ಚಾಮರಾಜನಗರ

ಗುದ್ದಲಿಪೂಜೆಗೆ ಗ್ರಾಮಸ್ಥರ ಅಡ್ಡಿ

Published On :

ಕೊಳ್ಳೇಗಾಲ: ಟಿಎಸ್ಪಿ ಯೋಜನೆಯಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಆಗಮಿಸಿದ ಹನೂರು ಶಾಸಕ ಆರ್.ನರೇಂದ್ರ ಹಾಗೂ ಸಂಸದ ಆರ್. ಧ್ರುವನಾರಾಯಣ ಅವರಿಗೆ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ತಾಲೂಕಿನ ಸರಗೂರಿನಲ್ಲಿ ನಡೆಯಿತು.
ಗ್ರಾಮದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ 10 ಲಕ್ಷ ಮಂಜೂರಾಗಿದ್ದ ಸಂಬಂಧ ಶಾಸಕರು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಪ್ರಾರಂಭಿಸುತ್ತಿದ್ದಂತೆ ಯುವಕರು, ಗ್ರಾಮದ ಮುಖಂಡರ ಗುಂಪೊಂದು ಅಡ್ಡಿಯುಂಟು ಮಾಡಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ಶಾಸಕರಾದ ತಾವು ಗುದ್ದಲಿಪೂಜೆ ನೆರವೇರಿಸಿ ಹೋದ ಕಾಮಗಾರಿಯೇ ಪೂರ್ಣವಾಗಿಲ್ಲ. ಮತ್ತೆ ಬೇರೆ ಕಾಮಗಾರಿ ಯಾಕೆ ಬೇಕು ಎಂದು ಖಾರವಾಗಿ ಪ್ರಶ್ನಿಸಿದ ಗ್ರಾಮಸ್ಥರು, ರಸ್ತೆ ನಿರ್ಮಾಣಕ್ಕೂ ಮುನ್ನ ಚರಂಡಿ ನಿರ್ಮಿಸಿ ಕಾಮಗಾರಿ ಕೈಗೊಳ್ಳಬೇಕು. ಚರಂಡಿ ನಿರ್ಮಿಸದೆ ಕಾಮಗಾರಿ ನಡೆಸುವ ನಿಮ್ಮ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಆರ್.ಧ್ರುವನಾರಾಯಣ ಮಧ್ಯೆ ಮಾತನಾಡಿ ಮುಖಂಡರನ್ನು ಸಮಾಧಾನಪಡಿಸಿದರು.
ನಂತರ ಮಾತನಾಡಿದ ಶಾಸಕ ನರೇಂದ್ರ, ನೀವೇ ಹಿಂದೆ ಗಲಾಟೆ ಮಾಡಿದ ಹಿನ್ನೆಲೆಯಲ್ಲಿ ಹಿಂದಿನ ಕಾಮಗಾರಿ ಸ್ಥಗಿತಗೊಂಡಿತ್ತು. ನೀವೇ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಿಂದಿನ ಗುತ್ತಿಗೆದಾರರಿಗೆ ಬಿಲ್ ನೀಡಿಲ್ಲ. ಈಗ ಒಟ್ಟಾಗಿ ಎರಡೂ ಕಾಮಗಾರಿ ಪೂರ್ಣಗೊಳಿಸೋಣ. ಸಹಕಾರ ನೀಡಿ ಎಂದು ಮನವಿ ಮಾಡಿದರು. ಎಲ್ಲರನ್ನೂ ಸಮಾಧಾನಪಡಿಸಿದ ನಂತರ ಗುದ್ದಲಿಪೂಜೆ ಸಾಂಗವಾಗಿ ನೆರವೇರಿತು.
ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾವಣಾ ಪ್ರಚಾರ: ತಾಲೂಕಿನ ಸತ್ತೇಗಾಲ ಹಾಗೂ ಮಧುವನಹಳ್ಳಿ ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಗೆ ಆಯ್ಕೆ ಮಾಡಿ 3 ಕೋಟಿಗೂ ಅಧಿಕ ಹಣ ಬಿಡುಗಡೆಗೊಳಿಸಲಾಗಿದೆ. ಮುಂದೆಯೂ ನನಗೆ ಅವಕಾಶ ನೀಡಿದರೆ ನಾನು ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ. 1 ಸಾವಿರ ನಿವೇಶನ ಕೊಡಿಸುತ್ತೇನೆ. ಎಡಕುರಿಯಾ ದ್ವೀಪ ಗ್ರಾಮದಲ್ಲೂ ಸೇತುವೆ ನಿರ್ಮಿಸುತ್ತೇನೆ ಎಂದು ಶಾಸಕ ಆರ್.ನರೇಂದ್ರ ಸರ್ಕಾರಿ ಕಾರ್ಯಕ್ರಮವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು.ಇದಕ್ಕೆ ಸಂಸದ ಧ್ರುವನಾರಾಯಣ ಸಾಥ್ ನೀಡಿ, ಉತ್ತಮ ಕೆಲಸ ಮಾಡುತ್ತಿರುವ ಶಾಸಕ ನರೇಂದ್ರ ಅವರನ್ನು  ಮುಂದಿನ ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.