಕಾರಿಗಳು ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡ ಹಾಗೂ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಎಂ.ನಟರಾಜ ಮಾಳಿಗೆ ಮಾತನಾಡಿ, ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿಲ್ಲ. ಇದರಿಂದ ಬೆಳೆ ಒಣಗುತ್ತಿವೆ. ಅಧಿಕಾರಿಗಳಾದ ನೀವು ಹಿರಿಯ ಅಧಿಕಾರಿಗಳು ಹೊರಡಿಸಿರುವ ಆದೇಶದ ಪ್ರಕಾರ ನಡೆದುಕೊಳ್ಳಿ. ಇಲ್ಲವಾದರೆ ರೈತರ ಒಣಗಿದ ಪೈರು ಪರಿಶೀಲಿಸಿ ಎಕರೆಗೆ 50 ಸಾವಿರದಂತೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಮನವಿ ಆಲಿಸಿದ ಸೆಸ್ಕಾಂ ಇಇ ಶ್ರೀವರ ಮಾತನಾಡಿ, ಹಿರಿಯ ಅಧಿಕಾರಿಗಳ ಆದೇಶದ ಪ್ರಕಾರ ಕಳೆದ 1 ತಿಂಗಳ ಹಿಂದಿನವರೆಗೂ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ವಿದ್ಯುತ್ ಉತ್ಪಾದನಾ ಅಭಾವದಿಂದ ಪ್ರಸ್ತುತ ಆದೇಶ ಪಾಲಿಸಲಾಗುತ್ತಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಜೆಡಿಯು ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಧುಚಂದ್ರ, ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಒ.ಎ. ಸುಂದರರಾಜು, ರೈತ ಮುಖಂಡ ಪ್ರಭುಶಂಕರ, ಪುಟ್ಟರಾಜು, ಜಗದೀಶ, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

