ಸಮಸ್ಯೆ ಪರಿಗಣಿಸದ ಆರೋಗ್ಯ ಇಲಾಖೆ
ಕ.ಪ್ರ. ವಾರ್ತೆ ಬೀದರ್ ಜು.30
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮಸ್ಯೆ ಕುರಿತು ರಾಜ್ಯ ವೈದ್ಯಕೀಯ ವೈದ್ಯಾಧಿಕಾರಿಗಳ ಸಂಘ ಹತ್ತಾರು ವರ್ಷಗಳಿಂದ ಸರ್ಕಾರದ ಗಮನ ಸೆಳೆದರೂ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿಗಳ ಸಂಘ ಆರೋಪಿಸಿದೆ.
ಈ ಕುರಿತು ಸಂಘದಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ರಾಜ್ಯ ಆರೋಗ್ಯ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಕನಿಷ್ಠ ಸೌಜನ್ಯ ತೋರದೆ ಕಾರ್ಯದರ್ಶಿಗಳು ಇದೊಂದು ತಾಂತ್ರಿಕ ಇಲಾಖೆ ಇಲ್ಲಿ ಯಂತ್ರಗಳ ಅಥವಾ ಕಾಗದದ ಜೊತೆ ವ್ಯವಹರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಸರ್ಕಾರಿ ವೈದ್ಯರ ಮೇಲೆಯೇ ಪದೇ ಪದೆ ಗಧಾ ಪ್ರಹಾರ ಮಾಡುತ್ತ ಮನುಷ್ಯರು ಎನ್ನುವ ವಿವೇಚನೆ ಇಟ್ಟುಕೊಳ್ಳದೆ ಅವಮಾನಿಸಿ ವೈದ್ಯರ ಮಾನಸಿಕ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಐಎಎಸ್ ಅಧಿಕಾರಿ ನೇಮಕ ಮಾಡಿ: ಅವೈಜ್ಞಾನಿಕ ತೀರ್ಮಾನ ಕೈಗೊಳ್ಳುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಕೂಡಲೇ ವರ್ಗಾಯಿಸಿ ವೃತ್ತಿಯಲ್ಲಿ ವೈದ್ಯರಾಗಿರುವ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು.
ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಐ.ಎ.ಎಸ್/ಕೆ.ಎ.ಎಸ್. ಅಧಿಕಾರಿಗಳ ಬದಲಿಗೆ ನಮ್ಮ ಇಲಾಖೆಯಲ್ಲಿಯೇ ಇರುವ ದಕ್ಷ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು. ಜು.18ರಂದು ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶ ತಕ್ಷಣ ರದ್ದುಗೊಳಿಸಬೇಕು, ಆಹಾರ ಸುರಕ್ಷತಾ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ಅಂಕಿತ ಅಧಿಕಾರಿಗಳ ಹುದ್ದೆಗಳಿಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದರು.
ತಮಿಳುನಾಡು ಮಾದರಿಯಲ್ಲಿ ಆರೋಗ್ಯ ಇಲಾಖೆಯನ್ನು ಪುನರ್ ಸಂಘಟಿಸಿ, 1, 2 ಹಾಗೂ 3 ಸಾವಿರ ಜನಸಂಖ್ಯೆಗೆಲ್ಲಾ ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಪ್ರತಿ ಕೇಂದ್ರಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು. ಈ ಮೂಲಕ ದಿನದ 24 ಗಂಟೆಯೂ ನಾವು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಬಹುದಾಗಿದೆ.
ತಕ್ಷಣವೇ ಆರೋಗ್ಯ ಇಲಾಖೆ ನೇಮಕ ಪ್ರಕ್ರಿಯೆ ಕ್ರಮ ಕೈಗೊಳ್ಳಬೇಕು, ವರ್ಗಾವಣೆ ಕಾಯ್ದೆಗೆ ಆಮೂಲಾಗ್ರ ಬದಲಾವಣೆಯಾಗಬೇಕು, ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳುವಾಗ ನಮ್ಮ ಸಂಘದ ಜೊತೆ ಚರ್ಚಿಸಿ ತೀರ್ಮಾನಗೊಳ್ಳಬೇಕು ಎಂದು ಆಗ್ರಹಿಸಿದರು.
ಈಡೇರಿಸದಿದ್ದರೆ ಹೋರಾಟ: ಸಂಘದ ಬೇಡಿಕೆಗಳನ್ನು ಆ.15ರೊಳಗೆ ಈಡೇರಿಸದಿದ್ದರೆ ಜು.27ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿಯ ತೀರ್ಮಾನವಾಗಿದಂತೆ ಮುಂದಿನ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಕಿರಣ ಪಾಟೀಲ, ಡಾ. ಅನಿಲಕುಮಾರ ಎಕಲೂರೆ, ಡಾ. ಲೋಕೇಶ ಹೊಸಮನಿ, ಡಾ. ಸಂತೋಷ ಕಾಳೆ, ಡಾ. ಶರಣಯ್ಯಾ ಸ್ವಾಮಿ, ಡಾ. ಶಿವಶಂಕರ ಬಿ, ಡಾ. ರಾಜಶೇಖರ ಪಾಟೀಲ, ಡಾ. ಶಂಕ್ರೆಪ್ಪಾ ಬೊಮ್ಮಾ, ಡಾ. ಕೃಷ್ಣಾರೆಡ್ಡಿ, ಡಾ. ಶಾಂತಲಿಂಗ ಪಾಟೀಲ, ಡಾ. ಮಹಾದೇವ ಮಾಳಗೆ, ಡಾ. ವಿಕ್ರಮ ದೇವಪ್ಪಾ, ಡಾ. ರವೀಂದ್ರ ಸಿರಸಗೆ, ಡಾ. ರವಿ ಕಲಶೆಟ್ಟಿ, ಡಾ. ಅನೀಲ ಚಿಂತಾಮಣಿ, ಡಾ. ಅಹ್ಮದ್, ಡಾ. ಪದ್ಮರಾಜ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

